ಟಾಪ್ 4 ನ್ಯೂಸ್ ಮಲ್ನಾಡ್
– ಮದುವೆಯಾಗಿಲ್ಲವೆಂದು ಮನನೊಂದು ನೇಣಿಗೆ ಯುವಕ ಶರಣು!
– ಸಾಗರ: ಮಂಗಳೂರಿನಿಂದ ಜೋಗಕ್ಕೆ ತೆರಳುತಿದ್ದ ಪ್ರವಾಸಿ ಬಸ್ ಪಲ್ಟಿ
– ಭದ್ರಾವತಿ : ಕತ್ತು ಹಿಸುಕಿ ತಂಗಿಯ ಗಂಡನಿಂದಲೇ ಕೊಲೆ
– ಶಿವಮೊಗ್ಗ: ದಾರಿಹೋಕನನ್ನು ವಂಚಿಸಿ ಉಂಗುರ ದೋಚಿದ ಬೈಕ್ ಸವಾರರು
NAMMUR EXPRESS NEWS
ಆನಂದಪುರ: ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಚಾಪುರ ಗ್ರಾಪಂ ವ್ಯಾಪ್ತಿಯ ಕೈರಾ ಗ್ರಾಮದ ನಿವಾಸಿ ಸಂದೀಪ್ (33) ಮೃತ ವ್ಯಕ್ತಿಯಾಗಿದ್ದಾರೆ. ವಯಸ್ಸಾದರೂ ಮದುವೆಯಾಗಿಲ್ಲವೆಂದು ಮನನೊಂದಿದ್ದ ಸಂದೀಪ ಕೈರಾ ಗ್ರಾಮದಲ್ಲಿರು ತಮ್ಮ ತೋಟದ ಶೆಡ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
– ಸಾಗರ: ಮಂಗಳೂರಿನಿಂದ ಜೋಗಕ್ಕೆ ತೆರಳುತಿದ್ದ ಪ್ರವಾಸಿ ಬಸ್ ಪಲ್ಟಿ ಹಲವರಿಗೆ ಗಂಭೀರ ಗಾಯ
ಸಾಗರ : ಮಂಗಳೂರಿನಿಂದ ಜೋಗಕ್ಕೆ ಹೊರಟಿದ್ದ ಖಾಸಗಿ ಬಸ್ ಸಾಗರದ ಮುಪ್ಪಾನೆ ಬಳಿ ಪಲ್ಟಿಯಾಗಿ ಬಸ್ ನಲ್ಲಿದ್ದ 27 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಮಂಗಳೂರಿನಿಂದ ಜೋಗಕ್ಕೆ ಬರುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್ ಸಾಗರದ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಪ್ರಯಾಣಿಕರೆಲ್ಲಾರೂ ಮಂಗಳೂರು ಮೂಲದವರೆಂದು ತಿಳಿದುಬಂದಿದ್ದು ಬಸ್ ನಲ್ಲಿ 49 ಜನ ಪ್ರಯಾಣಿಕರಿದ್ದು 27 ಜನರಿಗೆ ಗಂಭೀರ ಗಾಯವಾಗಿದೆ. ಇವರಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ 16 ರಿಂದ 18 ಆಂಬುಲೆನ್ಸ್ ಗಳಲ್ಲಿ ಮಣಿಪಾಲ್ ಹಾಗೂ ಮಂಗಳೂರಿಗೆ ರವಾನಿಸಲಾಗಿದೆ. ಅಪಘಾತದ ವಿಷಯ ತಿಳಿಯುತಿದ್ದಂತೆ ಆಸ್ಪತ್ರೆಗೆ ದಿಡೀರ್ ದೌಡಾಯಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಖುದ್ದು ನಿಂತು ಎಲ್ಲಾ ಗಾಯಾಳುಗಳಿಗೆ ಚಿಕಿತ್ಸೆ ದೊರಕಿಸಿಕೊಟ್ಟು ಸ್ವಂತ ಖರ್ಚಿನಲ್ಲಿ ಮಂಗಳೂರು ಹಾಗೂ ಮಣಿಪಾಲ್ ಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ನಂತರ ಮಾತನಾಡಿದ ಶಾಸಕ ಬೇಳೂರು ಮಂಗಳೂರು ಪುತ್ತೂರು ಸಮೀಪದಿಂದ ಬಂದಿರುವ ಪ್ರವಾಸಿಗರ ಬಸ್ಸು ಕಾರ್ಗಲ್ ಬಳಿ ಅಪಘಾತವಾಗಿದ್ದು ಈ ಬಗ್ಗೆ ಅಲ್ಲಿನ ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಕರೆ ಮಾಡಿದ ನಂತರ ನನಗೆ ವಿಷಯ ತಿಳಿದಿದ್ದು ಕೂಡಲೇ ಆಸ್ಪತ್ರೆಗೆ ಧಾವಿಸಿ ಬಂದು ಸೂಕ್ತ ಚಿಕಿತ್ಸೆಗೆ ಸೂಚಿಸಿ ಎಲ್ಲಾ ಗಾಯಾಳುಗಳಿಗೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇನೆ, ಈ ಸಂಧರ್ಭದಲ್ಲಿ ಸ್ಥಳೀಯರು , ಪತ್ರಕರ್ತರು , ಆಂಬುಲೆನ್ಸ್ ಚಾಲಕರು , ವೈದ್ಯರು ಸಕಾಲಕ್ಕೆ ಸ್ಪಂದಿಸಿದ್ದಾರೆ ಅವರೆಲ್ಲಾರಿಗೂ ಧನ್ಯವಾದಗಳು ಎಂದರು. ರಜೆ ಇದ್ದ ಕಾರಣ ಕುಟುಂಬಸ್ಥರೆಲ್ಲ ವಾಹನ ಮಾಡಿಕೊಂಡು ಪ್ರವಾಸಿ ತಾಣಗಳಿಗೆ ತೆರಳಿತ್ತಿದ್ದಾಗ ಈ ಘಟನೆ ನಡೆದಿದೆ. ಕಾರ್ಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.
– ಭದ್ರಾವತಿ : ಕತ್ತು ಹಿಸುಕಿ ಯುವಕನ ಕೊಲೆ ತಂಗಿಯ ಗಂಡನಿಂದಲೇ ಸುಪಾರಿ
ಭದ್ರಾವತಿ : ಭದ್ರಾವತಿ ತಾಲ್ಲೂಕು ಕಾರೇಹಳ್ಳಿ ಗ್ರಾಮದ ಬಳಿಯ ಓರ್ವನನ್ನು ಕೊಲೆ ಮಾಡಿ ಖಾಲಿ ಜಾಗದಲ್ಲಿ ಎಸೆದುಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ತಾಳಯೆಣ್ಣೆ ಪ್ಯಾಕ್ಟರಿ ಬಳಿ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಸಿಕ್ಕ ಮೃತದೇಹವನ್ನು ಮೈದೊಳಲು ಮಲ್ಲಾಪುರದ ನಿವಾಸಿ ಪರುಶುರಾಮ್ ಎಂದು ಗುರುತಿಸಲಾಗಿದೆ. ಈತನ ತಂಗಿ ಗಂಡನೇ ಪ್ರಕರಣದ ಪ್ರಮುಖ ಆರೋಪಿ ಎನ್ನುವುದು ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ತರೀಕೆರೆ ತಾಲೂಕಿನ ಓರ್ವ ಸೇರಿದಂತೆ ಮೂವರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ತಂಗಿ ಗಂಡ ನೀಡಿದ ಸುಪಾರಿ ಅನ್ವಯ ಆರೋಪಿಗಳು ಪರಶುರಾಮನ ಕುತ್ತಿಗೆ ಬಿಗಿದು ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಶವ ಎಸೆದುಹೋಗಿದ್ದರು.
ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಎಸೆದಿರುವುದನ್ನು ಗಮನಿಸಿದ ಸ್ಥಳೀಯ ರೈತರಿಗೆ ಮೃತದೇಹ ಕಾಣಿಸಿದೆ. ಜೊತೆಗೆ ಕೊಳೆತ ವಾಸನೆಯ ಬರುತ್ತಿತ್ತು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
– ಶಿವಮೊಗ್ಗ: ದಾರಿಹೋಕನನ್ನು ವಂಚಿಸಿ ಉಂಗುರ ದೋಚಿದ ಬೈಕ್ ಸವಾರರು
ಶಿವಮೊಗ್ಗ: ದಾರಿಯಲ್ಲಿ ಸಿಗುವ ವ್ಯಕ್ತಿಗಳು ನಂಬಿಕೆಯನ್ನು ಬಂಡವಾಳ ಮಾಡಿಕೊಂಡು ಹೇಗೆಲ್ಲಾ ಯಾಮಾರಿಸುತ್ತಾರೆ ಎಂಬುದಕ್ಕೆ ಸಾಕ್ಷಿ ಎನ್ನುವಂತಹ ಪ್ರಕರಣವೊಂದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ವೀರಶೈವ ರುದ್ರಭೂಮಿಯ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನ ಸ್ಕೂಟರ್ನಲ್ಲಿ ಬಂದ ಇಬ್ಬರು ಮಾತನಾಡಿಸಿದ್ದಾರೆ. ಕರುಬರಪಾಳ್ಯದ ದುರ್ಗಮ್ಮನ ದೇವಸ್ಥಾನದ ಹುಂಡಿಗೆ ಹಣ ಹಾಕಬೇಕು. ಆದರೆ ದೇವಸ್ಥಾನದ ಬಾಗಿಲು ಹಾಕಿದೆ. ಆ ದುಡ್ಡನ್ನ ನಿಮಗೆ ಕೊಡುತ್ತೇವೆ. ಸಂಜೆ ನೀವೆ ಹಾಕಬಹುದಾ ಎಂದು ಕೇಳಿದ್ದಾರೆ. ಇದಕ್ಕೆ ಸಂತ್ರಸ್ತ ವ್ಯಕ್ತಿ ಸರಿ ಎಂದಿದ್ದಾರೆ. ಈ ವೇಳೆ ಸ್ಕೂಟರ್ನಲ್ಲಿದ್ದ ಇನ್ನೊಬ್ಬ ವ್ಯಕ್ತಿಯು ಪೂಜೆ ಸಾಮಾಗ್ರಿಗೆ ನವರತ್ನ ಇರುವ ಉಂಗುರವನ್ನ ಮುಟ್ಟಿಸಿ ಪೂಜೆಗೆ ಕೊಡಬೇಕು ಎಂದು ಹೇಳಿ ಸಂತ್ರಸ್ತರ ಕೈಯಲ್ಲಿದ್ದ ಉಂಗುರವನ್ನ ಪಡೆದುಕೊಂಡು ಪೂಜೆ ಸಾಮಗ್ರಿ ಇದ್ದ ಕವರ್ಗೆ ಮುಟ್ಟಿಸಿದ್ದಾನೆ. ಈ ವೇಳೆ ಅದೇ ಕವರ್ನೊಳಗೆ ಸಂತ್ರಸ್ತ ವ್ಯಕ್ತಿಯ ಉಂಗುರವನ್ಹಾಕಿದಂತೆ ಮಾಡಿ ಅವರ ಕೈಗೆ ಕವರ್ ಕೊಟ್ಟು ಇಬ್ಬರು ಅಲ್ಲಿಂದ ತೆರಳಿದ್ದಾರೆ. ಇತ್ತ ಸಂತ್ರಸ್ತರು ಮನೆಗೆ ಬಂದು ಪೂಜೆ ಕವರ್ನಲ್ಲಿದ್ದ ತಮ್ಮ ಉಂಗುರ ಹುಡುಕಿದಾಗ ಅಲ್ಲಿ ಕಲ್ಲೊಂದು ಇರುವುದು ಕಾಣಿಸಿದೆ. ಆ ಬಳಿಕ ಅವರಿಗೆ ಸ್ಕೂಟರ್ನಲ್ಲಿದ್ದವರು ತಮ್ಮನ್ನ ಯಾಮಾರಿಸಿ ಉಂಗುರ ಕದ್ದು, ಅದರ ಬದಲಿಗೆ ಕಲ್ಲಿಟ್ಟು ಮೋಸ ಮಾಡಿರುವುದು ಗೊತ್ತಾಗಿದೆ.ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.