ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ!
– 6 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಎಚ್ಚರಿಕೆ
– ಒಂದು ಕಡೆ ಹೆಚ್ಚುತ್ತಿರುವ ಚಳಿ, ಮತ್ತೊಂದು ಕಡೆ ಬಿಸಿಲು, ಮಳೆ
NAMMUR EXPRESS NEWS
ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಮಳೆಯಾಟ ಮುಂದುವರಿದಿದೆ. ಕೆಲವು ದಿನಗಳ ಹಿಂದಷ್ಟೇ ಅಬ್ಬರಿಸಿ ತಣ್ಣಗಾಗಿದ್ದ ಹಿಂಗಾರು ಮಳೆ, ಇದೀಗ ಮತ್ತೆ ಆರ್ಭಟಿಸಲು ಸಜ್ಜಾಗಿದೆ. ಮುಂದಿನ ಮೂರು ದಿನಗಳ ಕಾಲ ನವೆಂಬರ್ 16 ರವರೆಗೆ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ಎಚ್ಚರಿಕೆ’ ನೀಡಲಾಗಿದೆ. ಈಗಾಗಲೇ ಮಳೆಗೆ ನದಿಗಳು, ಕೆರೆ ಕಟ್ಟೆಗಳು, ಜಲಾಶಯಗಳು ಭರ್ತಿಯಾಗಿವೆ. ಉತ್ತರ ಕರ್ನಾಟಕ ಸೇರಿದಂತೆ ವಿವಿಧೆಡೆ ಅತೀವೃಷ್ಟಿ ಉಂಟಾಗಿತ್ತು. ಬೆಳೆಗಳು ನಾಶವಾಗಿದ್ದವು. ಇದೀಗ ಮತ್ತೆ ಮಳೆ ಅಬ್ಬರಿಸಲು ಸಜ್ಜಾಗಿದೆ. ಮುಂದಿನ ಮೂರು ದಿನ ಈ ಕೆಳಗಿನ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
– 110 ಮಿ.ಮೀ. ಮಳೆ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಭಾರೀ ಮಳೆ ಆಗಲಿದೆ. ಕನಿಷ್ಠ 70 ರಿಂದ ಗರಿಷ್ಠ 110 ಮಿಲಿ ಮೀಟರ್ ಮಳೆ ಆಗುವ ಕಾರಣ ಹಿನ್ನೆಲೆ ಈ ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಕೊಪ್ಪಳ, ಯಾದಗಿರಿ, ಬೀದರ್, ಕೊಪ್ಪಳ, ಕಲಬುರಗಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಮುನ್ಸೂಚನೆ ಇದೆ. ನವೆಂಬರ್ 16 ರ ನಂತರ ಈ ಪ್ರದೇಶಗಳಲ್ಲಿ ಅಧಿಕ ತಾಪಮಾನ, ಒಣಹವೆ ಮುಂದುವರಿಯಲಿದೆ.
– ಹೆಚ್ಚುತ್ತಿರುವ ಚಳಿ, ಶೀಘ್ರವೇ ಭಾರಿ ಮಳೆ
ಇದೇ ವೇಳೆ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಹಾಸನ ಜಿಲ್ಲೆ ಸೇರಿ ವಿವಿಧ ಕಡೆಗಳಲ್ಲಿ ಲಘು ಮಳೆ ಆಗಲಿದೆ. ಈಗಾಗಲೇ ಈ ಭಾಗದಲ್ಲಿ ಚಳಿಯ ವಾತಾವರಣ ನಿರ್ಮಾಣವಾಗಿದೆ. ತೇವ ಭರಿತ ಗಾಳಿ ನಿರಂತರವಾಗಿ ಬೀಸುತ್ತಿದೆ.