ರಾಜ್ಯದಾದ್ಯಂತ ಭಾರಿ ಮಳೆ: ಜನ ತತ್ತರ!
* ಅ.21,22ರಂದು ಹವಾಮಾನ ಮುನ್ಸೂಚನೆ: ಎಲ್ಲೆಲ್ಲಿ ಮಳೆ?
* ಕರಾವಳಿ, ಮಲೆನಾಡಲ್ಲಿ ಮಳೆ ನಿಲ್ಲಲ್ಲ
* ಬೆಂಗಳೂರು ಶಾಲೆಗಳಿಗೆ ರಜೆ, ಶಿವಮೊಗ್ಗದಲ್ಲಿ ಮುಂದುವರಿದ ಮಳೆ
* ರಾಜ್ಯದ ಬಹುತೇಕ ಕಡೆ ಬೆಳೆ ಹಾನಿ: ದರ ಏರಿಕೆ ಸಾಧ್ಯತೆ
NAMMUR EXPRESS NEWS
ಬೆಂಗಳೂರು: ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಆರೆಂಜ್ ಎಚ್ಚರಿಕೆ ನೀಡಲಾಗಿದೆ. ಅ.22ರಂದು ಯಲ್ಲೋ ಎಚ್ಚರಿಕೆ ನೀಡಲಾಗಿದೆ.ಹಾಗಾಗಿ ಇನ್ನೆರಡು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ
ಅ.20 ದಿನ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಇವತ್ತು ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರವಾದ ಸಾಧಾರಣ ಮಳೆ /ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿನ ಸ್ಥಳಗಳಲ್ಲಿ ಹಗುರವಾದ ಸಾಧಾರಣ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಇನ್ನೂ ಎನ್ಡಿಆರ್ಎಫ್ ಆಪ್ ಪ್ರಕಾರ, ಇವತ್ತು ಶಿವಮೊಗ್ಗದಲ್ಲಿ ಬೆಳಗ್ಗೆ ಒಂಬತ್ತು ಗಂಟೆಯಿಂದ ಸಂಜೆಯವರೆಗೂ ಭಾರೀ ಮಳೆಯ ಮನ್ಸೂಚನೆ ನೀಡಲಾಗುತ್ತದೆ. ಗರಿಷ್ಟ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ತಿಳಿಸುತ್ತದೆ, ಭಾರೀ ಮಳೆಯ ಮನ್ಸೂಚನೆ ಇದೆ. ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 22ರಂದು ಹಳದಿ ಅಲರ್ಟ್ ಘೋಷಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಸತತ ಮಳೆ ಹಿನ್ನೆಲೆಯಲ್ಲಿ ಜನ-ಜೀವನ ಅಸ್ತವ್ಯಸ್ತ
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ರಸ್ತೆಗಳು ಕೆರೆಯಂತಾಗಿ ಮಾರ್ಪಾಡಾಗಿದೆ. ಈ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಖಾಸಗಿ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಬೆಂಗಳೂರು ನಗರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಜಿ ಮೌಖಿಕವಾಗಿ ಆದೇಶಿಸಿದ್ದಾರೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ , ಐ.ಟಿ.ಐ ಗಳಿಗೆ ರಜೆ ಘೋಷಿಸಿರುವುದಿಲ್ಲ. ತುರ್ತು ನಿರ್ಧಾರವಾದ ಕಾರಣ ಮೌಖಿಕವಾಗಿ ಆದೇಶಿಸಿದ್ದು, ಅಧಿಕೃತ ಆದೇಶವನ್ನು ಹೊರಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮುಂಜಾಗೃತಾ ಕ್ರಮವಾಗಿ ರಜೆಯನ್ನು ನೀಡಿ ಉಂಟಾಗಿರುವ ಕಲಿಕಾ ಸಮಯ ಕೊರತೆಯನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರಗಳಂದು ಹೆಚ್ಚುವರಿ ತರಗತಿಗಳನ್ನು ನಡೆಸಿ ನಷ್ಟವನ್ನು ಸರಿದೂಗಿಸುವಂತೆ ತಿಳಿಸಿದೆ. ವಿದ್ಯಾರ್ಥಿಗಳ ಪೋಷಕರು/ಕಾಲೇಜು ಮುಖ್ಯಸ್ಥರು, ವಿದ್ಯಾರ್ಥಿಗಳು ನೀರು ಇರುವ ತಗ್ಗು ಪ್ರದೇಶಗಳಿಗೆ ಹೋಗದಂತೆ ಜಾಗ್ರತೆ ವಹಿಸುವುದು. ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗುವ ವಾಹನಗಳ ಸುರಕ್ಷತೆಯನ್ನು ನೋಡಿಕೊಳ್ಳುವುದು. ಕಾಲೇಜುಗಳಲ್ಲಿ ಪ್ರಾಕೃತಿಕ ವಿಕೋಪ ನಿಭಾಯಿಸುವ ಬಗ್ಗೆ, ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
– ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲೂ ಭಾರಿ ಮಳೆ ಎಚ್ಚರಿಕೆ
ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶದಲ್ಲೇ ಭಾರಿ ಮಳೆಯಾಗುತ್ತಿದೆ. ಹಿಂಗಾರು ಮಳೆಗೆ ಪಶ್ಚಿಮಘಟ್ಟಗಳ ತಪ್ಪಲು ಅಲ್ಲೋಲ -ಕಲ್ಲೋಲವಾಗಿದೆ. ಚಿಕ್ಕಮಗಳೂರಿನ ದತ್ತಪೀಠದ ರಸ್ತೆಯಲ್ಲಿ 3 ಅಡಿ ಎತ್ತರದಲ್ಲಿ ನೀರು ಹರಿದಿದೆ. ಎಷ್ಟೇ ಮಳೆ ಬಂದರೂ ಪಶ್ಚಿಮ ಘಟ್ಟಕ್ಕೆ ಲೆಕ್ಕವೇ ಅಲ್ಲ, ಸಾವಿರಾರು ಅಡಿ ಆಳ, ಮುಗಿಲೆತ್ತರದ ಬೆಟ್ಟಗುಡ್ಡಗಳ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಕೆರೆಯಂತೆ ನೀರು ಹರಿಯುತ್ತಿದೆ. ಕಾಫಿನಾಡ ಮಹಾಮಳೆಗೆ ಮಲೆನಾಡು ಭಾಗದ ಜನರು ಕಂಗಾಲಾಗಿದ್ದಾರೆ. ಭಾರೀ ಮಳೆಗೆ ಗ್ರಾಮೀಣ ಭಾಗದ ಸೇತುವೆಗಳು ಜಲಾವೃತಗೊಂಡಿದೆ. ಮುತ್ತೋಡಿ ವ್ಯಾಪ್ತಿಯ ಗ್ರಾಮದ ಜನ ಹಳ್ಳ ದಾಟಲು ಪರದಾಡಿದರು. ವೃದ್ಧೆಯನ್ನ ಹಳ್ಳಿಗರು ಅಂಗೈಲಿ ಹೊತ್ತು ಸಾಗಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲಗಾರು ಗ್ರಾಮದಲ್ಲಿ ನಡೆದಿದೆ. ಮಲಗಾರು ಗ್ರಾಮ ಮುತ್ತೋಡಿ ಅರಣ್ಯ ವ್ಯಾಪ್ತಿಯ ಕುಗ್ರಾಮ ಇದಾಗಿದೆ. ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು, ಕಿರು ಸೇತುವೆ ತುಂಬಿ ಹೋಗಿದೆ. ಇತ್ತ ಕಳೆದ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಶಿವಮೊಗ್ಗ ನಗರದಲ್ಲಿ ರಾತ್ರಿಯಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ನಗರದ ದೇವರಾಜು ಅರಸು ಬಡಾವಣೆಯ ಮನೆಗಳು ಜಲಾವೃತಗೊಂಡಿದೆ. ರಸ್ತೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಜನರ ಓಡಾಟಕ್ಕೂ ಸಂಕಷ್ಟ ಎದುರಾಗಿದೆ.