ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಶುರು: 24 ಗಂಟೆ ದರ್ಶನ!
– ಸಿದ್ಧತಾ ಕಾರ್ಯ ಬಹುತೇಕ ಪೂರ್ಣ: ದೀಪಾಲಂಕಾರ ವೀಕ್ಷಣೆಗೆ ಡಬಲ್ ಡೆಕ್ಕರ್ ಬಸ್
– ಇಸ್ಕಾನ್ ಹೆಗಲಿಗೆ ಲಾಡು-ಪ್ರಸಾದ ಹಂಚುವ ಹೊಣೆ
NAMMUR EXPRESS NEWS
ಹಾಸನ: ನಗರದ ಅಧಿದೇವತೆ, ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬೆ ದೇವಿಯ ದರ್ಶನೋತ್ಸವ ಇದೇ ತಿಂಗಳ ೨೪ ರಿಂದ ನ.೩ ರವರೆಗೆ ನಡೆಯಲಿದ್ದು, ಗುರುವಾರ ಮಧ್ಯಾಹ್ನ ೧೨ ಗಂಟೆಗೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ. ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಡಾ.ಶ್ರೀ ನಿರ್ಮಲಾ ನಂದನಾಥ ಮಹಾಸ್ವಾಮೀಜಿ ಹಾಗೂ ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಉಪಸ್ಥಿತ ರಿರುವರು.ನ.೩ ರ ಮಧ್ಯಾಹ್ನ ೧೨ ಗಂಟೆಗೆ ದೇವಾಲಯದ ಬಾಗಿಲು ಶಾಸ್ತ್ರೋಕ್ತವಾಗಿ ಮುಚ್ಚಲಿದೆ.
ಈ ಬಾರಿ ದಿನದ ೨೪ ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ದರ್ಶನಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯಗಳಾದ ಮಳೆ-ಬಿಸಿಲಿನಿಂದ ಭಕ್ತರು ಆಶ್ರಯ ಪಡೆಯಲು ಜರ್ಮನ್ ಟೆಂಟ್ ನಿರ್ಮಾಣ, ಬ್ಯಾರಿಕೇಡಿಂಗ್, ಫ್ಯಾನ್ಸ್, ಮ್ಯಾಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಿಂದಿಗಿಂತ ವಿಜೃಂಭಣೆಯಿಂದ ಈ ಬಾರಿ ನಗರದ ಪ್ರಮುಖ ರಸ್ತೆ ಹಾಗೂ ವೃತ್ತ ಹಾಗೂ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ಅಲಂಕಾರ ನಿರ್ವಹಣೆ ಮಾಡಲಾಗುವುದು. ದೇವಾಲಯದ ಆವರಣದಲ್ಲಿ ಆಕರ್ಷಕ ಹೂವಿನ ಅಲಂಕಾರ ಮಾಡಲು ಲಾಲ್ಬಾಗ್ ತಜ್ಞರ ಸಹಯೋಗ ಪಡೆಯಲಾಗಿದೆ. ಪ್ರತಿ ೨ ದಿನಕ್ಕೆ ಒಮ್ಮೆ ಹೂವಿನ ಅಲಂಕಾರದ ಮಾದರಿ ಬದಲಾವಣೆ ಮಾಡಲು ಪ್ಲಾನ್ ಮಾಡಲಾಗಿದೆ. ಫಲಪುಷ್ಪ ಪ್ರದರ್ಶನ: ಸಿಲ್ವರ್ ಜ್ಯುಬಿಲಿ ಪಾರ್ಕ್ ಆವರಣದಲ್ಲಿ ಜಿಲ್ಲೆಯ ಪ್ರವಾಸಿ ತಾಣ ಮತ್ತು ಇತರೆ ಮಾದರಿಗಳ ಆಕರ್ಷಕ ಫಲಪುಷ್ಪ ಪ್ರದರ್ಶನವನ್ನು ಅ.೨೬ ರಿಂದ ೨೯ ರವರೆಗೆ ಆಯೋಜಿಸಲಾಗಿದೆ. ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಇದೆ, ಆದರೆ ಒಬ್ಬರು ೧೦ರೂ. ಪಾವತಿಸಬೇಕು. ಮಕ್ಕಳಿಗೆ ೫ ರೂ. ಸಮವಸ್ತ್ರ ದೊಂದಿಗೆ ಬರುವ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಸಚಿವ ರಾಜಣ್ಣ ಮಾಹಿತಿ ನೀಡಿದರು.
ಇಸ್ಕಾನ್ ತಂಡಕ್ಕೆ ಹೊಣೆ:
ಭಕ್ತರಿಗೆ ಉತ್ತಮ ಗಣಮಟ್ಟದ ಲಡ್ಡು-ಪ್ರಸಾದವನ್ನು ಇಸ್ಕಾನ್ ತಂತ್ರಜ್ಞಾನದೊಂದಿಗೆ ಸ್ಥಳೀಯವಾಗಿ ಹಾಸನದಲ್ಲಿಯೇ ತಯಾರಿಸಿ ವಿತರಿಸಲಾಗುವುದು. ಜೊನ್ನೆ ಪ್ರಸಾದ ಪೂರೈಕೆಗೂ ಇಸ್ಕಾನ್ ಸಹಯೋಗ ಪಡೆಯಲಾಗಿದೆ. ಲಡ್ಡು ತಯಾರಿಸಲು ಸ್ಥಳೀಯ ನಂದಿನಿ ತುಪ್ಪವನ್ನೇ ಬಳಸಲಾಗುವುದು. ೧೦೦೦ ರೂ.ಟಿಕೆಟ್ ಪಡೆದು ನೇರ ದರ್ಶನ ಪಡೆಯುವವರಿಗೆ ೨ ಲಾಡುಗಳನ್ನು ಉಚಿತವಾಗಿ ನೀಡಲಾಗುವುದು. ೩೦೦ ರೂ.ಟಿಕೆಟ್ ಪಡೆದು ವಿಶೇಷ ದರ್ಶನ ಮಾಡುವವರಿಗೆ ೧ ಲಡ್ಡು ಉಚಿತವಾಗಿ ನೀಡಲಾಗುತ್ತದೆ. ಈ ಬಾರಿ ಶುಚಿತ್ವ ಮತ್ತು ಗುಣಮಟ್ಟಕ್ಕೆ ಒತ್ತು ನೀಡಲಾಗುವುದು, ಯಾವುದೇ ಗೊಂದಲ, ನೂಕು ನುಗ್ಗಲು ಉಂಟಾಗದಂತೆ ವಿತರಣೆ ಮಾಡಲು ೨೪ ಕೌಂಟರ್ ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
೬೦ ರೂ. ನಿಗದಿ: ೬೦ ರೂ.ಗೆ ೨ ಲಡ್ಡುಗಳುಳ್ಳ ಒಂದು ಪೊಟ್ಟಣದ
ಪ್ರಸಾದವನ್ನು ಭಕ್ತರು ಖರೀದಿ ಮಾಡಬಹುದು. ಜೊನ್ನೆ ಪ್ರಸಾದವನ್ನು ೨೪ ಗಂಟೆಗಳ ಕಾಲ ಉಚಿತವಾಗಿ ನೀಡಲಾಗುವುದು. ಇದಕ್ಕಾಗಿ ದೇವಾಲಯದ ಹೊರ ಆವರಣ ದಲ್ಲಿ ಪ್ರತ್ಯೇಕ ಸ್ಥಳ ಗುರುತಿಸಲಾಗಿದೆ. ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ.
೮೦ ಮೊಬೈಲ್ ಶೌಚಾಲಯ!
ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಸ್ಥಳಗಳಲ್ಲಿ ೮೦ ಮೊಬೈಲ್ ಶೌಚಾಲಯ ಅಳವಡಿಲಾಗಿದೆ. ಭಕ್ತರ ಅನುಕೂಲಕ್ಕಾಗಿ ದೇವಾಲಯದ ಹೊರ ಆವರಣದ ರಸ್ತೆಗಳಲ್ಲಿ ಪ್ರತಿ ೧೦೦ ಮೀಟರ್ಗೆ ಒಂದರಂತೆ ಮ್ಯಾನೇಜ್ಮೆಂಟ್ ಕೇಂದ್ರ ತೆರೆದು ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ವಿವರಿಸಿದರು. ಹಾಗೆಯೇ ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಯಾವುದೇ ಸಮಸ್ಯೆ ಕಂಡು ಬಂದರೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲು ೨೪*೭ ವಾರ್ ರೂಂ ತೆರೆಯಲಾಗಿದೆ. ಈ ಬಾರಿ ದೇವಾಲಯದ ಸುತ್ತಮುತ್ತ ಮತ್ತು ಒಳಭಾಗ ಯು.ಜಿ. ಕೇಬಲ್ ಅಳವಡಿಸಲಾಗಿದೆ.
ದೇವಾಲಯ ದುರಸ್ತಿ ಕಾರ್ಯಗಳಾದ ಶಾಶ್ವತ ಕಲ್ಲಿನ ನೆಲ ಹಾಸು ಮತ್ತು ಶೌಚಾಲಯ ದುರಸ್ತಿ, ಶಾಶ್ವತ ಬ್ಯಾರಿಕೇಡ್ ಅಳವಡಿಕೆ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದರು. ಈಗಾಗಲೇ ಹಾಸನಾಂಬ ದೇವಾಲಯದ ಅಪ್ ರೂಪಿಸಿ ಲೋಕಾರ್ಪಣೆ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಾದ ಯು-ಟ್ಯೂಬ್, ಫೇಸ್ಬುಕ್ ಮೂಲಕವೂ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರಿಗೆ ದೇವಿ ದರ್ಶನ ಕುರಿತು ಅಪ್ ಮೂಲಕ ಸಮಗ್ರ ಮಾಹಿತಿ ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದ್ದು, ಅ.೨೪. ರಂದು ಸಂಜೆ ೬ ಗಂಟೆಗೆ ನಗರದ ಮಹಾರಾಜ ಪಾರ್ಕ್ ಮುಂಭಾಗದ ಹೇಮಾವತಿ ಪ್ರತಿಮೆ ಎದುರು ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.
ವಿಜೇತರಿಗೆ ಮೊದಲ ಬಹುಮಾನ ೧ ಲಕ್ಷ ನಗದು, ರನ್ನರ್ ಅಪ್ ತಂಡಕ್ಕೆ ೫೦ ಸಾವಿರ ನೀಡಲಾಗುವುದು ಎಂದರು. ಉತ್ಸವ ಯಶಸ್ವಿಗೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಡಬಲ್ ಡೆಕ್ಕರ್ ಬಸ್!
ಪ್ಯಾರಾ ಗ್ಲೈಡಿಂಗ್ ಮತ್ತು ಪ್ಯಾರಾಮೋಟಾರಿಂಗ್ ಹಾಟ್ ಏರ್ ಬಲೂನ್ ಬೂವನಹಳ್ಳಿ ಏರ್ ಪೋರ್ಟ್ನಲ್ಲಿ ನಡೆಸಲಾಗುವುದು. ನಗರದ ದೀಪಾಲಂಕಾರ ವೀಕ್ಷಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೈಸೂರು ದಸರಾ ಮಾದರಿಯಲ್ಲಿ ಡಬಲ್ ಡೆಕರ್ ಬಸ್ ಸೇವೆ ಆರಂಭಿಸಲಾಗುವುದು. ದೇವಾಲಯದ ಸುತ್ತಮುತ್ತಲಿನ ನಿವಾಸಿಗಳಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಹೋಂ ಪಾಸ್ ವಿತರಿಸಲಾಗಿದೆ. ಸ್ಕೌಟ್ ಅಂಡ್ ಗೈಡ್ಸ್ ಸೇವೆ ಬಳಸಿಕೊಳ್ಳ ಲಾಗುವುದು, ಸ್ವಯಂ ಸೇವಕರು ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಸನಾಂಬ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಉತ್ತಮ ಸಂವಹನಕ್ಕಾಗಿ ವಾಕಿ ಟಾಕಿ ನೀಡಲಾಗಿದೆ ಎಂದರು. ಈ ಬಾರಿ ಸುಮಾರು ೨೦ ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಬಂದು ಹೋಗುವ ಭಕ್ತರು ಹಾಸನದ ಬಗ್ಗೆ ಗೌರವ ಪಡುವಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ದರ್ಶನಕ್ಕೆ ಬರಲಿದ್ದಾರೆ ಎಂದರು. ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಪಂ ಸಿಇಒ ಪೂರ್ಣಿಮಾ, ಎಸ್ಪಿ ಮೊಹಮದ್ ಸುಜೀತಾ, ಎಡಿಸಿ ಕೆ.ಟಿ.ಶಾಂತಲಾ, ನಗರಸಭೆ ಅಧ್ಯಕ್ಷ ಕೆ.ಎನ್.ರಾಜಣ್ಣ ಮೊದಲಾದವರಿದ್ದರು.
ದೇವಿಯ ಆಭರಣ ರವಾನೆ:
ಈ ಬಾರಿಯ ಹಾಸನಾಂಬೆ ಉತ್ಸವ ಹಿನ್ನಲೆ ಜಿಲ್ಲಾ ಖಜಾನೆಯಿಂದ ದೇವಾಲಯಕ್ಕೆ ಹಾಸನಾಂಬೆ ಒಡವೆಗಳ ರವಾನೆ ಮಾಡಲಾಯಿತು. ದೇವಿಯ ಗರ್ಭಗುಡಿ ಬಾಗಿಲು ತೆರೆದ ಮಾರನೇ ದಿನ ಗರ್ಭಗುಡಿ ಸ್ವಚ್ಛಗೊಳಿಸಿದ ಬಳಿಕ ದೇವಿಗೆ ಆಭರಣ ಧಾರಣೆ ಮಾಡಲಾಗುತ್ತದೆ. ಕಳೆದ ಒಂದು ವರ್ಷದಿಂದ ಜಿಲ್ಲಾ ಖಜಾನೆಯಲ್ಲಿ ಭದ್ರಪಡಿಸಿದ್ದ ಒಡವೆಗಳನ್ನು ಇಂದು ಪೊಲೀಸ್ ಬಿಗಿ ಭದ್ರತೆ ಹಾಗೂ ಶಾಸ್ತ್ರೋಕ್ತವಾಗಿ ದೇವಾಲಯಕ್ಕೆ ತರಲಾಯಿತು. ಇದಕ್ಕೂ ಮುನ್ನ ಜಿಲ್ಲಾ ಖಜಾನೆ ಮುಂದೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಒಡವೆಗಳನ್ನು ಪಲ್ಲಕ್ಕಿ ಮೇಲಿರಿಸಿ ಬೆಳ್ಳಿ ರಥದ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು. ಮೆರವಣಿಗೆಗೂ ಮುನ್ನ ಹಾಸನಾಂಬ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಹಾಗೂ ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮೆರವಣಿಗೆ ವೇಳೆ ಮಂಗಳವಾದ್ಯ ಮೊಳಗಿತು. ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಹೊರಟ ದೇವಿಯ ಆಭರಗಳಿಗೆ
ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕೈ ಮುಗಿದರು.