ಕರಾವಳಿ ನ್ಯೂಸ್
– ನಿರ್ಸಗಧಾಮ: ಎರಡು ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿ!!
– ಕಳ್ಳರಿಬ್ಬರ ಬಂಧನ; 2.85 ಲಕ್ಷ ರೂ. ಸೊತ್ತುಗಳ ವಶ! – ಕಾಸರಗೋಡು: ಪ್ರೇಯಸಿಯ ಕೊಂದು, ಚಿನ್ನಾಭರಣ ಕಳವು; ಜೀವಾವಧಿ ಸಜೆ, ದಂಡ!
NAMMUR EXPRESS NEWS
ಮಂಗಳೂರು: ನಗರದ ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ಎರಡು ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿಯಾದ ಘಟನೆ ಅ. 30ರಂದು ಬೆಳಗ್ಗೆ ಸಂಭವಿಸಿದೆ.
ಚಾರ್ಜ್ಗೆಂದು ಶೆಡ್ನಲ್ಲಿ ಇಡಲಾಗಿದ್ದ ವಾಹನಕ್ಕೆ ಶಾರ್ಟ್ ಸರ್ಕ್ನೂಟ್ನಿಂದ ಬೆಂಕಿ ತಗಲಿ ಅನಂತರ ಅದು ಇನ್ನೊಂದು ವಾಹನಕ್ಕೂ ಹಬ್ಬಿರುವ ಸಾಧ್ಯತೆ ಇದೆ. ಎರಡು ವಾಹನಗಳು ಸಂಪೂರ್ಣ ಸುಟ್ಟು ಹೋಗಿವೆ ಎಂದು ಸ್ಥಳಕ್ಕೆ ತೆರಳಿದ್ದ ಕದ್ರಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶೆಡ್ನಲ್ಲಿ ಒಟ್ಟು 16 ವಾಹನಗಳಿದ್ದವು. ಬೆಂಕಿ ಕಾಣಿಸಿಕೊಂಡ ಕೂಡಲೇ ಸಿಬ್ಬಂದಿ ಉಳಿದ ವಾಹನಗಳನ್ನು ಶೆಡ್ನಿಂದ ಹೊರಕ್ಕೆ ತಂದು ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ. ಈ ಎಲೆಕ್ಟ್ರಿಕ್ ವಾಹನಗಳನ್ನು (ಬಗ್ಗೀಸ್) ನಿಸರ್ಗಧಾಮದಲ್ಲಿ ಪ್ರವಾಸಿಗರು ಸುತ್ತಾಡಲು ಬಳಕೆ ಮಾಡಲಾಗುತ್ತಿತ್ತು. ಒಟ್ಟು ಸುಮಾರು 20 ಲ.ರೂ. ನಷ್ಟ ಅಂದಾಜಿಸಲಾಗಿದೆ.
* ಕಳ್ಳರಿಬ್ಬರ ಬಂಧನ; 2.85 ಲಕ್ಷ ರೂ. ಸೊತ್ತುಗಳ ವಶ!
ವಿಟ್ಲ: ಮಾಣಿ ಜಂಕ್ಷನ್ನಲ್ಲಿ ವಿಟ್ಲ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದು, ಈ ಆರೋಪಿಗಳು ವಿಟ್ಲ ಠಾಣೆ ವ್ಯಾಪ್ತಿಯ ಮಿತ್ತೂರು, ಕೊಡಾಜೆ ಮನೆ ಕಳವು ಪ್ರಕರಣಗಳಲ್ಲಿ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿ ಕಳವುಗೈದ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಉಳ್ಳಾಲ ತಾಲೂಕು ಬೋಳಿಯಾರು ಗ್ರಾಮ ಧರ್ಮನಗರ ನಿವಾಸಿ ಮಹಮ್ಮದ್ ರಿಯಾಜ್(38) ಮತ್ತು ಉಳ್ಳಾಲ ತಾಲೂಕು ಹಳೆ ಕೋಟೆ ಮನೆ ನಿವಾಸಿ ಮೊಹಮ್ಮದ್ ಇಂತಿಯಾಜ್(38) ಬಂಧಿತ ಆರೋಪಿಗಳು.
ಆರೋಪಿ ಮಹಮ್ಮದ್ ರಿಯಾಜ್ ಮೇಲೆ ಕೇರಳ ರಾಜ್ಯದ ಕುಂಬಳೆ ಹಾಗೂ ಮಂಗಳೂರು ನಗರ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿವೆ.
ಪ್ರಕರಣದ ತನಿಖೆ ನಡೆಸಿ ರೂ 1,35,000 ರೂ ಮೌಲ್ಯದ ಗ್ಯಾಸ್ ಸಿಲಿಂಡರ್ ಹಾಗೂ ಮನೆ ಸಾಮಗ್ರಿಗಳು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಅಟೊ ರಿಕ್ಷಾ -01 (ಅಂದಾಜು ಮೌಲ್ಯ 1,50,000 ರೂ.) ವನ್ನು ವಶಪಡಿಸಿಕೊಳ್ಳಲಾಗಿದೆ.
* ಕಾಸರಗೋಡು: ಪ್ರೇಯಸಿಯ ಕೊಂದು, ಚಿನ್ನಾಭರಣ ಕಳವು; ಜೀವಾವಧಿ ಸಜೆ, ದಂಡ!
ಕಾಸರಗೋಡು: ತನ್ನ ಜತೆ ಒಂದೇ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದ ಪ್ರೇಯಸಿ ಕರ್ನಾಟಕದ ಉಡುಪಿ ನಿವಾಸಿ ಹುಳುಗಮ್ಮ (35) ಅವರನ್ನು ಕೊಲೆಗೈದು, ನಗದು, ಚಿನ್ನದ ಒಡವೆ ಹಾಗು ಮೊಬೈಲ್ ಫೋನ್ ಕಳವು ಮಾಡಿ ಪರಾರಿಯಾದ ಮೂಲತಃ ಕರ್ನಾಟಕ ಬಿಜಾಪುರ ಬಬಿಲೇಶ್ವರ ನಿವಾಸಿ, ಉಪ್ಪಳ ಹಿದಾಯತ್ನಗರದ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದ ಸಂತೋಷ ದೊಡ್ಡಮನೆ(40)ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ಪ್ರಥಮ) ಜೀವಾವಧಿ ಸಜೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
2013 ಜುಲೈ 31ರಂದು ಆ ಕ್ವಾರ್ಟರ್ಸ್ನಲ್ಲಿ ಆಕೆ ಧರಿಸಿದ್ದ ಸೀರೆಯನ್ನೇ ಕುತ್ತಿಗೆಗೆ ಬಿಗಿದು ಕೊಲೆಗೈದು, ಚಿನ್ನದ ಒಡವೆ, ಹಣ ಮತ್ತು ಮೊಬೈಲ್ ಫೋನನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಇಬ್ಬರೂ ಕೂಲಿ ಕಾರ್ಮಿಕರಾಗಿದ್ದರು. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.