ತೀರ್ಥಹಳ್ಳಿಯ ಅಡಿಕೆಯೇ ದೇಶದಲ್ಲಿ ನಂ.1 ತಳಿ!
– ದೇಶದಲ್ಲಿ ಬೆಳೆಯುವ ಅಡಿಕೆಗಳಲ್ಲಿ ತೀರ್ಥಹಳ್ಳಿ ಅಡಿಕೆ ಉತ್ತಮ
– ಅಡಿಕೆಯ ರುಚಿ,ವಾಸನೆ ಮತ್ತು ಅದರ ಗುಣಮಟ್ಟ ತುಂಬಾ ಪ್ರಸಿದ್ಧಿ
NAMMUR EXPRESS NEWS
ಮಲೆನಾಡಿನಲ್ಲಿ ಬೆಳೆಯುವ ಅಡಿಕೆ ಬೆಳೆ ತುಂಬಾ ಫೇಮಸ್. ಇದೀಗ ಶಿವಮೊಗ್ಗದ ತೀರ್ಥಹಳ್ಳಿ ಪ್ರದೇಶದಲ್ಲಿ ಬೆಳೆಯುವ ಅಡಿಕೆಗೆ ಮತ್ತೊಂದು ಗರಿಮೆ ಲಭ್ಯವಾಗಿದೆ. ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ಕೇಂದ್ರವು ನಡೆಸಿದಂತಹ ಅಧ್ಯಯನದಲ್ಲಿ ತೀರ್ಥಹಳ್ಳಿಯ ಅಡಿಕೆ ದೇಶದಲ್ಲಿ ಬೆಳೆಯುವ ತಳಿಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆಯಾಗಿ ಹೊರಹೊಮ್ಮಿದೆ. ಅಡಿಕೆಯ ಪ್ರತಿ ತಳಿಯಲ್ಲಿ ಅದರ ರುಚಿಯಾಗಿರಬಹುದು, ಅದರ ವಾಸನೆಯನ್ನು ಕಂಡುಹಿಡಿವುದಕ್ಕೆ ಒಂದು ಸಂಶೋಧನೆ ತಂಡವನ್ನೇ ರಚನೆ ಮಾಡಲಾಗಿದ್ದು ತೀರ್ಥಹಳ್ಳಿ ಅಡಿಕೆಗೆ ಮೊದಲ ಗರಿಮೆ ಸಿಕ್ಕಿದೆ ಎಂಬುದು ಫಲಿತಾಂಶ ಹೊರಬಂದಿದೆ.
ಗ್ರಾಹಕರು, ವ್ಯಾಪಾರಿಗಳು, ಸಂಶೋಧನಾ ವಿದ್ವಾಂಸರು, ವಿಜ್ಞಾನಿಗಳು ಮತ್ತು ಬೆಳೆಗಾರರನ್ನು ಒಳಗೊಂಡ ಗುಂಪು ವಿಶ್ಲೇಷಣೆಯಲ್ಲಿ ಪ್ರಶ್ನಾವಳಿಗೆ ಉತ್ತರಿಸುವ ಮೊದಲು ಕಾಯಿಗಳನ್ನು ಸ್ಪರ್ಶಿಸಲು ಮತ್ತು ರುಚಿ ನೋಡಲು ಅವರಿಗೆ ಅವಕಾಶ ನೀಡಲಾಯಿತು. ನೋಟ ಮತ್ತು ಅನುಭವ, ಅಡಿಕೆ ಕಡಿಯುವಾಗ ಆಗುವ ಅನುಭವ, ಪರಿಮಳ ಮತ್ತು ಪ್ರತಿ ವೈವಿಧ್ಯತೆಯ ಬಗ್ಗೆ ಕೆಲವು ವಿವರಗಳು ನೀಡಲಾಗಿದೆ. ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಶಿವಮೊಗ್ಗ ತಾಲೂಕುಗಳ ಕೆಲವು ಭಾಗಗಳಲ್ಲಿ ಬೆಳೆಯುವ ಅಡಿಕೆಯಲ್ಲಿ ತೀರ್ಥಹಳ್ಳಿ ತಳಿಯು ಉತ್ತಮವಾಗಿದೆ ಎಂದು ಸೂಚಿಸಿದೆ. ತೀರ್ಥಹಳ್ಳಿ ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಪ್ರದೇಶವಾಗಿದೆ.
ಅಡಿಕೆ ಬೇಸುವುದೇ ವಿಶೇಷ!
ತೀರ್ಥಹಳ್ಳಿ ಅಡಿಕೆಯನ್ನ ಯಾವ ಪ್ರಕ್ರಿಯೆಗಳಲ್ಲಿ ಮಾಡಲಾಗುತ್ತದೆ ಎಂದರೆ ಅಡಿಕೆಯ ಸಿಪ್ಪೆಯನ್ನು ತೆಗೆದ ನಂತರ, ಅಡಿಕೆಗಳನ್ನು ಕುದಿಸಲಾಗುತ್ತದೆ. ನಂತರ, ಅಡಿಕೆ ಒಣಗಿಸಲಾಗುತ್ತದೆ. ಎಲ್ಲಾ ಪ್ರಕ್ರಿಯೆಗಳ ನಂತರ, ಅಡಿಕೆಗಳನ್ನು ಮಾರುಕಟ್ಟೆಯಲ್ಲಿ ಅವುಗಳ ಮೌಲ್ಯವನ್ನು ಪರಿಗಣಿಸಿ, ಹಸ, ರಾಶಿ, ಬೆಟ್ಟೆ ಮತ್ತು ಗೊರಬಲು ಎಂದು ವರ್ಗೀಕರಿಸಲಾಗುತ್ತದೆ. ರಾಶಿ, ಬೆಟ್ಟೆ, ಗೊರಬಲುಗಿಂತ ಹಸದ ಅಡಿಕೆಗೆ ಹೆಚ್ಚಿನ ಬೆಲೆ ಸಿಗುತ್ತದೆ. ರಾಜ್ಯದಲ್ಲಿಯೇ ಈ ಅಡಿಕೆ ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದ್ದರಿಂದ ತೀರ್ಥಹಳ್ಳಿಯ ಅಡಿಕೆಯೇ ನಂ. 1 ಸ್ಥಾನ ಪಡೆದುಕೊಂಡಿದೆ.
ಕಲಬೆರಕೆ ಮಾಫಿಯಾದಿಂದ ಅಡಿಕೆ ಗೌರವಕ್ಕೆ ಹಾನಿ
ತೀರ್ಥಹಳ್ಳಿ ಸೇರಿ ಮಲೆನಾಡಿನ ಅಡಿಕೆಗೆ ಕಲಬೆರಕೆ ಮಾಫಿಯಾ ಇದೀಗ ಗೌರವ ಹಾಳು ಮಾಡುವ ಕೆಲಸ ಮಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಿಸಬೇಕಿದೆ.