ಟಾಪ್ 3 ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು : ಮೊಮ್ಮಗನಿಂದ ವೃದ್ಧ ದಂಪತಿಗಳ ಹತ್ಯೆ
– ಚಿಕ್ಕಮಗಳೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
– ಚಿಕ್ಕಮಗಳೂರು: ಸರ್ಕಾರಿ ಬಸ್ಸಿನಲ್ಲಿ ತರಕಾರಿ ಸಾಗಾಟ
NAMMUR EXPRESS NEWS
ಚಿಕ್ಕಮಗಳೂರು: ವೃದ್ಧ ದಂಪತಿಯನ್ನು ಮೊಮ್ಮಗನೇ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಲ್ಲಂದೂರು ಸಮೀಪದ ಕೊಳಗಾಮೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹತ್ಯೆ ಮಾಡಿದ ಮೊಮ್ಮಗ ಪರಾರಿಯಾಗಿದ್ದಾನೆ. ಬಸಪ್ಪ (65) ಅವರ ಪತ್ನಿ ಲಲಿತಮ್ಮ (58) ಮೊಮ್ಮಗನಿಂದ ಹತ್ಯೆಯಾಗಿದ್ದು, ಹತ್ಯೆ ಮಾಡಿದ ನಿಶಾಂತ್ ಪರಾರಿಯಾಗಿದ್ದು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಚಿಕ್ಕಮಗಳೂರು ತಾಲೂಕು ಮಲ್ಲಂದೂರು ಕೊಳಗಾಮೆ ಗ್ರಾಮದ ಮೊಗಣ್ಣಗೌಡ ಎಂಬವರ ಕಾಫಿತೋಟದಲ್ಲಿ ಕಳೆದ 25 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿದ್ದ ಬಸಪ್ಪ ಲಲಿತಮ್ಮ ದಂಪತಿ ಕೊಳಗಾಮೆ ಗ್ರಾಮದಲ್ಲಿ ವಾಸವಾಗಿದ್ದರು. ಬಸಪ್ಪನ ಅಣ್ಣನ ಮಗಳ ಮಗನಾದ ನಿಶಾಂತ್ ಬಸಪ್ಪನ ಮನೆಗೆ ಬಂದಿದ್ದು, ಹಣಕಾಸಿನ ವಿಚಾರಕ್ಕೆ ಬಸಪ್ಪ ಹಾಗೂ ಲೀಲಪ್ಪ ದಂಪತಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಹಲ್ಲೆಯಿಂದ ದಂಪತಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ನಿಶಾಂತ್ ಬೆಂಗಳೂರಿನಲ್ಲಿದ್ದು, ಆಗಾಗ್ಗೆ ಬಸಪ್ಪ, ಲೀಲಮ್ಮ ಅವರ ಮನೆಗೆ ಬಂದು ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗುತ್ತಿದೆ. ಸ್ಥಳಕ್ಕೆ ಮಲ್ಲಂದೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕೊಳಗಾಮೆ ಗ್ರಾಮದಲ್ಲಿ ವೃದ್ಧ ದಂಪತಿಗೆ ಸಂಬಂಧಿಕರು ಇಲ್ಲದ ಕಾರಣಕ್ಕೆ ಗುಬ್ಬಿಯಲ್ಲಿರುವ ಮೃತರ ಸಂಬಂಧಿಗಳಿಗೆ ಮಾಹಿತಿ ನೀಡಲಾಗಿದೆ. ವೃದ್ಧ ದಂಪತಿಯನ್ನು ಹತ್ಯೆ ಮಾಡಿ ಪರಾರಿಯಾಗಿರುವ ಮೊಮ್ಮಗ ನಿಶಾಂತ್ ಬಂಧನಕ್ಕೆ ಮಲ್ಲಂದೂರು ಪೊಲೀಸರು ಬಲೆ ಬೀಸಿದ್ದಾರೆ.
– ಚಿಕ್ಕಮಗಳೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
ಚಿಕ್ಕಮಗಳೂರು: ಡ್ರೈವರ್ ಗೆ ಕಿಟಕಿಯಿಂದ ಊಟ ಕೊಡಲು ಹೋದ ಕಂಡಕ್ಟರ್ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಸಂಬಂಧ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಚಿಕ್ಕಮಗಳೂರಿನಿಂದ ಮೈಸೂರಿಗೆ ಹೋಗಿದ್ದ ಸರ್ಕಾರಿ ಬಸ್ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಕೆಟ್ಟು ನಿಂತಿತ್ತು. ಬೆಳಗ್ಗೆ 9 ಗಂಟೆಗೆ ಬಸ್ ಕೆಟ್ಟು ಹೋಗಿತ್ತು. ಆದರೆ, ಮೆಕ್ಯಾನಿಕ್ ರಾತ್ರಿ 9 ಗಂಟೆಗೆ ಹೋಗಿದ್ದಾನೆ. ಬಸ್ ರಿಪೇರಿಯಾಗುವುದನ್ನು ಡ್ರೈವರ್ ಹಾಗೂ ಕಂಡೆಕ್ಟರ್ ಕಾಯುತ್ತಿದ್ದರು. ಇದೇ ವೇಳೆ ರಾತ್ರಿ ಊಟವನ್ನು ಡ್ರೈವರ್ ಗೆ ಬಸ್ ನ ಕಿಟಕಿಯಿಂದ ನೀಡಲು ಕಂಡೆಕ್ಟರ್ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಕಂಡಕ್ಟರ್ ಶ್ರೀನಾಥ್ (40) ದಾರುಣವಾಗಿ ಸಾವನ್ನಪ್ಪಿದ್ದರು.
– ಚಿಕ್ಕಮಗಳೂರು: ಸರ್ಕಾರಿ ಬಸ್ಸಿನಲ್ಲಿ ತರಕಾರಿ ಸಾಗಾಟ
ಚಿಕ್ಕಮಗಳೂರು: ಚಿಕ್ಕಮಗಳೂರಿನಿಂದ ಶೃಂಗೇರಿಗೆ ಸಂಚರಿಸುವ ರಸ್ತೆ ಸಾರಿಗೆ ನಿಗಮದ ಬಸ್ಗಳ ಆಸನದಲ್ಲಿ ನಿತ್ಯವೂ ತರಕಾರಿ ಸಾಗಾಟ ಮಾಡುತ್ತಿದ್ದು, ಇದರಿಂದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ ಎಂದು ಸಾರ್ವಜನಿಕರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ದೂರು ನೀಡಿದ್ದಾರೆ. ಬೆಳಗ್ಗಿನ ಸಮಯದಲ್ಲಿ ಸಂಚರಿಸುವ ಬಸ್ನ ಹಿಂಭಾಗದ ಮೂರು- ನಾಲ್ಕು ಆಸನಗಳಲ್ಲಿ ಚಿಕ್ಕಮಗಳೂರಿನಿಂದ ಜಯಪುರದ ಕೆಲವು ಅಂಗಡಿಗಳಿಗೆ ತರಕಾರಿಯನ್ನು ಚೀಲದಲ್ಲಿ ತುಂಬಿಸಿ ಇಡಲಾಗುತ್ತದೆ. ಕಡಬಗೆರೆ, ಸಂಗಮೇಶ್ವರಪೇಟೆ, ಬಾಳೆಹೊನ್ನೂರಿನಿಂದಲೇ ಬಸ್ನಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು ತುಂಬಿ ತುಳುಕುತ್ತಿರುತ್ತದೆ. ಈ ಮಧ್ಯೆ ತರಕಾರಿ ಮೂಟೆಗಳಿಂದಾಗಿ ಸೀಗೋಡು, ಹೇರೂರು, ದೂಬಳ ಕೈಮರ, ಜಯಪುರದಿಂದ ಶೃಂಗೇರಿಯ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಮಾಡುತ್ತಿಲ್ಲ. ಇದರಿಂದಾಗಿ ಹಲವು ಬಾರಿ ವಿದ್ಯಾರ್ಥಿಗಳಿಗೆ ಪರೀಕ್ಷೆ, ತರಗತಿಗಳು ತಪ್ಪಿಹೋಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರ ಯಾವುದೇ ಸಮಸ್ಯೆಗೆ ಸಂಸ್ಥೆಯ ಚಿಕ್ಕಮಗಳೂರಿನ ವಿಭಾಗೀಯ ನಿಯಂತ್ರಣಾಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರ ಬಗ್ಗೆಯೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಾರಿಗೆ ಸಚಿವರಿಗೆ ದೂರು ನೀಡಲು ತೀರ್ಮಾನಿಸಿದ್ದಾರೆ