ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಜನ್ಮದಿನ ಆಚರಣೆ
– ಮೂವರಿಗೆ ಬಂಗಾರ ಪ್ರಶಸ್ತಿ, ನಗದು ಮತ್ತು ತಾಮ್ರದ ಫಲಕ
– ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ
– ಅ.26ರಂದು ಸೊರಬದ ಬಂಗಾರಧಾಮದಲ್ಲಿ ಸಮಾರಂಭದಲ್ಲಿ ಪ್ರಶಸ್ತಿ
NAMMUR EXPRESS NEWS
ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಜನ್ಮದಿನದ ಸಂದರ್ಭ ನೀಡುವ ಬಂಗಾರ ಪ್ರಶಸ್ತಿಗೆ ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಅ.26ರಂದು ಸೊರಬದ ಬಂಗಾರಧಾಮದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಎಸ್.ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ನಾಯಕ್ ಈ ಮಾಹಿತಿ ಹಂಚಿಕೊಂಡರು. ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ, ಸಾಹಿತಿ ಕುಂ.ವೀರಭದ್ರಪ್ಪ, ಗ್ರಾಮೀಣ ರಂಗಭೂಮಿ ಕಲಾವಿದೆ ಪ್ರತಿಭಾ ನಾರಾಯಣ್ ಅವರಿಗೆ ಈ ಬಾರಿ ಬಂಗಾರ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಮತ್ತು ತಾಮ್ರದ ಫಲಕವನ್ನು ಹೊಂದಿರಲಿದೆ ಎಂದರು. ಅ.26ರಂದು ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ನಟ ಡಾ. ಶಿವರಾಜ್ಕುಮಾರ್, ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ, ಬಂಗಾರಪ್ಪ ಅವರ ಒಡನಾಡಿ ಬಸಪ್ಪ ಅಂಕರವಳ್ಳಿ, ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ನಾಯಕ್, ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ ಕಾರ್ಯಕ್ರಮದಲ್ಲಿ ಇರಲಿದ್ದಾರೆ ಎಂದರು.
– ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು
ಬಂಗಾರಪ್ಪ ಅವರ ಜನ್ಮದಿನೋತ್ಸವ ಅಂಗವಾಗಿ ಅ.24ರಂದು ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರತಿ ತಾಲೂಕಿನಿಂದ ತಲಾ ಮೂವರು ವಿಜೇತರಿಗೆ ಅ.26ರಂದು ಬಂಗಾರಪ್ಪ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುತ್ತದೆ ಎಂದು ವೇಣುಗೊಪಾಲ್ ನಾಯಕ್ ತಿಳಿಸಿದ್ದಾರೆ.