ತೀರ್ಥಹಳ್ಳಿಯ ರಸ್ತೆ ಅವ್ಯವಸ್ಥೆ: ಎಲ್ಲೆಲ್ಲೂ ಹೊಂಡ ಸ್ವಾಮಿ!
– ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಸಂಖ್ಯೆ,ಅಪಘಾತ ಹೆಚ್ಚಳ
– ಜನಪ್ರತಿನಿಧಿಗಳು, ಅಧಿಕಾರಿಗಳು ನಿದ್ರೆಯಲ್ಲಿ: ಪಾರ್ಕಿಂಗ್ ಪರದಾಟ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರತಿ ದಿನ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ತಿಂಗಳು ಕನಿಷ್ಟ 300 ಹೊಸ ವಾಹನಗಳು ಹೊಸದಾಗಿ ರಸ್ತೆಗಿಳಿಯುತ್ತವೆ. ಅದರ ಜೊತೆ ತೀರ್ಥಹಳ್ಳಿ ಮೂಲಕ ಹಾದು ಹೋಗುವ ಲಘು ವಾಹನ ಹಾಗೂ ಸರಕು ಸಾಗಣೆ ವಾಹನಗಳ ಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗುತ್ತಿದೆ. ಈ ನಡುವೆ ತೀರ್ಥಹಳ್ಳಿ ಪಟ್ಟಣದಲ್ಲೇ ರಸ್ತೆ ಹೊಂಡ ಗುಂಡಿ ಇದೀಗ ಜನರ ತೊಂದರೆಗೆ ಕಾರಣವಾಗಿದೆ. ತೀರ್ಥಹಳ್ಳಿ ಪಟ್ಟಣದ ಸೀಬಿನಕೆರೆ ಮಾರ್ಗ, ಸೊಪ್ಪುಗುಡ್ಡೆ, ಬೆಟ್ಟಮಕ್ಕಿ ಸೇರಿದಂತೆ ಎಲ್ಲೆಡೆ ನೂರಾರು ಗುಂಡಿಗಳು ಬಲಿಗಾಗಿ ಕಾದಿವೆ. ಕೂಡಲೇ ಶಾಸಕರು, ಜನಪ್ರತಿನಿದಿಗಳು, ಇಲಾಖೆ ಅಧಿಕಾರಿಗಳು ಗಮನ ವಹಿಸಬೇಕಿದೆ.
ಪ್ರಯಾಣಿಕರ ಪಾರ್ಕಿಂಗ್ ಪರದಾಟ
ಹೆದ್ದಾರಿಗಳನ್ನು, ಪಟ್ಟಣದೊಳಗೆ ಹಾದು ಹೋಗುವ ರಸ್ತೆಗಳನ್ನು ಮುಂದಿನ 25-30 ವರ್ಷಗಳ ವಾಹನದಟ್ಟಣೆಗನುಗುಣವಾಗಿ ಮುಂದಾಲೋಚನೆಯೊಂದಿಗೆ ನಿರ್ಮಿಸಬೇಕು. ಆದರೆ ತೀರ್ಥಹಳ್ಳಿ ಪಟ್ಟಣದ ಮುಖ್ಯ ರಸ್ತೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಿಲ್ಲ. ಅರ್ಧ ರಸ್ತೆಪಾರ್ಕಿಂಗ್ ಗೆ, ಅರ್ಧ ರಸ್ತೆ ಒಂದೇ ವಾಹನ ಸಂಚಾರಕ್ಕೆ ಸೀಮಿತವಾಗಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಿಸುವ ಸಂದರ್ಭದಲ್ಲೇ ಒಂಚೂರು ವಿವೇಚನೆಯಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಕೆಲಸ ಮಾಡಿದ್ದರೆ ಇವತ್ತಿನ ಅವ್ಯವಸ್ಥೆ ತಡೆಯಬಹುದಿತ್ತು. ಪಟ್ಟಣದಲ್ಲಿ ವಾಹನ ನಿಲುಗಡೆಯೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಎರಡೂವರೆ ಕಿಲೋಮೀಟರ್ನನಷ್ಟಿರುವ ತೀರ್ಥಹಳ್ಳಿ ಪಟ್ಟಣದ ಮುಖ್ಯ ರಸ್ತೆ ಹಾದು ಹೋಗಲು ಕನಿಷ್ಟ 10 ನಿಮಿಷ ಬೇಕಾಗುತ್ತಿದೆ. ಸ್ವಲ್ಪ ಜನದಟ್ಟಣೆ ಇದ್ದರೆ ವಾಹನ ಸಂಚಾರವೇ ಸಾಕಪ್ಪ ಎನಿಸದಿರದು. ಸುಂದರ ಪಟ್ಟಣ ತೀರ್ಥಹಳ್ಳಿಗೆ ರಸ್ತೆ ಅವ್ಯವಸ್ಥೆಯೇ ಶಾಪವಾಗುತ್ತಿದೆ.
ವ್ಯಾಪಾರಕ್ಕೂ ಹೊಡೆತ: ನಿಲ್ಲಿಸುವ ಹಾಗಿಲ್ಲ
ತೀರ್ಥಹಳ್ಳಿ ಪಟ್ಟಣದಲ್ಲಿ ಸಾಗಿ ಹೋಗುವ ಪರ ಊರುಗಳ ವಾಹನ ಸವಾರರು, ಪ್ರಯಾಣಿಕರು ಪೇಟೆಯೊಳಗೆ ಒಂದು ಕ್ಷಣ ವಾಹನ ನಿಲ್ಲಿಸಿ ಹೋಟೆಲ್ನಲ್ಲಿ ತಿಂಡಿ ತಿಂದರೆ, ಅಂಗಡಿಗಳಲ್ಲಿ ಏನಾದರೂ ಒಂದಷ್ಟು ಖರೀದಿ ಮಾಡಿದರೆ ಸ್ಥಳೀಯ ವ್ಯಾಪಾರಸ್ಥರಿಗೂ ಊರಿನ ಆರ್ಥಿಕತೆಗೂ ಸಹಕಾರಿಯಾಗುತ್ತದೆ. ಆದರೆ ತೀರ್ಥಹಳ್ಳಿ ಪೇಟೆ ಒಳಗೆ ಸಣ್ಣ ಕಾರು ನಿಲ್ಲಿಸಲೂ ಸಾಧ್ಯವಿಲ್ಲದಂತಾಗಿದೆ. ಇದು ವ್ಯಾಪಾರಸ್ಥರಿಗೆ ದೊಡ್ಡ ಹೊಡೆ ಕೊಡುತ್ತಿದೆ.