2ನೇ ಕಂಬಳಕ್ಕೆ ಕರಾವಳಿಯಲ್ಲಿ ಅಖಾಡ ಸಜ್ಜು!
* ಸಿದ್ಧಕಟ್ಟೆ: ನ.23ಕ್ಕೆ ವೀರ-ವಿಕ್ರಮ ಜೋಡುಕರೆ ಕಂಬಳ
* ಶ್ರೀ ಕ್ಷೇತ್ರ ಪೂಂಜ ದೇವಸ್ಥಾನದಲ್ಲಿ ಉದ್ಘಾಟನೆ
NAMMUR EXPRESS NEWS
ಬಂಟ್ವಾಳ:ಕರಾವಳಿಯಲ್ಲಿ ಕಂಬಳ ಕಲರವ ಆರಂಭವಾಗಿದೆ. ಪಣಪಿಲದಲ್ಲಿ ಜಯ – ವಿಜಯ ಜೋಡುಕರೆ ಕಂಬಳ ನ.09ರಂದು ನಡೆದಿದ್ದು, 164 ಜೊತೆ ಕೋಣಗಳು ಭಾಗವಹಿಸಿದ್ದ 15ನೇ ವರ್ಷದ ಪಣಪಿಲ ಕಂಬಳವು ಅದ್ದೂರಿಯಾಗಿ ಜರುಗಿತು.
ಎರಡನೇ ಕಂಬಳಕ್ಕೆ ಕರಾವಳಿಯಲ್ಲಿ ಅಖಾಡ ಸಜ್ಜು!
ಇದೀಗ ಕರಾವಳಿಯಲ್ಲಿ ಜನರು ಎರಡನೇ ಕಂಬಳಕ್ಕೆ ಸಜ್ಜಾಗಿದ್ದು,ಎಲಿಯನಡುಗೋಡು ಗ್ರಾಮದ ಸಿದ್ಧಕಟ್ಟೆ ಸಮೀಪ ಕೊಡಂಗೆ ಎಂಬಲ್ಲಿ ಕಳೆದ ವರ್ಷ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತವಾದ ವೀರ ವಿಕ್ರಮ ಜೋಡುಕರೆಯಲ್ಲಿ ಎರಡನೇ ವರ್ಷದ ವೀರ ವಿಕ್ರಮ ಜೋಡುಕರೆ ಕಂಬಳವು ನಡೆಯಲಿದೆ.
ಬೆಳಗ್ಗೆ 7.30ಕ್ಕೆ ಶ್ರೀ ಕ್ಷೇತ್ರ ಪೂಂಜ ದೇವಸ್ಥಾನದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯರ ಅಧ್ಯಕ್ಷತೆಯಲ್ಲಿ, ಶ್ರೀ ಕ್ಷೇತ್ರ ಪೂಂಜ ದೇವಸ್ಥಾನದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಕಂಬಳ ಉದ್ಘಾಟಿಸಲಿದ್ದಾರೆ.
ಕುಡುಂಬೂರುಗುತ್ತು ಕ್ಷೇತ್ರದ ಮೊಕ್ತಸರ ಗುತ್ತಿನಾರ್ ಜಯರಾಮ ಶೆಟ್ಟಿ, ಶಿವಮೊಗ್ಗ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಲಿಯಾಸ್ ಸ್ಯಾಂಕ್ಟಿಸ್ ಮತ್ತಿತರ ಗಣ್ಯರು ಭಾಗವಹಿಸಲಿದ್ದು, ಸಂಜೆ 7ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದು, ಬಂಟ್ವಾಳ ಶಾಸಕ ರಾಜೇಶ ನಾಯ್ಕ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸುಲಿದ್ದಾರೆ.
ಒಂದು ವರ್ಷದಲ್ಲಿ 3 ಕಂಬಳ ಸುಸಜ್ಜಿತ ಹೊಸ ಜೋಡುಕರೆಯಲ್ಲಿ ಇದೇ ಪ್ರಥಮ ಬಾರಿಗೆ ನಡೆಯುತ್ತಿದೆ. ಕಳೆದ ಮಾ.16 ರಂದು ಪ್ರಥಮ ಕಂಬಳ ಮತ್ತು ಅ.19ರಂದು ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ವತಿಯಿಂದ ಸಬ್ ಜ್ಯೂನಿಯರ್ ವಿಭಾಗದಲ್ಲಿ ಕಂಬಳ ಕೂಟ ನಡೆದಿದ್ದು, ಇದೀಗ ನ.23ರಂದು ಮತ್ತೆ 2ನೇ ವರ್ಷದ ಕಂಬಳ ನಡೆಯುತ್ತಿದೆ.
ಮಳೆಗಾಲದಲ್ಲಿ ಗುಡ್ಡದ ನೀರು ಕಂಬಳ ಕರೆಗೆ ಹರಿದು ಬಾರದಂತೆ ತಡೆಯಲು ಸುತ್ತಲೂ ಸುಮಾರು 30 ಸಿಮೆಂಟ್ ಪೈಪ್ ಅಳವಡಿಸಲಾಗಿದ್ದು, ಬೇಸಿಗೆಯಲ್ಲಿ ಕೂಡಾ ಕಂಬಳ ಕರೆಗೆ ನಿರಂತರ ನೀರಿನ ಸಂಪರ್ಕ ಅಳವಡಿಸಲಾಗಿದೆ