ಕರಾವಳಿ ನ್ಯೂಸ್
– ಮಂಗಳೂರು: ಉಪಕರಣಗಳ ಸಹಿತ ಮೊಬೈಲ್ ಟವರ್ ಕಳವು
– ಕುಂದಾಪುರ : ಮಗುವಿನ ಮೇಲೆ ಹಲ್ಲೆ; ತಾಯಿ,ಪ್ರಿಯಕರನಿಗೆ ನ್ಯಾಯಾಂಗ ಬಂಧನ!
– ಅಜೆಕಾರ್: ಪತಿಯ ಹತ್ಯೆ, ಪ್ರಕರಣ:ಪೊಲೀಸರ ತಂಡದಿಂದ ಸಾಕ್ಷ್ಯಗಳ ಹುಡುಕಾಟ
NAMMUR EXPRESS NEWS
ಮಂಗಳೂರು: ಮಂಗಳೂರು ತಾಲೂಕು ತಿರುವೈಲು ಗ್ರಾಮದಲ್ಲಿ ನಿರ್ಮಿಸಿದ್ದ ಮೊಬೈಲ್ ಟವರ್ ಅನ್ನು ಉಪಕರಣಗಳ ಸಹಿತ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮುಂಬಯಿಯ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಜಿ.ಟಿ.ಎಲ್. ಇನ್ಫ್ರಾಸ್ಟ್ರಕ್ಚರ್ ಕಂಪೆನಿ ಲಿ.ನವರು ಮೊಬೈಲ್ ಟವರ್ ನಿರ್ಮಾಣ ಮಾಡಿದ್ದರು.
ಇತ್ತೀಚೆಗೆ ಟವರ್ನ ನಿರ್ವಹಣೆಯ ಉಸ್ತುವಾರಿ ವಹಿಸಿದ್ದ ಟೆಕ್ನೀಷಿಯನ್ ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ ಮೊಬೈಲ್ ಟವರ್ ಮತ್ತು ಟವರ್ನ ಉಪಕರಣಗಳು ಸೇರಿದಂತೆ ಒಟ್ಟು ಸುಮಾರು 19 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ತನಿಖೆ ನಡೆಯುತ್ತಿದೆ.
* ಕುಂದಾಪುರ : ಮಗುವಿನ ಮೇಲೆ ಹಲ್ಲೆ; ತಾಯಿ,ಪ್ರಿಯಕರನಿಗೆ ನ್ಯಾಯಾಂಗ ಬಂಧನ!
ಕುಂದಾಪುರ: ಅಮಾಸೆಬೈಲಿನಲ್ಲಿ ಮೂರೂವರೆ ವರ್ಷದ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ತಾಯಿ ಹಾಗೂ ಆಕೆಯ ಪ್ರಿಯಕರನ ಜಾಮೀನು ಅರ್ಜಿಯನ್ನು ಮಂಗಳವಾರ ನ್ಯಾಯಾಲಯ ತಿರಸ್ಕರಿಸಿದ್ದು ನ್ಯಾಯಾಂಗ ಬಂಧನ ವಿಧಿಸಿದೆ. ಸೆ.13ರಂದು ತಾಯಿ, ಅನಾರೋಗ್ಯದ ಕಾರಣ ನೀಡಿ ಗಾಯಗೊಂಡ ಮಗುವನ್ನು ಉಡುಪಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತಂದಿದ್ದ ವೇಳೆ ಮಗುವಿನ ದೇಹದಲ್ಲಿ ತೀವ್ರ ಗಾಯಗಳು ಪತ್ತೆಯಾಗಿತ್ತು. ಗಾಯಗಳ ಬಗ್ಗೆ ತಾಯಿ ಪೂರ್ಣಪ್ರಿಯಾ ಯಾವುದೇ ಮಾಹಿತಿ ನೀಡದೇ, ಅದನ್ನು ನೋಡಿ ಜಿಲ್ಲಾ ಆರೋಗ್ಯಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದ ಮಗು ಚೇತರಿಸಿದೆ.
ಮಗು ಮಂಚದಲ್ಲಿ ಮಲಗಬಾರದು ಎಂದು ತಂದೆಯನ್ನು ಕಳಕೊಂಡ ಮಗುವಿನ ತಾಯಿ ಹಾಗೂ ಆಕೆಯ ಪ್ರಿಯಕರ ಸುಹೇಲ್ ಮಗುವಿನ ಖಾಸಗಿ ಅಂಗ ಸಹಿತ ಮೈಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಅ.24ರಂದು ಜಾಮೀನಿಗೆ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಶರಣಾಗಿದ್ದ ಆರೋಪಿಗಳಿಗೆ ನ್ಯಾಯಾಲಯ ಮಧ್ಯಾಂತರ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದ ಗಂಭೀರತೆಯನ್ನು ಮನಗಂಡ ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್, ಜಾಮೀನು ರದ್ದು ಮಾಡಲು ಮನವಿ ಮಾಡಿದರು. ಅದರಂತೆ ಮಂಗಳವಾರ ವಿಚಾರಣೆ ನಡೆದು ಎರಡನೆ ಹೆಚ್ಚುವರಿ ಸಿವಿಲ್ ಕೋರ್ಟ್ ಜೆಎಂಎಫ್ಸಿಯಲ್ಲಿ ಇಬ್ಬರ ಮಧ್ಯಾಂತರ ಜಾಮೀನು ಅರ್ಜಿ ವಜಾ ಮಾಡಿ, ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
* ಅಜೆಕಾರ್: ಪತಿಯ ಹತ್ಯೆ, ಪ್ರಕರಣ:ಪೊಲೀಸರ ತಂಡದಿಂದ ಸಾಕ್ಷ್ಯಗಳ ಹುಡುಕಾಟ
ಅಜೆಕಾರು: ಅಜೆಕಾರು ದೆಪ್ಪುತ್ತೆಯ ಬಾಲಕೃಷ್ಣ ಪೂಜಾರಿ (44) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಪತ್ನಿ ಪ್ರತಿಮಾ ತನ್ನ ಪ್ರಿಯಕರ ಕೊಲೆ ಆರೋಪಿ ದಿಲೀಪ್ ಹೆಗ್ಡೆ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರು ಸಾಕ್ಷ್ಯಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಅ.19ರ ಮಧ್ಯರಾತ್ರಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಪತಿಯ ಊಟದಲ್ಲಿ ನಿರಂತರವಾಗಿ ವಿಷ ಪದಾರ್ಥವನ್ನು ಸ್ವಲ್ಪ-ಸ್ವಲ್ಪವೇ ಬೆರೆಸಿ ಕೊಲೆಗೆ ಯತ್ನಿಸಿದ್ದರು. ಅನಾರೋಗ್ಯ ಕಂಡುಬಂದ ಹಿನ್ನೆಲೆಯಲ್ಲಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಾಲಕೃಷ್ಣ ಅವರು ಮನೆಗೆ ಬಂದಿದ್ದರು.
ಪತ್ನಿ ಅ. 19ರ ರಾತ್ರಿ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಕರೆದು ಇಬ್ಬರೂ ಸೇರಿ ಬೆಡ್ಶೀಟ್ನಿಂದ ಮುಖಕ್ಕೆ ಒತ್ತಿ ಇಟ್ಟು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಸಿಸಿ ಕೆಮರಾಗಳ ಪರಿಶೀಲನೆ ಆರೋಪಿ ದಿಲೀಪ್ ಹೆಗ್ಡೆ ರಾತ್ರಿ ವೇಳೆ ಅಜೆಕಾರಿನ ದೆಪ್ಪುತ್ತೆಗೆ ವಾಹನದಲ್ಲಿ ಬಂದಿದ್ದ. ಆತ ಬಂದು ಹೋಗಿರುವ ರಸ್ತೆ ಬದಿಗಳಲ್ಲಿನ ಸಿಸಿ ಕೆಮರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.ಪ್ರತಿಮಾಳಿಗೆ ವಿಷ ವಸ್ತು ಪೂರೈಕೆ ಮಾಡಿದ್ದ ಸ್ಥಳಗಳಲ್ಲಿನ ಸಿಸಿ ಕೆಮರಾಗಳಲ್ಲೂ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಪ್ರಬಲ ಸಾಕ್ಷ್ಯಗಳ ಸಂಗ್ರಹದಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.