ಅಬ್ಬಾ… ಏನಿದು ಭಯಂಕರ ಚಳಿ!
– ರಾಜ್ಯದಲ್ಲಿ ಏರಿಕೆಯಾದ ಚಳಿ: ಹಲವರಿಗೆ ಅನಾರೋಗ್ಯ
– ರಾಜ್ಯದಲ್ಲಿ ಮೂರು ದಿನ ಶೀತ ಅಲೆ ಎಚ್ಚರಿಕೆ: ಡಿ.21ರಿಂದ ಮಳೆ?
– ಬೆಂಗಳೂರು ಕನಿಷ್ಠ ತಾಪಮಾನ ದಾಖಲೆ ಸಾಧ್ಯತೆ
NAMMUR EXPRESS NEWS
ಬೆಂಗಳೂರು: ರಾಜ್ಯದ ವಿವಿಧ ಭಾಗದಲ್ಲಿ ಚಳಿ ಹೆಚ್ಚಿದ್ದು ಜನ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರ ಬರಲು ಕಷ್ಟಕರ ಪರಿಸ್ಥಿತಿ ಇದೆ. ಹವಾಮಾನ ಮುನ್ಸೂಚನೆಯ ಪ್ರಕಾರ ಬೆಂಗಳೂರಿನಲ್ಲಿ ರಾತ್ರಿಯ ತಾಪಮಾನವು ಡಿಸೆಂಬರ್ನಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಯಬಹುದು, ಇದು 14 ವರ್ಷಗಳ ದಾಖಲೆಯನ್ನು ಮುರಿಯುತ್ತದೆ ಎಂದು ಹೇಳಲಾಗಿದೆ. ಚಳಿ ಹೆಚ್ಚಾದ ಕಾರಣ ಅನೇಕ ಕಡೆ ಅನಾರೋಗ್ಯ ಕೂಡ ಹೆಚ್ಚಾಗಿದೆ. 24, 2011 ತಾಪಮಾನವು 12.8 ಡಿಗ್ರಿ ಸೆಲ್ಸಿಯಸ್ ಇಳಿದಾಗ ಡಿಸೆಂಬರ್ ನಲ್ಲಿ ತಾಪಮಾನದಲ್ಲಿ ದಾಖಲಾಗಿತ್ತು.ಬೆಂಗಳೂರಿನ ಡಿಸೆಂಬರ್ ರಾತ್ರಿಗಳು ಸರಾಸರಿ ಕನಿಷ್ಠ 15.7 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ, ಕನಿಷ್ಠ 15.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 14.7 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಮುಂಬರುವ ದಿನಗಳಲ್ಲಿ, ಐಎಂಡಿ ಮುಂಜಾನೆ ಕೆಲವು ಪ್ರದೇಶಗಳಲ್ಲಿ ಮಂಜು ಅಥವಾ ಮಂಜಿನಿಂದ ಕೂಡಿದ ಸ್ಪಷ್ಟ ಆಕಾಶವನ್ನು ಸೂಚಿಸುತ್ತದೆ ಎಂದು ವರದಿಯಾಗಿದೆ. ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ, ರಾತ್ರಿಯ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ.
* ರಾಜ್ಯದಲ್ಲಿ ಮೂರು ದಿನ ಶೀತ ಅಲೆ ಎಚ್ಚರಿಕೆ
ಬೆಂಗಳೂರು: ರಾಜ್ಯದಲ್ಲಿ ಮುಂದಿನ 3 ದಿನ ತೀವ್ರವಾಗಿ ಶೀತ ಅಲೆಗಳು (ಕೋಲ್ಡ್ ವೇವ್) ಕಾಣಿಸಿಕೊಳ್ಳಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ವಾಡಿಕೆಗಿಂತ ಅಧಿಕ ಮಳೆ, ಭೂಮಿಯಲ್ಲಿ ತೇವಾಂಶ ಇರುವುದು, ಮೋಡ ಕವಿದ ವಾತಾವರಣ, ಸೈಕ್ಲೋನ್ ಉಂಟಾಗಿರುವುದು, ಉತ್ತರದಿಂದ ದಕ್ಷಿಣದತ್ತ ಗಾಳಿ ಬೀಸುತ್ತಿರುವುದೂ ಸೇರಿ ವಿವಿಧ ಕಾರಣಗಳಿಂದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ 5-6 ಡಿ.ಸೆ.ಉಷ್ಣಾಂಶ ಇಳಿಕೆಯಾಗಿದೆ. ಕಲಬುರಗಿ, ವಿಜಯಪುರದಲ್ಲಿ ಡಿ.17ರಿಂದ ಡಿ.19ರವರೆಗೆ ತೀವ್ರ ಶೀತದ ಅಲೆಗಳು ಬೀಸಲಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ರೆಡ್ ಅಲರ್ಟ್ ಕೊಟ್ಟಿದೆ. ಈ ಸಂದರ್ಭದಲ್ಲಿ ತಾಪಮಾನ 6ರಿಂದ 7 ಡಿ.ಸೆ.ದಾಖಲಾಗಲಿದೆ. ಬಾಗಲಕೋಟೆ, ರಾಯಚೂರು ಮತ್ತು ಯಾದಗಿರಿಯಲ್ಲಿ ಮುಂದಿನ 3 ದಿನ ಶೀತ ವಾತಾವರಣ ಉಂಟಾಗುವ ಸಂಭವ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಆ ಜಿಲ್ಲೆಗಳಲ್ಲಿ 10 ಡಿ.ಸೆ.ಉಷ್ಣಾಂಶ ಇರಲಿದೆ. ಇದು ವಾಡಿಕೆಗಿಂತ 4-5 ಡಿ.ಸೆ.ಉಷ್ಣಾಂಶ ಕಡಿಮೆ ಇರಲಿದೆ.
* ಡಿ.21ರಿಂದ ಮತ್ತೆ ಮಳೆ ಬೀಳುವ ಸಾಧ್ಯತೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಡಿ.21ರಿಂದ ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಹಾಸನ ಮತ್ತು ವಿಜಯನಗರದಲ್ಲಿ ಡಿ.21ರಿಂದ ಡಿ.23ರವರೆಗೆ ವರ್ಷಧಾರೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಡಿ.21ರಿಂದ ಮುಂದಿನ 3 ದಿನ ಸಾಧಾರಣ ಮಳೆಯಾಗಲಿದೆ.