ಟಾಪ್ ನ್ಯೂಸ್ ಕರ್ನಾಟಕ
ಪ್ರಮೋದ್ ಮುತಾಲಿಕ್ರಿಂದ ಸಚಿವ ಜಮೀರ್ ಕಚೇರಿಗೆ ಮುತ್ತಿಗೆ ಯತ್ನ!
* ವಕ್ಫ್ ವಿವಾದ ಹಿನ್ನೆಲೆ: ಪ್ರಮೋದ್ ಮುತಾಲೀಕ್ ಪೋಲೀಸ್ ವಶಕ್ಕೆ
* 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ: ತುಮಕೂರು ಕೋರ್ಟ್ ತೀರ್ಪು!
* ಚಾಮರಾಜನಗರ: ಶಾಲಾ ಬಸ್ ಗೆ ಸಿಲುಕಿ 4 ವರ್ಷದ ಮಗು ಸಾವು
NAMMUR EXPRESS NEWS
ಬೆಂಗಳೂರು : ವಕ್ಫ್ ವಿವಾದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿರುವ ಸಚಿವ ಜಮೀರ್ ಅಹ್ಮದ್ ಖಾನ್ರವರ ಕಚೇರಿಗೆ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಮೂಡುಬಿದಿರೆ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಯೋರ್ವ ಆತ್ಮಹತ್ಯೆ!
ಮೂಡುಬಿದಿರೆ: ಮೂಡುಬಿದಿರೆ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಯೋರ್ವ ವಸತಿ ನಿಲಯದ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನ. 21ರಂದು ವರದಿಯಾಗಿದ್ದು, ನ. 22ಗೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಶರಣಾದವರನ್ನು ಬೆಂಗಳೂರು ಸಮೀಪದ ಹೊಸೂರು ನಿವಾಸಿ ಪ್ರಸ್ತುತ ಮೂಡುಬಿದಿರೆ ಕಾಲೇಜಿನಲ್ಲಿ ತೃತೀಯ ವರ್ಷದ ಬಿಬಿಎಂ ವಿದ್ಯಾಭ್ಯಾಸ ಮಾಡುತ್ತಿದ್ದ ಶಶಾಂಕ್ ಎಂದು ಗುರುತಿಸಲಾಗಿದೆ. ಶಶಾಂಕ್ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ಬರೆದಿಟ್ಟಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್ ನೋಟನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹವನ್ನು ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ನಡೆಸಿ ನ. 22ರಂದು ಬೆಳಗ್ಗೆ ಹೆತ್ತವರಿಗೆ ಹಸ್ತಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿ ಪ್ರಕರಣದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
* ಚಾಮರಾಜನಗರ: ಶಾಲಾ ಬಸ್ ಗೆ ಸಿಲುಕಿ 4 ವರ್ಷದ ಮಗು ಸಾವು
ಚಾಮರಾಜನಗರ: ಶಾಲಾ ಬಸ್ ಚಕ್ರಕ್ಕೆ ಸಿಲುಕಿ 4 ವರ್ಷದ ಮಗು ಸಾವು ಕಂಡ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಿಕೆಜಿ ಓದುತ್ತಿರುವ ಮಾನ್ವಿತಾ ಮೃತಪಟ್ಟ ಮಗು ಎಂದು ಹೇಳಲಾಗಿದೆ.
ತೆರಕಣಾಂಬಿಯ ಚಂದನ ಶಾಲೆಯ ಮಗು ಮಾನ್ವಿತಾ ಗುಡಿಗಾಲ ಗ್ರಾಮಕ್ಕೆ ಶಾಲಾ ಬಸ್ ನಲ್ಲಿ ಆಗಮಿಸಿದ್ದು, ಚಾಲಕ ಬಸ್ ನಿಂದ ಮಗುವನ್ನು ಇಳಿಸಿದ್ದಾನೆ. ಬಸ್ ರಿವರ್ಸ್ ತೆಗೆಯುವಾಗ ಸರಿಯಾಗಿ ಗಮನಿಸದೆ ಚಾಲಕ ನಿರ್ಲಕ್ಷ್ಯ ವಹಿಸಿದ್ದಾನೆ. ಚಂದನ ಕಾನ್ವೆಂಟ್ ನ ಬಸ್ ಹರಿದು ಮಗು ಮಾನ್ವಿತಾ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಗಾಗಿ ಮಗುವಿನ ಮೃತದೇಹವನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಚಾಮರಾಜನಗರ ಗ್ರಾಮಾಂತರ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
* 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ: ತುಮಕೂರು ಕೋರ್ಟ್ ತೀರ್ಪು!
ತುಮಕೂರು: ತುಮಕೂರು ಜಿಲ್ಲೆಯ ಗೋಪಾಲಪುರ ಗ್ರಾಮದಲ್ಲಿ ನಡೆದಿದ್ದ ದಲಿತ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2010ರ ಜೂನ್ 28ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಡಾಬಾ ಹೊನ್ನಮ್ಮ ಎಂಬ ದಲಿತ ಮಹಿಳೆಯನ್ನು ಸವರ್ಣೀಯರು ಚಪ್ಪಡಿ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು. ಈ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಒಟ್ಟು 27 ಜನರ ಮೇಲೆ ಆರೋಪಿಗಳ ವಿರುದ್ಧ ಕೊಲೆ ಹಾಗೂ ಜಾತಿನಿಂದನೆ ಕೇಸ್ ದಾಖಲಾಗಿತ್ತು.
ಇದೀಗ 14 ವರ್ಷಗಳ ಬಳಿಕ ಒಂದೇ ಗ್ರಾಮದ ಬರೋಬ್ಬರಿ 21 ಆರೋಪಿಗಳಿಗೆ ತುಮಕೂರು 3ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಹಾಗೂ ತಲಾ ಒಬ್ಬ ಆರೋಪಿಗೆ 13,500 ರೂಪಾಯಿ ದಂಡ ವಿಧಿಸಿದೆ.
27 ಜನ ಆರೋಪಿಗಳ ಪೈಕಿ 6 ಜನ ಮೃತಪಟ್ಟಿದ್ದರಿಂದ 21 ಆರೋಪಿಗಳಿಗೆ ಶಿಕ್ಷೆಯಾಗಿದೆ. 21 ಜನರಲ್ಲಿ ಇಬ್ಬರು ಮಹಿಳೆಯರು, 19 ಜನ ಪುರುಷ ಆರೋಪಿಗಳು.