ವಿಶ್ವ ಸಂಸ್ಥೆ ವರದಿ ಅಡಿಕೆ ಬೆಲೆಗೆ ಎಫೆಕ್ಟ್ ಆಗಿಲ್ಲ!
– ಡಬ್ಬಲ್ ಚೋಲ್ ಚಾಲಿ ಅಡಿಕೆ ಧಾರಣೆ ಏರಿಕೆ
– ಮಲೆನಾಡಲ್ಲೂ ಅಡಿಕೆ ಬೆಲೆ ನಿಧಾನಕ್ಕೆ ಏರಿಕೆ
NAMMUR EXPRESS NEWS
ಮಂಗಳೂರು/ಶಿವಮೊಗ್ಗ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಅಂಗಸಂಸ್ಥೆ ಇಂಟರ್ನ್ಯಾಶನಲ್ ಏಜೆನ್ಸಿ ಫಾರ್ ರಿಸರ್ಚ್ ಆ್ಯಂಡ್ ಕ್ಯಾನ್ಸರ್ (ಐಎಆರ್ಸಿ) 2024ರ ಅ. 9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಅಡಿಕೆಯನ್ನು ಕ್ಯಾನ್ಸರ್ಕಾರಕ ಎಂದು ಹೇಳಲಾಗಿದ್ದು ಆದರೆ ಈ ವಿಚಾರ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಡಿಕೆ ಬೇಡಿಕೆ ಸೃಷ್ಟಿಯಾಗಿ ಧಾರಣೆ ಏರಿಕೆ ಕಾಣುತ್ತಿದೆ.
ಕರಾವಳಿ, ಮಧ್ಯ ಕರ್ನಾಟಕ, ಮಲೆನಾಡು ಅಡಿಕೆ ದರ ಏರಿಕೆಯಾಗುತ್ತಿದೆ. ಆದರೆ ಈ ಬಾರಿ ಮಳೆ, ರೋಗದಿಂದ ಅಡಿಕೆ ಕಡಿಮೆ ಆಗಿದೆ.
ಚಾಲಿ ಅಡಿಕೆ ದರ ಏರಿಕೆ!
ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಮತ್ತೆ ಏರಿಕೆ ಕಡೆ ಮುಖ ಮಾಡಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರುಮುಖದತ್ತ ಸಾಗುತ್ತಿದ್ದು ಡಬ್ಬಲ್ ಚೋಲ್ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಒಂದು ವಾರದ ಧಾರಣೆ ಗಮನಿಸಿದರೆ ಹೊಸ ಅಡಿಕೆ, ಸಿಂಗಲ್ ಚೋಲ್ ಧಾರಣೆಯಲ್ಲಿಯೂ ಹೆಚ್ಚಳ ದಾಖಲಾಗಿದೆ. ನ. 19 ರಂದು ಹೊರ ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್ ಧಾರಣೆ 510 ರಿಂದ 512 ರೂ. ತನಕವೂ ಇತ್ತು. ಕೆಲವೆಡೆ 505 ರಿಂದ 510 ರೂ. ಇತ್ತು. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 500 ರೂ. ಇತ್ತು. ನ. 15 ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 330 ರೂ., ಸಿಂಗಲ್ ಚೋಲ್ ಧಾರಣೆ 420 ರೂ. ತನಕ ಇತ್ತು. ಕಳೆದ ಮೂರು ದಿನಗಳಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ., ಸಿಂಗಲ್ ಚೋಲ್ ಧಾರಣೆ 10 ರೂ.ನಷ್ಟು ಏರಿಕೆ ಕಂಡಿದೆ. ಅಂದರೆ ಹೊಸ ಅಡಿಕೆ ಕೆ.ಜಿ.ಗೆ 335 ರೂ., ಸಿಂಗಲ್ ಚೋಲ್ ಧಾರಣೆ ಕೆ.ಜಿ.ಗೆ 430 ರೂ.ದಾಖಲಾಗಿತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ 350 -355 ರೂ., ಸಿಂಗಲ್ ಚೋಲ್ ಧಾರಣೆ 435-438 ರೂ. ತನಕ ಇತ್ತು.
ಮಲೆನಾಡ ಅಡಿಕೆ ಏರಿಕೆ
ರಾಶಿ ಮಲೆನಾಡು ಅಡಿಕೆ ದರ ಕೂಡ ಏರಿಕೆ ಆಗುತ್ತಿದೆ. ಕ್ವಿಂಟಲ್ ರಾಶಿ 50 ಸಾವಿರ ಇದೆ. ಈಗಾಗಲೇ ಮಲೆನಾಡಲ್ಲಿ ಅಡಿಕೆ ಸುಲಿತ ಆಗುತ್ತಿದ್ದು ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ.