ಆವಾಸ್ ಮನೆ ಹಂಚಿಕೆ: ಶಾಸಕರ ವಿರುದ್ಧ ಹೋರಾಟ!
– ಹೊದಲದಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ಉಪವಾಸ ಸತ್ಯಾಗ್ರಹ
– ನ್ಯಾಯ ಸಿಗುವವರೆಗೂ ನಮ್ಮ ಹೋರಾಟ: ತುಪ್ಪದ ಮನೆ ವಿನಾಯಕ
– ತೀರ್ಥಹಳ್ಳಿ ತಾಪಂ ಆವರಣದಲ್ಲಿ ಹೋರಾಟ: ಕಿಮ್ಮನೆ
NAMMUR EXPRESS NEWS
ತೀರ್ಥಹಳ್ಳಿ: ವಸತಿ ವಂಚಿತರಿಗೆ ಶಾಸಕರಾದ ಆರಗ ಜ್ಞಾನೇಂದ್ರರವರಿಂದ ಅದ ಅನ್ಯಾಯದ ವಿರುದ್ಧ ಬುಧವಾರ ಹೊದಲ ಅರಳಾಪುರ ಗ್ರಾಮ ಪಂಚಾಯತ್ ಕಛೇರಿಯ ಎದುರು ಗ್ರಾಮ ಪಂಚಾಯಿತಿ ಸದಸ್ಯ ವಿನಾಯಕ ತುಪ್ಪದ ಮನೆ ಇವರಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಿತು. ವಿನಾಯಕ ಮತ್ತು ಅವರ ತಂಡಕ್ಕೆ ಕಾಂಗ್ರೆಸ್ ನಾಯಕರು, ಹೋರಾಟಗಾರರು ಸಾಥ್ ನೀಡಿದರು.
ತೀರ್ಥಹಳ್ಳಿ ಕಾಂಗ್ರೆಸ್ ಕಾರ್ಮಿಕರ ಘಟಕದ ಅಧ್ಯಕ್ಷರು, ಹೊದಲ ಅರಳಾಪುರ ಗ್ರಾಮ ಪಂಚಾಯಿತಿಯ ಸದಸ್ಯ ವಿನಾಯಕ್ ತುಪ್ಪದ ಮನೆ ಹಾಗೂ ಮಂಜುನಾಥ್ ಇವರಿಗೆ ಹೊದಲ ಅರಳಾಪುರ ಪಂಚಾಯತಿಯ ಕೆಲವು ಸದಸ್ಯರು,ಗ್ರಾಮಸ್ಥರು, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಬೆಂಬಲ ಘೋಷಣೆ ಮಾಡಿದರು. ಕಾಂಗ್ರೆಸ್ ನಾಯಕರಾದ ಕಿಮ್ಮನೆ ರತ್ನಾಕರ್, ಕೆಸ್ತೂರು ಮಂಜುನಾಥ್, ಪುಟ್ಟೋಡ್ಲು ರಾಘವೇಂದ್ರ, ಆದರ್ಶ ಹುಂಚದಕಟ್ಟೆ, ಸತೀಶ್ ಬದನೆಹಿತ್ಲು ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಆರಗ ಜ್ಞಾನೇಂದ್ರ ತಾರತಮ್ಯ: ವಿನಾಯಕ ಆರೋಪ
ಹೊದಲ ಅರಳಾಪುರ ಪಂಚಾಯ್ತಿಯ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು, ನಡೆಸಿ ಮಾತನಾಡಿದ ಪಂಚಾಯಿತಿ ಸದಸ್ಯ ತುಪ್ಪದ ಮನೆ ವಿನಾಯಕ್ ಅವರು, ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಆರಗ ಜ್ಞಾನೇಂದ್ರ ಅವರ ತಾರತಮ್ಯದ ವಿರುದ್ಧವಾಗಿ ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಮನೆ ಹಂಚಿಕೆಯ ವಿಚಾರದ ಬಗ್ಗೆ ಹೊದಲ ಗ್ರಾಮ ಪಂಚಾಯಿತಿಗೆ ಒಂದು ಮನೆಯನ್ನು ನೀಡಿ ಶಾಸಕರು ತಾರತಮ್ಯ ಮಾಡುತಿದ್ದಾರೆ ಎನ್ನುವ ವಿಷಯದ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿದ್ದವು. ತಾರತಮ್ಯ ಮಾಡಬಾರದು ಎಂದು ನಾವು ಅವರಿಗೆ ತಿಳಿಸಿದ್ದರೂ ಕೂಡ ಶಾಸಕರ ಪ್ರಕಟಣೆಯಲ್ಲಿ ಅವರು ಮಾಹಿತಿ ನೀಡುತ್ತಾರೆ. ಪ್ರಕಟಣೆಯಲ್ಲಿ ಶಾಸಕರು ಯಾವುದೇ ರೀತಿಯ ತಾರತಮ್ಯ ಮಾಡಲಿಲ್ಲ, ಶಾಸಕರು ಮತ್ತು ಅಧಿಕಾರಿಗಳು ಯಾವುದೇ ಹಸ್ತಕ್ಷೇಪ ಇರುವುದಿಲ್ಲ ಎನ್ನುವ ಮಾಹಿತಿ ನೀಡಿದ್ದರು. 2018 ಮತ್ತು 2019 ನೇ ಸಾಲಿನಲ್ಲಿ ಯಾವ ರೀತಿ ಪ್ರಕಟಣೆಯಾಗಿದ್ಯೋ ಅದೇ ರೀತಿಯಲ್ಲಿ ಮುಂದುವರೆದಿದೆ. ಬೇರೆ ಬೇರೆ ಗ್ರಾಮ ಪಂಚಾಯಿತಿಗಳಿಗೆ ಸಾಕಷ್ಟು ಮನೆಗಳನ್ನ ಹಂಚಿಕೆ ಮಾಡುತ್ತಾರೆ ಆದರೆ ಹೊದಲ ಗ್ರಾಮ ಪಂಚಾಯಿತಿಗಳಿಗೆ ಒಂದು ಮನೆಯನ್ನು ಮಾತ್ರ ನೀಡುತ್ತಾರೆ. ತೀರ್ಥಹಳ್ಳಿ ತಾಲೂಕಿನಲ್ಲಿ 38 ಗ್ರಾಮ ಪಂಚಾಯಿತಿಯಲ್ಲಿ ಅತಿ ಹೆಚ್ಚು ಬಡವರು, ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದಂತಹ ಜನರು ಹೊದಲ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುತ್ತಾರೆ. ಯಾವುದೇ ಒಂದು ಸಭೆಯನ್ನ ನಡೆಸುವ ಹಂತದಲ್ಲಿ ನಾವು ಇಲ್ಲ. ಏಕೆಂದರೆ ಜನರು ಪ್ರಶ್ನೆ ಮಾಡುತ್ತಾರೆ ಅದಕ್ಕೆ ನಮ್ಮ ಬಳಿ ಉತ್ತರ ಇಲ್ಲದಂತಾಗಿದೆ. ಈ ವ್ಯವಸ್ಥೆಯನ್ನು ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿಯ ಎದುರು ಕೂಡ ಉಪವಾಸ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಯಾವುದೇ ರೀತಿಯ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ 2018ನೇ ಸಾಲಿನಲ್ಲಿ 45 ಜನಕ್ಕಿಂತ ಹೆಚ್ಚಿನ ಜನರು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಎಲ್ಲಾ ಉದ್ದೇಶಗಳನ್ನು ಇಟ್ಟುಕೊಂಡು ಶಾಸಕರು ಸರಿಪಡಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ತುಪ್ಪದ ಮನೆ ವಿನಾಯಕ್ ಅವರು ತಿಳಿಸಿದ್ದಾರೆ.
ತೀರ್ಥಹಳ್ಳಿ ತಾಪಂ ಆವರಣದಲ್ಲಿ ಹೋರಾಟ: ಕಿಮ್ಮನೆ
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಈ ಉಪವಾಸ ಸತ್ಯಾಗ್ರಹ ಈ ಗ್ರಾಮ ಪಂಚಾಯಿತಿಗೆ ಸೀಮಿತವಲ್ಲ.
ಇಡೀ ತಾಲೂಕಿನಲ್ಲಿ ಇರುವಂತ ಸಮಸ್ಯೆಗಳನ್ನು, ನಮ್ಮ ಪಕ್ಷದ ಎಲ್ಲಾ ಮುಖಂಡರು ಸೇರಿ ದೊಡ್ಡ ಮಟ್ಟದ ಪ್ರತಿಭಟನೆ ಮತ್ತು ಸತ್ಯಾಗ್ರಹವನ್ನು ತೀರ್ಥಹಳ್ಳಿ ತಾಲೂಕು ಪಂಚಾಯಿತಿಯ ಆವರಣದಲ್ಲಿ ಮುಂಬರುವ ದಿನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಉಪವಾಸ ಸತ್ಯಾಗ್ರಹ ನಡೆಸುವ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ಇಒ ಸ್ಥಳಕ್ಕೆ ಆಗಮಿಸಿ ಉಪವಾಸ ಕುಳಿತ ಗ್ರಾಮ ಪಂಚಾಯಿತಿಯ ಸದಸ್ಯರನ್ನು ಉಪವಾಸ ಕೈ ಬಿಡುವಂತೆ ಮನವೊಲಿಸಲು ಪ್ರಯತ್ನ ಪಟ್ಟರು. ಆದರೂ ಸಹ ಅದಕ್ಕೆ ತುಪ್ಪದ ಮನೆ ವಿನಾಯಕ ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಒಪ್ಪಲಿಲ್ಲ. ತುಪ್ಪದ ಮನೆ ವಿನಾಯಕ ಹಾಗೂ ಕಿಮ್ಮನೆ ರತ್ನಾಕರ್, ಪಂಚಾಯಿತಿಯ ಸದಸ್ಯರು ಸೇರಿ ತಾಲೂಕು ಇಒ ಶೈಲಾ ಅವರಿಗೆ ಮನವಿ ಪತ್ರವನ್ನು ನೀಡಿದರು. ಮನವಿ ಪತ್ರ ನೀಡಿದ ಬಳಿಕ ಮಾತನಾಡಿದ ತುಪ್ಪದ ಮನೆ ವಿನಾಯಕ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದಿನ ದಿನಗಳಲ್ಲೂ ನಡೆಯುತ್ತದೆ ಎಂದರು.