ಚಿಕ್ಕಮಗಳೂರು ಟಾಪ್ ನ್ಯೂಸ್
– ಕಾಡಾನೆ ಸ್ಥಳಾಂತರಿಸಲು ಗ್ರಾಮಸ್ಥರಿಂದ ಪಟ್ಟು!
– ಆಲ್ದೂರು ತಾಲೂಕಿನ ಜನರ ಮನವಿಗೆ ಸ್ಪಂದನೆ ಇಲ್ಲ
– ಶೃಂಗೇರಿ: ರೈತರ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಮನವಿ,ಪ್ರತಿಭಟನೆಯ ಎಚ್ಚರಿಕೆ
– ಕೊಟ್ಟಿಗೆಹಾರ: ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ 112 ಸಿಬ್ಬಂದಿಯಿಂದ ರಕ್ಷಣೆ
NAMMUR EXPRESS NEWS
ಆಲ್ದೂರು: ಇಲ್ಲಿನ ಆವತಿ ಹೋಬಳಿಯ ಐದಳ್ಳಿ ಸುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳು ಉಪಟಳ ನೀಡುತ್ತಿದ್ದು ಕಾಡಾನೆಯನ್ನು ಸೆರೆ ಹಿಡಿದು, ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮದ ಸುತ್ತ ಸುಮಾರು ಮೂರು ತಿಂಗಳಿಂದ ಬೀಡು ಬಿಟ್ಟಿರುವ ಒಂಟಿ ಸಲಗವು ನಿರಂತರವಾಗಿ ಕೃಷಿ ಭೂಮಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಈ ಭಾಗದಲ್ಲಿ 150ಕ್ಕೂ ಹೆಚ್ಚು ಕುಟುಂಬಗಳಿದ್ದು, ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ತೋಟಕ್ಕೆ ಹೋಗುವ ರೈತರು, ಕಾರ್ಮಿಕರು ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಯು ಗ್ರಾಮಸ್ಥರನ್ನು ಆಟ್ಟಿಸಿಕೊಂಡು ಬಂದ ನಿದರ್ಶನಗಳಿವೆ. ಆನೆಯ ಉಪಟಳದಿಂದ ರಕ್ಷಣೆ ಒದಗಿಸಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಐದಳ್ಳಿ ಗ್ರಾಮಸ್ಥರು ಪತ್ರ ಮುಖೇನ ಮನವಿ ಮಾಡಿದ್ದಾರೆ.
ರೈತರ ಸಮಸ್ಯೆ ಬಗೆಹರಿಸಲು ಮನವಿ..!
ಶೃಂಗೇರಿ: ಅತಿವೃಷ್ಟಿಯಿಂದ ತಾಲ್ಲೂಕಿನ ಅಡಿಕೆ, ಕಾಳುಮೆಣಸು, ಕಾಫಿ, ಏಲಕ್ಕಿ, ಭತ್ತದ ಗದ್ದೆಗಳಿಗೆ ಹಾನಿಯಾಗಿದೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ, ಕಾಫಿ, ಸಂಬಾರ ಮಂಡಳಿ ಅಧಿಕಾರಿಗಳು ಜಂಟಿಯಾಗಿ ಬೆಳೆಹಾನಿ ಸರ್ವೆ ನಡೆಸಿ, ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ. ರೈತ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
‘ತಾಲ್ಲೂಕಿನಲ್ಲಿ ಪ್ರಸ್ತಾವಿತ ಅರಣ್ಯ 4(1) ನಕಾಶೆ ತಯಾರಿಸಿದ್ದು, ಇದರಿಂದ ರೈತರು, ಕಾರ್ಮಿಕರ ಮನೆ, ಕೃಷಿ ಜಮೀನನ್ನು ಹೊರಗಿಡಬೇಕು ಎಂದು ಒತ್ತಾಯಿಸಿದರು. ನಮ್ಮ ಬೇಡಿಕೆಗಳಿಗೆ ಡಿ. 30ರೊಳಗೆ ಸರ್ಕಾರ ಸ್ಪಂದಿಸದಿದ್ದರೆ ಜ. 20ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ರೈತ ಸಂಘ ತಿಳಿಸಿದೆ.
ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ
ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯ ಏಕಲವ್ಯ ಶಾಲೆಯ ಸಮೀಪ ವ್ಯಕ್ತಿಯೊಬ್ಬರು ಬೇಡ್ನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸಕಾಲಕ್ಕೆ ಬಂದ 112 ಸಂಚಾರ ಪೊಲೀಸರು ವ್ಯಕ್ತಿಯನ್ನು ರಕ್ಷಿಸಿ, ಜೀವ ಉಳಿಸಿದ್ದಾರೆ. ಹಾಸನ ಮೂಲದ ಮನು ಎಂಬುವರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಹಾಸನದಿಂದ ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟ್ಗೆ ಬಂದ ಮನು, ಬ್ಲೇಡ್ನಿಂದ ಕುತ್ತಿಗೆ ಕೊಯ್ದುಕೊಂಡು ಸ್ನೇಹಿತರಿಗೆ ವಾಟ್ಸ್ ಆ್ಯಪ್ ಮೂಲಕ ವಿಡಿಯೊ ಕರೆ ಮಾಡಿದ್ದಾರೆ. ಸ್ನೇಹಿತರು ತಕ್ಷಣ ಸಮಯ ಪ್ರಜ್ಞೆ ಮೆರೆದು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿ, ನೆರವು ಕೋರಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ 112 ಪೊಲೀಸರು ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಮನು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಅವರ ಪತ್ನಿಯನ್ನು ಆಸ್ಪತ್ರೆಗೆ ಕರೆಯಿಸಿಕೊಂಡು, ಅವರ ಜತೆಗೆ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಬಿ ಎಸ್.ಅಭಿಷೇಕ್, ದಿಲೀಪ್, ಸುಂಕ ಬೋವಿ, ಓಂಕಾರ ನಾಯ್ಕ ಭಾಗವಹಿಸಿದ್ದರು. ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.