ಕರ್ನಾಟಕ ಟಾಪ್ 3 ನ್ಯೂಸ್
– ಲೋಕಾಯುಕ್ತ ದಾಳಿ: ಬೆಡ್ ರೂಂ ಕೆಳಗೆ ಬಚ್ಚಿಟ್ಟಿದ್ದ ಹಣದ ಗಂಟು!
– ಉಗ್ರರ ಜಾಡು ಹಿಡಿದು ಕರ್ನಾಟಕ ಸೇರಿ ದೇಶಾದ್ಯಂತ ಎನ್.ಐ.ಎ ದಾಳಿ
– ಮಹಿಳೆಯಿಂದ ಕಾನೂನು ಅನುಮತಿ ಇಲ್ಲದೆ ಅಕ್ರಮ ಚೀಟಿ ದಂಧೆ
NAMMUR EXPRESS NEWS
ದೆಹಲಿ: ಬೆಳಗಾವಿ, ಹಾವೇರಿ, ದಾವಣಗೆರೆ, ಕಲಬುರ್ಗಿ, ರಾಮನಗರ, ಮೈಸೂರು, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ವಿವಿಧ ಇಲಾಖೆಗಳ 9 ಅಧಿಕಾರಿಗಳ ಮನೆ, ಕಛೇರಿ ಮತ್ತು ಸಂಬಂಧಿತ ಮನೆಗಳ ಮೇಲೆ ನ. 12ರಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಕೆಯ ಆರೋಪಕ್ಕೆ ಸಂಬಂಧಿಸಿದಂತೆ 9 ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಛೇರಿಗಳಿಗೆ ಬೆಳಿಗ್ಗೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಪಂಚಾಯತ್ ಇಂಜಿನಿಯರಿಂಗ್ ಸಹಾಯಕ ಇಂಜಿನಿಯರ್ ಕಾಶಿನಾಥ್ ಭಜಂತ್ರಿ ಲಕ್ಷ ಲಕ್ಷ ಹಣವನ್ನು ತನ್ನ ಬೆಡ್ ರೂಂ ನಲ್ಲಿ ಹಾಸಿಗೆ ಕೆಳಗೆ ಬಚ್ಚಿಟ್ಟಿದ್ದ ಹಣವನ್ನು ಗಂಟು ಕಟ್ಟಿ ಮನೆಯಿಂದ ಹೊರಗೆ ಎಸೆದಿದ್ದು, ಅದನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆಲವು ಅಧಿಕಾರಿಗಳು ಖಾಸಗಿ ಕಚೇರಿ, ರಿಯಲ್ ಎಸ್ಟೇಟ್ ಏಜೆನ್ಸಿ ನಡೆಸುತ್ತಿರುವುದು ದಾಳಿ ವೇಳೆ ಪತ್ತೆಯಾಗಿದೆ. ಅಪಾರ್ಟ್ಮೆಂಟ್ಗಳು ಮತ್ತು ಬಡವಾವಣೆಗಳ ನಿರ್ಮಾಣದ ಬಗ್ಗೆಯೂ ದಾಖಲೆಗಳು ಪತ್ತೆಯಾಗಿವೆ.
* ದೆಹಲಿ: ಕರ್ನಾಟಕ ಸೇರಿ ದೇಶಾದ್ಯಂತ ಎನ್ ಐ ಎ ದಾಳಿ
ದೆಹಲಿ: ಕರ್ನಾಟಕ ಸೇರಿದಂತೆ ಒಟ್ಟು ಒಂಬತ್ತು ರಾಜ್ಯಗಳಲ್ಲಿ ನ. 11ರಂದು ಏಕಕಾಲಕ್ಕೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯಾಚರಣೆ ಮಾಡಿದ್ದಾರೆ. ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶ ಪ್ರಜೆಗಳು ಅಲ್ ಖೈದಾ ಜೊತೆಗೆ ನಂಟು ಹೊಂದಿದ್ದಾರೆ. ಜೊತೆಗೆ ಅಲ್ ಖೈದಾ ಉಗ್ರ ಸಂಘಟನೆ ಕುರಿತು ಪ್ರಚಾರ, ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಧನಸಹಾಯ ಮಾಡುವ ವ್ಯಕ್ತಿಗಳ ವಿರುದ್ದ ಜಮ್ಮು- ಕಾಶ್ಮೀರ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ಆಸ್ಸಾಂನ 9 ಕಡೆ ಎನ್ಐಎ ದಾಳಿ ನಡೆಸಿದೆ. ಎನ್ಐಎ ಅಧಿಕಾರಿಗಳು ಕಾರ್ಯಾಚಾರಣೆ ವೇಳೆ ಬ್ಯಾಂಕಿಂಗ್ ವಹಿವಾಟುಗಳು, ಮೊಬೈಲ್ ಫೋನ್, ಡಿಜಿಟಲ್ ಸಾಧನಗಳು ಮತ್ತು ಭಯೋತ್ಪಾದಕ ನಿಧಿ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
* ಮಹಿಳೆಯಿಂದ ಕಾನೂನು ಅನುಮತಿ ಇಲ್ಲದೆ ಅಕ್ರಮ ಚೀಟಿ ದಂಧೆ!
ದೊಡ್ಡಬಳ್ಳಾಪುರ: ಸುಮಾರು 250ಕ್ಕೂ ಅಧಿಕ ಜನರನ್ನು ವಂಚಿಸಿ ಚೀಟಿ ಹಣ ನೀಡದೆ ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ತಾಲೂಕಿನ ಮೂಕಾಂಬಿಕಾ ಬಡಾವಣೆಯಲ್ಲಿ ನಡೆದಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಪುಷ್ಪಕಲಾ ಎಂಬ ಮಹಿಳೆಯು ಯಾವುದೇ ಕಾನೂನು ಅನುಮತಿ ಇಲ್ಲದೆ ಅಕ್ರಮವಾಗಿ ಚೀಟಿ ದಂಧೆ ನೆಡೆಸುತ್ತಿದ್ದು, ಆಕೆಯ ಮೇಲೆ ನಂಬಿಕೆ ಇಟ್ಟು ಚೀಟಿ ಹಾಕಿದ್ದ 250ಕ್ಕೂ ಹೆಚ್ಚು ಚೀಟಿದಾರರಿಗೆ ಹಣ ನೀಡದೆ ವಂಚಿಸಿ ಪರಾರಿಯಾಗಿದ್ದಾಳೆ. ಹಣ ಕಳೆದುಕೊಂಡ ಬಡ ಮಹಿಳೆಯರು ಇದೀಗ ಆಕೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ದೊಡ್ಡಬಳ್ಳಾಪುರ ನಗರದ ಮೂಕಾಂಬಿಕಾ ಬಡಾವಣೆಯ ನಿವಾಸಿ ಈ ಪುಷ್ಪಕಲಾ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಈಕೆ ಕಳೆದ ನಾಲ್ದೈದು ವರ್ಷಗಳಿಂದ ಚೀಟಿ ವ್ಯವಹಾರವನ್ನು ನಡೆಸುತ್ತಿದ್ದಳು. ಕಳೆದ 4 ವರ್ಷದಿಂದ ಕಟ್ಟುನಿಟ್ಟಾಗಿ ಚೀಟಿ ವ್ಯವಹಾರ ನಡೆಸುವ ಮೂಲಕ ಸುತ್ತಮುತ್ತಲಿನ ಜನರ ನಂಬಿಕೆಗಳಿಸಿದ್ದ ಪುಷ್ಪಾಕಲಾ ಬಳಿ ಸುತ್ತಮುತ್ತಲಿನ ಸುಮಾರು 250ಕ್ಕೂ ಹೆಚ್ಚು ಜನರು ತಮ್ಮ ಮಗಳ ಮದುವೆಗಾಗಿ, ಮನೆ ಕಟ್ಟಲು, ಬ್ಯುಸಿನೆಸ್ ಮಾಡಲು ಹೀಗೆ ನಾನಾ ಕಾರಣಗಳಿಂದ ಚೀಟಿ ಹಾಕಿದ್ದರು. ಆ. 27ರಂದು ಪತಿ ರುದ್ರ ಆರಾಧ್ಯ ಜಮೀನು ಕೆಲಸಕ್ಕೆಂದು ಊರಿಗೆ ಹೋಗಿದ್ದಾಗ, ಮಕ್ಕಳು ಕಾಲೇಜಿಗೆ ಹೋಗಿದ್ದ ವೇಳೆ ಪುಷ್ಪಕಲಾ ಮನೆಯಿಂದ ನಾಪತ್ತೆಯಾಗಿದ್ದಾಳೆ. ಮನೆಯಿಂದ ನಾಪತ್ತೆಯಾದ ಪುಷ್ಪಕಲಾ ಗಂಡನಿಗೆ ವಾಟ್ಸ್ ಆ್ಯಫ್ ನಲ್ಲಿ ಆಡಿಯೋ ಮೆಸೇಜ್ ಕಳಿಸಿದ್ದು, ತನಗೆ ಯಾರೋ ಮೋಸ ಮಾಡಿದ್ದು, ವಿಷ ಕುಡಿದು ಸಾಯುವುದಾಗಿ ಹೇಳಿದ್ದಾಳೆ. ಪತಿ ರುದ್ರ ಆರಾಧ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೆಂಡತಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದಾರೆ.