ಟಾಪ್ 3 ನ್ಯೂಸ್
– ವೃಕ್ಷಮಾತೆ ತುಳಸಿ ಗೌಡ ನೆನಪು ಮಾತ್ರ!
– ತುಮಕೂರು: ವಿದ್ಯುತ್ ಶಾರ್ಟ್, ಮೂರು ಮಳಿಗೆಯಲ್ಲಿ ಬೆಂಕಿ
– ರಾಮನಗರ: ರಾಗಿ ಹೊಲದಲ್ಲಿ ಕಾಡಾನೆ ದಾಳಿಯಿಂದ ರೈತ ಬಲಿ!
NAMMUR EXPRESS NEWS
ಪರಿಸರ ಸಂರಕ್ಷಣೆಯ ಮಹತ್ತರ ಕಾರ್ಯಕ್ಕೆ ಐದೂವರೆ ದಶಕಗಳ ಕಾಲದಿಂದ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ವೃಕ್ಷಮಾತೆ, ವನದೇವತೆಯೆಂದೇ ಹೆಸರುವಾಸಿಯಾದ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ (86) ಅವರು ಸೋಮವಾರ ಸಂಜೆ ತಾಲೂಕಿನ ಹೊನ್ನಳ್ಳಿಯ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಕಳೆದ 9 ತಿಂಗಳಿನಿಂದ ಪಾರ್ಶವಾಯು ಪೀಡಿತರಾಗಿದ್ದ ತುಳಸಿ ಗೌಡ ಅವರು ಮಂಗಳೂರು, ಮಣಿಪಾಲ ಹಾಗೂ ಕಾರವಾರದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಕಳೆದ 10 ದಿನದಿಂದ ತೀವ್ರ ಅಸ್ವಸ್ಥರಾಗಿದ್ದು,ಹೊನ್ನಳ್ಳಿಯ ಸ್ವಗೃಹದಲ್ಲಿದ್ದರು. ಸೋಮವಾರ ಸಂಜೆ ನಿಧನರಾಗಿದ್ದಾರೆ. ಮೃತರು ಪುತ್ರ, ಪುತ್ರಿ, ಮೊಮ್ಮಕ್ಕಳನ್ನು ಅಗಲಿದ್ದಾರೆ. ತುಳಸಿ ಗೌಡ ಅವರ ಮಹತ್ಕಾರ್ಯವನ್ನು ಗಮನಿಸಿದ ಕೇಂದ್ರ ಸರ್ಕಾರ 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು.
ಸ್ವಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ: ಮೃತರ ಅಂತ್ಯಕ್ರಿಯೆಯನ್ನು ಸ್ವಗ್ರಾಮವಾದ ಹೊನ್ನಳ್ಳಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ನೆರವೇರಿಸಲಾಗುವುದು. ಅಂತಿಮ ದರ್ಶನಕ್ಕೆ ಅವರ ಸ್ವಗೃಹದ ಬಳಿ ಅವಕಾಶ ಕಲ್ಪಿಸಲಾಗಿದೆ ಎಂದು ಮೊಮ್ಮಕ್ಕಳಾದ ರಾಘವೇಂದ್ರ, ಶೇಖರ ಗೌಡ ತಿಳಿಸಿದ್ದಾರೆ.
– ತುಮಕೂರು : ಶಾರ್ಟ್ ಸರ್ಕಿಟ್ ನಿಂದ ಮೂರು ಮಳಿಗೆಯಲ್ಲಿ ಬೆಂಕಿ
ತುಮಕೂರು : ಶಾರ್ಟ್ ಸರ್ಕಿಟ್ನಿಂದ ನಗರದ ವಿಶ್ವವಿದ್ಯಾಲಯ ಬಳಿಯ ಮೂರು ಮಳಿಗೆಗಳಲ್ಲಿ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಮೊದಲಿಗೆ ಮೊಬೈಲ್ ಮಾರಾಟ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಸುತ್ತಮುತ್ತಲಿನ ಮಳಿಗೆಗಳಿಗೆ ಹರಡಿದೆ. ಎಸ್ಎಂಎಲ್ ತರಕಾರಿ ಅಂಗಡಿ, ಮೊಬೈಲ್ ಮಾರ್ಟ್, ಸೌತ್ ಹೋಳಿಗೆ ಮನೆ ಮಳಿಗೆಯಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಮೊಬೈಲ್ ಗಳು, ಸಿ.ಸಿ ಟಿ.ವಿ ಕ್ಯಾಮೆರಾ, ಫ್ರಿಡ್ಜ್ ಸುಟ್ಟು ಕರಕಲಾಗಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದರು. ಹೊಸಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ರಾಮನಗರ: ರಾಗಿ ಹೊಲದಲ್ಲಿ ಕಾಡಾನೆ ದಾಳಿಯಿಂದ ರೈತ ಬಲಿ!
ರಾಮನಗರ: ರಾಗಿ ಹೊಲದಲ್ಲಿ ಕಾವಲು ಕಾಯುತ್ತಿದ್ದ ರೈತ ಕಾಡಾನೆಯ ದಾಳಿಗೆ ಸಿಲುಕಿ ಸಾವಿಗೀಡಾದ ಘಟನೆ ಕನಕಪುರ ತಾಲೂಕಿನ ಉಯ್ಯಂಬಹಳ್ಳಿ ಹೋಬಳಿ ಹಗ್ಗನೂರುದೊಡ್ಡಿ ಗ್ರಾಮದಲ್ಲಿ ಡಿ.15ರ ಭಾನುವಾರ ಬೆಳಿಗ್ಗೆ ಸುಮಾರು 2 ಗಂಟೆಯ ಸುಮಾರಿನಲ್ಲಿ ನಡೆದಿದೆ. ಕರಿಯಪ್ಪ(75) ಮೃತ ದುರ್ದೈವಿ. ಡಿ.14ರ ಶನಿವಾರ ರಾತ್ರಿ ಗ್ರಾಮದ ಹೊರವಲಯದಲ್ಲಿರುವ ತನ್ನ ರಾಗಿ ಹೊಲದಲ್ಲಿ ಕಾವಲು ಕಾಯಲು ಹೋಗಿದ್ದನು. ಈ ಸಂದರ್ಭ ಕಾಡಾನೆಗೆ ಸಿಲುಕಿ ಸಾವಿಗೀಡಾಗಿದ್ದಾನೆ. ಅಕ್ಕಪಕ್ಕದ ಹೊಲದಲ್ಲಿದ್ದ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಕಾವೇರಿ ವನ್ಯಜೀವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ, ಎ.ಸಿ.ಎಫ್. ನಾಗೇಂದ್ರ ಪ್ರಸಾದ್, ಡಿ.ಆರ್.ಎಫ್.ಓ. ಸದಾಶಿವ, ಆರ್.ಎಫ್.ಒ. ಅನಿಲ್ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ ಹಾಗೂ 5 ವರ್ಷ 4 ಸಾವಿರ ಪೆನ್ನನ್, ಶವ ಸಂಸ್ಕಾರಕ್ಕೆ ಪರಿಹಾರ ನೀಡುವುದಾಗಿ ತಿಳಿಸಿದರು. ಈ ಸಂಬಂಧ ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.