ಚಿತ್ರದುರ್ಗ ಟಾಪ್ ನ್ಯೂಸ್
– ಮಳೆ ಆರ್ಭಟ,ಚಿತ್ರದುರ್ಗದಲ್ಲಿ ಜನರ ಪರದಾಟ!
– ಟ್ರ್ಯಾಕ್ಟರ್ ನೀರಿನ ರಭಸಕ್ಕೆ ಸಿಲುಕಿದ ಅವಾಂತರ!!
– ನಾಯಕನಹಟ್ಟಿ ಪೊಲೀಸ್ ಠಾಣೆಗೆ ನುಗ್ಗಿದ ನೀರು!
– ಸುರಿದ ಮಳೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ 48 ಮನೆ ಹಾನಿ!
NAMMUR EXPRESS NEWS
ಚಿತ್ರದುರ್ಗ: ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠ ಜಲಾವೃತವಾಗಿದೆ. ನಾಯಕನಹಟ್ಟಿ ಭಾಗದಲ್ಲಿ ಸಾಕಷ್ಟು ಮಳೆಯಾಗಿದ್ದು, ಗ್ರಾಮದ ಒಳಗಿನಿಂದ ನೀರು ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಇಲ್ಲಿನ ದೊಡ್ಡ ಹಳ್ಳ ತುಂಬಿ ಹರಿಯುತ್ತಿದೆ. ಮೊಳಕಾಲ್ಕೂರು ತಾಲೂಕಿನಲ್ಲೂ ಸಾಕಷ್ಟು ಮಳೆಯಾಗಿದ್ದು, ಗಜ್ಜುಗಾನಹಳ್ಳಿ ಬಳಿ ರಸ್ತೆಯಲ್ಲಿ ನೀರು ಹರಿಯುತ್ತಿರುವುದು ಹಳ್ಳದಂತೆ ಭಾಸವಾಗುತ್ತಿದೆ.
ಸೈಜುಗಲ್ಲು ತುಂಬಿದ್ದ ಟ್ರ್ಯಾಕ್ಟರ್ ನೀರಿನ ರಭಸಕ್ಕೆ ಸಿಲುಕಿ ಪರದಾಡುವ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಗೆ ಸಮೀಪದ ಕೋಡಿಹಳ್ಳಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ತಿಪ್ಪಯ್ಯನಕೋಟೆ ಗ್ರಾಮದ ಒಳಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
– ಮಳೆ ಆರ್ಭಟ,ನಾಯಕನಹಟ್ಟಿ ಪೊಲೀಸ್ ಠಾಣೆಗೆ ನುಗ್ಗಿದ ನೀರು!
ಚಿತ್ರದುರ್ಗ: ಜಿಲ್ಲೆಯಲ್ಲಿ ಮತ್ತೆ ಮಳೆಯ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದಾಗಿ ನಾಯಕನಹಟ್ಟಿ ಪೊಲೀಸ್ ಠಾಣೆಗೆ ಮತ್ತೊಮ್ಮೆ ನೀರು ನುಗ್ಗಿದೆ. ಮೂರು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ನೀರು ತುಂಬಿದ್ದ ಠಾಣೆಯನ್ನು ಪೊಲೀಸರು ಸ್ವಚ್ಛಗೊಳಿಸಿ ದಿನ ಕಳೆಯುವುದರ ಒಳಗಾಗಿ ಮತ್ತೆ ನೀರು ತುಂಬಿದೆ. ಬರೋಬ್ಬರಿ ಮೊಳಕಾಲುದ್ದದವರೆಗೆ ನೀರು ತುಂಬಿದ್ದರಿಂದ ಪೊಲೀಸರು ಕಡತಗಳನ್ನು ನೀರಿನಿಂದ ರಕ್ಷಿಸಲು ರಾತ್ರಿ ಹರಸಾಹಸ ಮಾಡುವಂತಾಯಿತು.
ಕಬೋರ್ಡ್, ಬೀರುಗಳಲ್ಲಿದ್ದ ಕಡತದ ಗಂಟುಗಳನ್ನು ಎತ್ತಿ ಟೇಬಲ್ಗಳ ಮೇಲಿಡುವ ದೃಶ್ಯ ಸೆರೆಯಾಗಿದೆ.
ಈಗಾಗಲೇ ನಾಯಕನಹಟ್ಟಿ ಸಣ್ಣ ಕೆರೆ ತುಂಬಿ ಕೋಡಿ ಬಿದ್ದಿದ್ದು, ಅಪಾರ ಪ್ರಮಾಣದ ಮಳೆಯಾಗುತ್ತಿರುವುದು ಒಂದು ಲೆಕ್ಕದಲ್ಲಿ ಆತಂಕ ಮೂಡಿಸುತ್ತಿದೆ.
– ಸುರಿದ ಮಳೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ 48 ಮನೆ ಹಾನಿ!
ಚಿತ್ರದುರ್ಗ: ಅ. 20ರಂದು ರಾತ್ರಿ ಸುರಿದ ಮಳೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ 48 ಮನೆ ಹಾನಿಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 14.3 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 2 ಮಿ.ಮೀ, ನಾಯಕನಹಟ್ಟಿ 22.3 ಮಿ.ಮೀ, ಪರಶುರಾಂಪುರ 1.3 ಮಿ.ಮೀ, ತಳಕು 7.4 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 11.5 ಮಿ.ಮೀ, ಭರಮಸಾಗರ 33.9 ಮಿ.ಮೀ, ಹಿರೇಗುಂಟನೂರು 15.5 ಮಿ.ಮೀ, ತುರುವನೂರು 16.4 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರು 22.5 ಮಿ.ಮೀ, ಐಮಂಗಲ 8.3 ಮಿ.ಮೀ, ಧರ್ಮಪುರ 3.3 ಮಿ.ಮೀ, ಜವನಗೊಂಡನಹಳಿ. 3.6 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 31.1 ಮಿ.ಮೀ, ಬಿ.ದುರ್ಗ 32.6 ಮಿ.ಮೀ, ರಾಮಗಿರಿ 31.3 ಮಿ.ಮೀ, ತಾಳ್ಯ 10.8 ಮಿ.ಮೀ ಮಳೆಯಾಗಿದೆ. ಹೊಸದುರ್ಗದಲ್ಲಿ 13.5 ಮಿ.ಮೀ, ಮಾಡದಕೆರೆ 15.9 ಮಿ.ಮೀ, ಮತ್ತೋಡು 16.2 ಮಿ.ಮೀ, ಶ್ರೀರಾಂಪುರ 10.2 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮರಿನಲ್ಲಿ 29.9 ಮಿ.ಮೀ ಹಾಗೂ ದೇವಸಮುದ್ರದಲ್ಲಿ 19.8 ಮಿ.ಮೀ ಮಳೆಯಾಗಿದೆ.