ಹಾಡ ಹಗಲೇ ಗ್ರಾಮದೊಳಕ್ಕೆ ಒಂಟಿ ಸಲಗ ಎಂಟ್ರಿ!
– ಕಾಡಾನೆ ನೋಡಿ ಜನರು ದಿಕ್ಕಾಪಾಲಾಗಿ ಓಟ
– ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅಂಕಿಹಳ್ಳಿ ಪೇಟೆಯಲ್ಲಿ ಘಟನೆ
NAMMUR EXPRESS NEWS
ಬೇಲೂರು: ಮಟ ಮಟ ಮಧ್ಯಾಹ್ನವೇ ಭೀಮಾ ಹೆಸರಿನ ಒಂಟಿ ಸಲಗ ಗ್ರಾಮಕ್ಕೆ ಎಂಟ್ರಿಕೊಟ್ಟು ಕೆಲಹೊತ್ತು ಅಕ್ಷರಶಃ ಭಯ ಹುಟ್ಟಿಸಿತ್ತು.
ಒಂಟಿಸಲಗನ ಕಂಡು ಹಳ್ಳಿ ಜನ ಭಯಭೀತರಾದರು.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅಂಕಿಹಳ್ಳಿ ಪೇಟೆ ಗ್ರಾಮಕ್ಕೆ ಇಂದು ಮಧ್ಯಾಹ್ನ ಆಹಾರ ಹುಡುಕಿಕೊಂಡು ಭೀಮಾ ಆನೆ ಎಂಟ್ರಿಕೊಟ್ಟಿತ್ತು. ಕೆಲ ಕಾಲ ಮನೆಗಳ ಮುಂದೆಯೇ ನಿಂತಿತ್ತು.
ಮೊದಲೇ ಭೀಮಾ ಆನೆ ಮದದಲ್ಲಿದ್ದು, ಯಾವಾಗ ಏನು ಮಾಡುವುದೋ ಎಂದು ಜನರು ಆತಂಕಗೊಂಡಿದ್ದರು.
ನಂತರ ಯಾರಿಗೂ ಏನೂ ಮಾಡದ ಸಲಗ ಗ್ರಾಮದಲ್ಲೆಲ್ಲಾ ಹೆಜ್ಜೆ ಹಾಕುತ್ತಾ ಓಡಾಡಿತು. ಆದರೂ ಕಾಡಾನೆ ಕಂಡ ಕೂಡಲೇ ಗ್ರಾಮಸ್ಥರು ಮನೆಯೊಳಗೆ ಓಡಿ ರಕ್ಷಣೆ ಪಡೆದರು.
ಹಲವು ದಿನಗಳಿಂದ ಕಣ್ಮರೆಯಾಗಿದ್ದ ಭೀಮಾ ಸಲಗ, ಇತ್ತೀಚಿನ ದಿನಗಳಲ್ಲಿ ಹಲವು ಕಡೆಗಳಲ್ಲಿ ಅದರಲ್ಲೂ ಗ್ರಾಮಗಳ ಪಕ್ಕ ಹಾಗೂ ಹಳ್ಳಿಗಳಿಗೇ ಎಂಟ್ರಿಕೊಡುತ್ತಿದೆ. ಇಂದು ಒಂಟಿ ಸಲಗ ಗ್ರಾಮದೊಳಕ್ಕೆ ಬಂದಿದೆ ಎಂಬ ಸುದ್ದಿ ತಿಳಿದ ಕೂಡಲೇ ಇಟಿಎಫ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು.
ದೈತ್ಯಾಕಾರದ ಕಾಡಾನೆಗೆ ಎಸ್ಕಾರ್ಟ್ ಮಾಡಿದ ಇಟಿಎಫ್ ಸಿಬ್ಬಂದಿ, ನಂತರ ನಿಧಾನವಾಗಿ ಒಂಟಿ ಸಲಗನನ್ನು ಅರಣ್ಯಕ್ಕೆ ಓಡಿಸಿದರು.
ಸದ್ಯ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಸಿಬ್ಬಂದಿ ಮೈಕ್ ಮೂಲಕ ಸ್ಥಳೀಯರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡುತ್ತಿದ್ದಾರೆ