ಬ್ರಹ್ಮಾವರ: ಪರವಾನಗಿ ಇಲ್ಲದೆ ಕಲ್ಲು ಬಂಡೆ ಸ್ಫೋಟ: ಕೇಸ್..!
– ಟ್ರ್ಯಾಕ್ಟರ್ ಬಳಸಿ ಕಲ್ಲುಬಂಡೆಗೆ ರಂದ್ರ ಮಾಡಿ ಸ್ಫೋಟ
– ಮಂಗಳೂರು: ಬಾಲ್ಯ ವಿವಾಹ, ಐವರಿಗೆ ಕಠಿಣ ಶಿಕ್ಷೆ!
– ಹೆಬ್ರಿ: ಅಡಿಕೆ ತೋಟದ ಬಳಿ ಗಂಡಸಿನ ಮೃತದೇಹ ಪತ್ತೆ
NAMMUR EXPRESS NEWS
ಬ್ರಹ್ಮಾವರ: ನೀಲಾವರ ಗ್ರಾಮದ ಕೆಳಕುಂಜಾಲಿನಲ್ಲಿ ಪರವಾನಿಗೆ ಇಲ್ಲದೆ ಕಲ್ಲು ಬಂಡೆಗಳನ್ನು ಸ್ಫೋಟಿಸಿರುವುದು ಪತ್ತೆಯಾಗಿದೆ.
ರಿಚರ್ಡ್ ರೋಡ್ರಿಗಸ್ ಅವರಿಗೆ ಸಂಬಂಧಿಸಿದ ಜಾಗದಲ್ಲಿ ಕಂಪ್ರೆಸರ್ ಟ್ರ್ಯಾಕ್ಟರ್ ಬಳಸಿ ಕಲ್ಲುಬಂಡೆಗೆ ರಂದ್ರ ಮಾಡಿ ಸ್ಫೋಟಕ ತುಂಬಿಸಿ ಕಾನೂನು ಬಾಹಿರವಾಗಿ ಸ್ಫೋಟಿಸಲಾಗಿತ್ತು. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರು: ಬಾಲ್ಯ ವಿವಾಹ, ಐವರಿಗೆ ಕಠಿಣ ಶಿಕ್ಷೆ!
ಮಂಗಳೂರು: ಬಾಲ್ಯವಿವಾಹ ಪ್ರಕರಣದಲ್ಲಿ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಬಾಲಕಿಯ ಪತಿ, ತಂದೆ- ತಾಯಿ ಮತ್ತು ಅತ್ತೆ-ಮಾವಂದಿರಿಗೆ 1 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು ಒಟ್ಟು 35,000 ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಮಂಗಳೂರಿನ ಮೊಂಟೆಪದವು ನಿವಾಸಿ, ಬಾಲಕಿಯ ಪತಿ ಮುಹಮ್ಮದ್ ಇಮ್ತಿಯಾಜ್ (29), ಬಂಟ್ವಾಳದ ರಾಮಲ್ ಕಟ್ಟೆಯ ಅಬ್ದುಲ್ ಖಾದರ್ (41) ರಮ್ಲತ್ (43), ಮಂಜನಾಡಿಯ ಜೆ ಐ ಮುಹಮ್ಮದ್ ಮತ್ತು ಮೈಮುನಾ ಶಿಕ್ಷೆಗೊಳಗಾದ ಅಪರಾಧಿಗಳು.2023ರ ಮೇ 31ರಂದು ಬಾಲಕಿ 17 ವರ್ಷ ಪ್ರಾಯವಾಗಿರುವಾಗಲೇ ಆಕೆಯ ಹೆತ್ತವರು ಮುಹಮ್ಮದ್ ಇಮ್ತಿಯಾಜ್ ನೊಂದಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. 2023 ಜೂನ್ 1ರಂದು ಉಳ್ಳಾಲದ ಕೈರಂಗಳ ಗ್ರಾಮದ ನಂದರಪದವು ಎಂಬಲ್ಲಿರುವ ಎಸ್.ಕೆ.ಮಲ್ಟಿಪರ್ಪಸ್ ಹಾಲ್ನಲ್ಲಿ ಔತಣಕೂಟ ಏರ್ಪಡಿಸಿದ್ದಾರೆ. ಬಾಲಕಿಗೆ ಅಪ್ರಾಪ್ತಿಯಾಗಿರುವಾಗಲೇ ಮದುವೆ ಮಾಡಿರುವ ಕಾರಣಕ್ಕಾಗಿ ಆರೋಪಿತರ ವಿರುದ್ದ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ರಾಜೇಂದ್ರ ಬಿ.ಯವರು ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯ ಕಲಂ 6 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕಲಂ 9, 10, 11 ರಂತೆ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 10 ಸಾಕ್ಷ ಮತ್ತು 22 ದಾಖಲೆಗಳನ್ನು ಗುರುತಿಸಲಾಗಿದೆ. ವಾದವಿವಾದವನ್ನು ಆಲಿಸಿ ಆರೋಪಿಗಳ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಲಾಗಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಾನು ಕೆ.ಎಸ್.ರವರು ಆರೋಪಿಗಳಿಗೆ ಅಪರಾಧಕ್ಕೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ: 10 ಮತ್ತು 11 ರಡಿಯಲ್ಲಿ 1ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು ತಲಾ 5,000 ರೂ. ದಂಡ ವಿಧಿಸಲಾಗಿದೆ. ಎಲ್ಲಾ ಆರೋಪಿತರಿಗೆ ಒಟ್ಟು 35,000 ರೂ. ದಂಡ ವಿಧಿಸಲಾಗಿದೆ.
* ಹೆಬ್ರಿ : ಅಡಿಕೆ ತೋಟದ ಬಳಿ ಅಪರಿಚಿತ ಗಂಡಸಿನ ಮೃತದೇಹ ಪತ್ತೆ
ಹೆಬ್ರಿ: ಹೆಬ್ರಿ ಗ್ರಾಮದ ಹೋಂ ಸ್ಟೇ ಒಂದರ ಅಡಿಕೆ ತೋಟದ ಬಳಿ ಸುಮಾರು 35 ರಿಂದ 45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯು ಮಲಗಿದ್ದಲ್ಲಿಯೇ ಮೃತಪಟ್ಟಿದ್ದು, ಮೃತದೇಹವನ್ನು ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಗಿರುತ್ತದೆ. ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಹೆಬ್ರಿ ಪೊಲೀಸ್ ಠಾಣೆಯ ಉಪನಿರೀಕ್ಷರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.