ಟಾಪ್ 3 ನ್ಯೂಸ್ ಕರ್ನಾಟಕ
– ಕೊಲೆಯಾದ ರೇಣುಕಾಸ್ವಾಮಿಗೆ ಗಂಡು ಮಗು ಜನನ!
– ಹೊಲದಲ್ಲಿ ಕಲ್ಲು ಉರುಳಿ ಮಕ್ಕಳಿಬ್ಬರು ಸೇರಿ ಮೂವರು ಸಾವು
– ಅತ್ಯಾಚಾರ ಪ್ರಕರಣ: ಜೈಲಿಂದ ಬಿಡುಗಡೆಯಾದ ಶಾಸಕ ಮುನಿರತ್ನ: ಪಟಾಕಿ ಹೊಡೆದು, ಹೂ ಹಾರ ಹಾಕಿ ಸ್ವಾಗತಿಸಿದ ಅಭಿಮಾನಿಗಳು!
NAMMUR EXPRESS NEWS
ಚಿತ್ರದುರ್ಗ: ನಟ ದರ್ಶನ್ ಗ್ಯಾಂಗಿನಿಂದ ಭೀಕರವಾಗಿ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಗೆ ಮಗು ಜನನವಾಗಿದೆ. ರೇಣುಕಾಸ್ವಾಮಿ ಕೊಲೆಯಾದಾಗ ಪತ್ನಿ ಸಹನಾ ಐದು ತಿಂಗಳ ಗರ್ಭಿಣಿಯಾಗಿದ್ದರು. ಈ ನೋವು ಇಡೀ ಕುಟುಂಬವನ್ನು ಬಾಧಿಸಿತ್ತು. ಅಕ್ಟೋಬರ್ 16 ಬುಧವಾರ ಬೆಳಗ್ಗೆ 5 ಗಂಟೆಗೆ ಚಿತ್ರದುರ್ಗದ ಜೆಸಿಆರ್ ಬಡಾವಣೆಯಲ್ಲಿರುವ ಕೀರ್ತಿ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಸಹನಾ ದಂಪತಿಗೆ ಗಂಡು ಮಗು ಜನನವಾಗಿದೆ.ಮಗುವಿನ ತೂಕ 2 kg 200 ಗ್ರಾಂ ಇದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಹೆರಿಗೆ ಹಾಗೂ ಚಿಕಿತ್ಸೆಯ ಎಲ್ಲಾ ವೆಚ್ಚಗಳನ್ನು ಕೀರ್ತಿ ಆಸ್ಪತ್ರೆಯ ಡಾ.ಮಲ್ಲಿಕಾರ್ಜುನ ಕೀರ್ತಿ ಉಚಿತ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮಗನ ಸಾವಿನ ದುಃಖದಲ್ಲಿದ್ದ ಕುಟುಂಬಕ್ಕೆ ಮೊಮ್ಮಗನ ಆಗಮನ ತುಸು ನೆಮ್ಮದಿ ಹಾಗೂ ಸಂತಸ ಮೂಡಿಸಿದೆ.
ಅತ್ಯಾಚಾರ ಪ್ರಕರಣ: ಜೈಲಿಂದ ಬಿಡುಗಡೆಯಾದ ಶಾಸಕ ಮುನಿರತ್ನ
ಬೆಂಗಳೂರು: ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅತ್ಯಾಚಾರ ಕೇಸ್ನಲ್ಲಿ ಜೈಲು ಸೇರಿದ್ದ ಮುನಿರತ್ನ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನೀಡಿದದ್ದು ಪರಪ್ಪನ ಅಗ್ರಹಾರ ಜೈಲಿಂದ ಹೊರ ಬಂದಿದ್ದಾರೆ. ಅಭಿಮಾನಿಗಳು ಪಟಾಕಿ ಹೊಡೆದು ಹಾರ ಹಾಕಿ ಬರ ಮಾಡಿಕೊಂಡಿದ್ದಾರೆ.
ಮೊದಲಿಗೆ ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಕೇಸ್ನಲ್ಲಿ ಮುನಿರತ್ನ ಅವರ ಬಂಧನವಾಗಿತ್ತು. ಬಳಿಕ ಈ ಕೇಸ್ನಲ್ಲಿ ಜಾಮೀನು ಕೂಡ ಸಿಕ್ಕಿ ಹೊರಬರುವಷ್ಟರಲ್ಲಿ ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ರೇಪ್ ಕೇಸ್ ದಾಖಲಿಸಿದ್ದರು. ಬಳಿಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು.ತಿಂಗಳಿಗೂ ಹೆಚ್ಚು ಮುನಿರತ್ನ ಜೈಲುವಾಸದಲ್ಲಿದ್ದರು.ಅ. 15ರಂದು ಜಾಮೀನು ಸಿಕ್ಕಿರುವ ಹಿನ್ನೆಲೆ ಮುನಿರತ್ನ ರಿಲೀಫ್ ಆಗಿದ್ದಾರೆ.
ಬೃಹತ್ ಗಾತ್ರದ ಕಲ್ಲು ಬಂಡೆ ಬಿದ್ದು,ಅಣ್ಣ-ತಂಗಿ ಸ್ಥಳದಲ್ಲೇ ಸಾವು!
ಬೆಂಗಳೂರು: ಬೃಹತ್ ಗಾತ್ರದ ಕಲ್ಲು ಬಂಡೆ ಬಿದ್ದು ಅಣ್ಣ-ತಂಗಿ ಸ್ಥಳದಲ್ಲೇ ಮೃತಪಟ್ಟು, ಗಂಭೀರವಾಗಿ ಗಾಯಗೊಂಡ ಯುವಕ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಲಿಂಗಸೂಗೂರು ತಾಲ್ಲೂಕು ಗೌಡುರು ತಾಂಡದಲ್ಲಿ ಈ ಘಟನೆ ನಡೆದಿದೆ. ಮಂಜುನಾಥ ಮಾನಪ್ಪ(9), ವೈಶಾಲಿ ಮಾನಪ್ಪ(7) ಅಣ್ಣ-ತಂಗಿಯಾದರೆ, ಮತ್ತೋರ್ವ ಯುವಕ ರಘು ಸಾವನ್ನಪ್ಪಿದವರು. ಹೊಲದಲ್ಲಿ ಆಟವಾಡಲು ತೆರಳಿದ ಮಕ್ಕಳ ಮೈಮೇಲೆ ದೊಡ್ಡ ಗಾತ್ರದ ಕಲ್ಲು ಬಿದ್ದಿದೆ ನೋವು ತಾಳಲಾರದೇ ಮಕ್ಕಳು ಜೋರಾಗಿ ಚೀರಾಡಿದ್ದಾರೆ. ಆದರೆ ಬೃಹತ್ ಗಾತ್ರದ ಕಲ್ಲು ಆಗಿದ್ದರಿಂದ ಅವರಿಗೆ ತಕ್ಷಣವೇ ಹೊರಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ಇಬ್ಬರೂ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ರಘು ಎಂಬ ಯುವಕ ಗಾಯಗೊಂಡಿದ್ದ. ಆತನನ್ನು ಕರೆದೊಯ್ಯುವಾಗ ಸ್ಥಳೀಯ ಆಸ್ಪತ್ರೆಗೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.