ಮಲೆನಾಡಲ್ಲಿ ತಾರಕಕ್ಕೇರಿದ ಭೂ ಸಂಘರ್ಷ!
– ಅರಣ್ಯ ಜಮೀನು ಸರ್ವೆ ಆರಂಭ: ರೈತರ ಬದುಕಲ್ಲಿ ತಲ್ಲಣ
– ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಕಠಿಣ ನಿಯಮ ಜಾರಿ?
NAMMUR EXPRESS NEWS
ಶಿವಮೊಗ್ಗ : ಹಲವು ವರ್ಷಗಳ ಅರಣ್ಯ ಜಮೀನು ಸಾಗುವಳಿ ಪ್ರದೇಶದಿಂದ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಇದೀಗ ಕಟ್ಟುನಿಟ್ಟಾಗಿ ಭೂ ಸರ್ವೆ ಕಾರ್ಯಾಚರಣೆ ಆರಂಭಿಸಿದೆ. ಒತ್ತುವರಿ ಪ್ರದೇಶವನ್ನು ನಿಖರವಾಗಿ ಗುರುತಿಸಿ ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕೃತವಾಗಿ ಕಾನೂನು ಕ್ರಮಕ್ಕೆ ಹಾಕಿದೆ. ಆರಂಭದಲ್ಲಿ ಅರಣ್ಯ ಇಲಾಖೆ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿ ಭೂ ಸರ್ವೆ ಆರಂಭಿಸಿದೆ. ಸುಪ್ರೀಂ ಕೋರ್ಟ್, ಕೇಂದ್ರ ಸರಕಾರದ ಬಿಗಿ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದ ಮೇರೆಗೆ ಅರಣ್ಯ ಇಲಾಖೆ ಸರ್ವೆ ಕಾರ್ಯಕ್ಕೆ ತ್ವರಿತ ಚಾಲನೆ ನೀಡಿದೆ. ಸರ್ವೆ ಕಾರ್ಯಕ್ಕೆ ರೈತರು, ಅರಣ್ಯ ವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಗ್ರಾಮದ ಕಾಡಿಗೆ ಅರಣ್ಯ ಇಲಾಖೆ ಕಾವಲು ಬೇಡ ಎಂದು ಸಭೆ ಸೇರಿ ನಿರ್ಣಯಿಸುವ ಹಂತಕ್ಕೆ ರೈತರು ಮುಂದಾಗಿದ್ದು ಭೂ ಸಂಘರ್ಷ ತಾರಕ್ಕೇರುವ ಸಾಧ್ಯತೆ ಇದೆ.
1978 ರ ಪೂರ್ವ, 2014 ರ ನಂತರದ ಒತ್ತುವರಿಯನ್ನು ಭೂ ಸರ್ವೆ ಮೂಲಕ ಏಕಕಾಲದಲ್ಲಿ ಗುರುತಿಸುವ ಸಂಬಂಧ ಅರಣ್ಯ ಇಲಾಖೆ ಈಗ ಕ್ರಮವಹಿಸಿದೆ. ಆದರೆ, ಅರಣ್ಯ ಇಲಾಖೆ ಒತ್ತುವರಿ ಭೂ ಸರ್ವೆ ಕುರಿತಂತೆ ರೈತರಿಗೆ, ಜನಪ್ರತಿನಿಧಿಗಳಿಗೆ ಮಾಹಿತಿಯ ಪೂರ್ಣ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಕಂದಾಯ, ಅರಣ್ಯ ಇಲಾಖೆ ಜಮೀನು ಒಡೆತನಕ್ಕೆ ಸಂಬಂಧಪಟ್ಟಂತೆ ಅನೇಕ ವಿವಾದ ಇನ್ನೂ ಜೀವಂತವಾಗಿವೆ. ಜಮೀನು ಹಕ್ಕು ಕುರಿತಾಗಿ ಇಲಾಖೆಗಳ ನಡುವೆ ಜಂಟಿ ಸರ್ವೆ ಪೂರ್ಣಗೊಂಡಿಲ್ಲ. ಆರ್ಟಿಸಿ, ಮ್ಯುಟೇಷನ್ ದಾಖಲೆಗಳಲ್ಲಿ ಇಂದಿಗೂ ಭೂ ಹಕ್ಕು ಗೊಂದಲ ಮುಂದುವರಿದಿದ್ದರೂ ಭೂ ಸರ್ವೆಗೆ ಅರಣ್ಯ ಇಲಾಖೆ ಕ್ರಮ ವಹಿಸಿದೆ.
ಅರಣ್ಯ ಭೂ ಪ್ರದೇಶದ ಒತ್ತುವರಿ ಸಮಸ್ಯೆ ಬಗೆಹರಿಸಿಲ್ಲ!
ಆರೇಳು ದಶಕದಿಂದ ಮಲೆನಾಡಿನ ಜನರನ್ನು ಸತತವಾಗಿ ಕಾಡುತ್ತಿರುವ ಅರಣ್ಯ ಭೂ ಪ್ರದೇಶದ ಒತ್ತುವರಿ ಸಮಸ್ಯೆ ತಾರ್ಕಿಕ ನೆಲೆಯಲ್ಲಿ ಬಗೆಹರಿಸಲು ಕೇಂದ್ರ, ರಾಜ್ಯ ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆ ನಡುವೆ ಭೂ ಬಿಕ್ಕಟ್ಟು ಸಾಮಾಜಿಕ ಅಸಮಾನತೆಯನ್ನು ವ್ಯಾಪಕ ಅಂತರದಲ್ಲಿ ಸೃಷ್ಟಿಸಿದೆ. ದುಬಾರಿ ಬದುಕಿನ ಈ ಕಾಲದಲ್ಲಿ ವಾಸದ ಮನೆ ಜಾಗ ಖರೀದಿಸಲು ಬಡ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ಸರಕಾರ ಭೂ ಹಂಚಿಕೆ ಸಮಾನ ನೀತಿ ಕಾಯಿದೆ ಜಾರಿಗೂ ಮುಂದಾಗಿಲ್ಲ. ಭೂ ಒಡೆತನ ನಿರೀಕ್ಷೆಗೂ ಮೀರಿ ಉಳ್ಳವರ ಪಾಲಾಗುತ್ತಿರುವುದು ಕಟುಸತ್ಯವಾಗಿದ್ದರೂ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಮಧ್ಯೆ ಕಾನೂನು ತಿದ್ದುಪಡಿಗೊಳಿಸದೆ ಬದುಕಿಗಾಗಿ ಅರಣ್ಯ ಜಮೀನು ಆಶ್ರಯಿಸಿದ ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಕಾರ್ಯಾಚರಣೆಗೆ ಇಳಿದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶ್ನೆಗೆ ಕಾರಣವಾಗಿದೆ.
ಇಲಾಖೆಯ ಪೂರ್ಣ ತಯಾರಿ
ರಾಜ್ಯದ 10 ಜಿಲ್ಲೆಗಳಲ್ಲಿ ಪಶ್ಚಿಮಘಟ್ಟ ಪ್ರದೇಶ ವ್ಯಾಪಿಸಿದ್ದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ಪಡೆ ರಚಿಸಲಾಗಿದೆ. ಕಂದಾಯ, ಅರಣ್ಯ ಜಮೀನು ವಿಸ್ತೀರ್ಣ ಕುರಿತಂತೆ ಇನ್ನೂ ಜಂಟಿ ಸರ್ವೆ ನಡೆದಿಲ್ಲ. ಬ್ರಿಟಿಷ್ ಆಳ್ವಿಕೆ ಕಾಲದ ಅಧಿಸೂಚಿತ ಅರಣ್ಯ ಪ್ರದೇಶದ ನೋಟಿಫಿಕೇಶನ್ ದಾಖಲೆ ಆಧರಿಸಿ ಅರಣ್ಯ ಇಲಾಖೆ ಕಾನೂನು ಕ್ರಮ ಜರುಗಿಸಲಿದೆ. ರೆಸಾರ್ಟ್, ಹೋಂಸ್ಟೇ ಇರುವ ಅರಣ್ಯ ಜಮೀನು, 30 ಎಕರೆಗೂ ಹೆಚ್ಚು ವಿಸ್ತೀರ್ಣ, 10 ರಿಂದ 30 ಎಕರೆ ವರೆಗಿನ ಮತ್ತು 03ರಿಂದ 10 ಎಕರೆ ವರೆಗಿನ ಅರಣ್ಯ ಜಮೀನು ಸರ್ವೆ ವ್ಯಾಪ್ತಿಗೆ ಒಳಪಟ್ಟಿದೆ.