ಟಾಪ್ 3 ನ್ಯೂಸ್ ಮಲ್ನಾಡ್
– ತೀರ್ಥಹಳ್ಳಿಗೂ ಬಂದ್ರು ಸರ ಕಳ್ಳರು!
– ನಡೆದುಕೊಂಡು ಹೋಗುತ್ತಿದ್ದವರ ಚಿನ್ನದ ಸರ ಎಳೆದು ಬೈಕಲ್ಲಿ ಪರಾರಿ
– ಒಂದೇ ದಿನ ಇಬ್ಬರು ಮಹಿಳೆಯರ ಚಿನ್ನದ ಸರ ದೋಚಿದ ಕಿಡಿಗೇಡಿಗಳು
– ಶಿವಮೊಗ್ಗ : ರಾತ್ರೋರಾತ್ರಿ ಮರದಿಂದಲೇ ಅಡಿಕೆ ಕದ್ದ ಕಳ್ಳರು!
– ಮೂಡಿಗೆರೆ: ದನದ ತಲೆ, ಕರುಳು, ಕಾಲು ಸೇತುವೆಗೆ ಎಸೆದ ದುಷ್ಕರ್ಮಿಗಳು
NAMMUR EXPRESS NEWS
ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆ ಸಮೀಪಿಸುತ್ತಿದ್ದಂತೆಯೇ ತೀರ್ಥಹಳ್ಳಿಯಲ್ಲಿ ಕಳ್ಳರು ತಮ್ಮ ಕೈಚಳಕ ಶುರು ಮಾಡಿದ್ದಾರೆ. ಡಿಸೆಂಬರ್ 15 ರ ಭಾನುವಾರ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ ಹಾಗೂ ಚರ್ಚ್ ಓಣಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಇಬ್ಬರು ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಬೈಕಿನಲ್ಲಿ ಬಂದ ಸರಗಳ್ಳರು ಕಿತ್ತು ಪರಾರಿಯಾಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ತೀರ್ಥಹಳ್ಳಿ ಪೋಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ಸಿಸಿ ಟಿವಿಗಳಲ್ಲಿ ಕಳ್ಳರ ಚಹರೆ ಹಾಗೂ ಬಳಸಿದ ವಾಹನಗಳ ಸುಳಿವು ಲಭಿಸಿದೆ. ಕಳೆದ ವರ್ಷವೂ ಚರ್ಚ್ ಓಣಿ ರಸ್ತೆಯಲ್ಲಿ ನಿವೃತ್ತ ನರ್ಸ್ ಒಬ್ಬರ ಮಾಂಗಲ್ಯ ಸರವನ್ನು ಬೈಕಿನಲ್ಲಿ ಬಂದಿದ್ದ ಸರಗಳ್ಳರು ಕಿತ್ತು ಪರಾರಿಯಾಗಿದ್ದರು. ತೀರ್ಥಹಳ್ಳಿ ಪೋಲೀಸರು ಅವರನ್ನು ಬಂಧಿಸಿ ಮಹಿಳೆಗೆ ಸರ ವಾಪಾಸ್ಸು ಕೊಡಿಸಿದ್ದರು. ಈ ಸರಗಳ್ಳರು ಎಲ್ಲೆಲ್ಲಿಂದಲೋ ಬರುತ್ತಾರೆ. ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಬಂದು ಕಳ್ಳತನ ನಡೆಸಿ ಪರಾರಿಯಾಗುತ್ತಾರೆ. ಇಂತದ್ದನ್ನು ಮೊದಲೇ ಊಹಿಸುವುದು, ಕ್ರಮ ಕೈಗೊಳ್ಳುವುದು ಸಾಧ್ಯವಿಲ್ಲ. ಪೋಲಿಸ್ ಇಲಾಖೆ ಸರಗಳ್ಳತನ, ಮನೆಕಳ್ಳತನ ಬಗ್ಗೆ ಜಾಗರೂಕರಾಗಿರುವಂತೆ ಪ್ರತಿನಿತ್ಯ ಜನರಿಗೆ ಎಚ್ಚರಿಕೆ-ಸೂಚನೆಗಳನ್ನು ನೀಡುತ್ತದೆ. ಆದರೆ ಜನ ಸೂಚನೆಗಳನ್ನು ಪಾಲಿಸುವುದಿಲ್ಲ. ಕಳ್ಳತನವಾದ ಮೇಲೆ ಪೋಲೀಸರು ಸರಿ ಇದ್ದಿದ್ದರೆ ಹೀಗಾಗುತ್ತಿರಲ್ಲಿಲ್ಲ ಎಂದು ಗೂಬೆ ಕೂರಿಸುತ್ತಾರೆ. ಆಭರಣಗಳ ಪ್ರದರ್ಶನ ಮಾಡಬೇಡಿ, ಕತ್ತಲಲ್ಲಿ ಒಬ್ಬೊಬ್ಬರೇ ನಿರ್ಜನ ರಸ್ತೆಗಳಲ್ಲಿ ಓಡಾಡಬೇಡಿ, ವಾಕಿಂಗ್ ಹೋಗುವಾಗ ಆಭರಣಗಳನ್ನು ಧರಿಸದಿರಿ. ಹೀಗೆ ಎಷ್ಟು ಬಾರಿ ಸೂಚನೆ ಕೊಟ್ಟರೂ ನಮ್ಮ ಜನ ಆ ಬಗ್ಗೆ ತಲೆಕೆಡಿಸಿಕೊಳ್ಳು ವುದಿಲ್ಲ. ಆಭರಣ ಕಳ್ಳತನದ ಸಂದರ್ಭ ಜೀವಕ್ಕೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಆದರೂ ಜನ ಜಾಗರೂಕರಾಗುವುದಿಲ್ಲ.
– ಶಿವಮೊಗ್ಗ : ರಾತ್ರೋರಾತ್ರಿ ಮರದಿಂದಲೇ ಅಡಿಕೆ ಕದ್ದ ಕಳ್ಳರು
ಶಿವಮೊಗ್ಗ: ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಡಿಕೆಗಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರೋರಾತ್ರಿ ಅಡಿಕೆ ತೋಟಕ್ಕೆ ನುಗ್ಗಿ ಮರದಿಂದಲೇ ಅಡಿಕೆಗೊಂಚಲು ಗಳನ್ನು ಕ್ವಿಂಟಾಲ್ ಗಟ್ಟಲೆ ಕಳುವು ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ಒಂದು ವಾರದ ಹಿಂದೆ ಭದ್ರಾವತಿಯ ಕಾಕನಹೊಸೂಡಿ ಯಲ್ಲಿ ಈಶಣ್ಣ ಎನ್ನುವವರ ತೋಟ ಸೇರಿದಂತೆ ಇನ್ನಿಬ್ಬರ ತೋಟದಲ್ಲಿ ಅಡಿಕೆಗಳ್ಳರು ಅಡಿಕೆ ಕಳ್ಳತನ ನಡೆದಿದೆ. ತಲಾ ತೋಟದಿಂದ 10-12 ಕ್ವಿಂಟಾಲ್ ಹಸಿ ಅಡಿಕೆ ಕಳ್ಳತನವಾಗಿದೆ. ಈ ಬಗ್ಗೆ ಈಶಣ್ಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಉಂಬ್ಳೆಬೈಲಿನಲ್ಲಿ ರಾಮೇಗೌಡರ ತೋಟದಲ್ಲಿ ಕಳ್ಳತನ ನಡೆದಿದೆ. ಅಡಿಕೆ ಮರಗಳನ್ನು ಹತ್ತಿ 10-12 ಕ್ವಿಂಟಾಲ್ ಅಡಿಕೆ ಕಳುವು ಮಾಡಲಾಗಿದೆ. ಎರಡು ದಿನದ ಹಿಂದೆ ಕೃಷ್ಣಗೌಡರ ತೋಟದಲ್ಲಿ ಸಹ 15 ಕ್ವಿಂಟಾಲ್ ಹಸಿ ಅಡಿಕೆ ಕಳುವು ಮಾಡಲಾಗಿದೆ. ಈ ಬಗ್ಗೆ ಕೃಷ್ಣಗೌಡರು ಮತ್ತು ರಾಮೇಗೌಡರು ಭದ್ರಾವತಿಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಂಬ್ಳೆಬೈಲಿನ ಗ್ರಾಮಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಈಗ ಸೀಸನ್ ಇದೆ. ಬಾಳೆಹೊನ್ನೂರಿಗೆ ವಾಹನಗಳು ಇಲ್ಲಿಂದ ಲೋಡ್ ಮಾಡಿಕೊಂಡು ಹೋಗುತ್ತಾರೆ. ರಾತ್ರಿ ಹೊತ್ತು ಕಾವಲು ಇಲ್ಲದೆ ಕಾರಣ ಕಳುವು ಹೆಚ್ಚಾಗಿದೆ. ಪೊಲೀಸರು ಅಡಿಕೆ ಕಳ್ಳರಿಂದ ರೈತರಿಗೆ ಮುಕ್ತಿ ದೊರಕಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.
– ಮೂಡಿಗೆರೆ: ದನದ ತಲೆ, ಕರುಳು, ಕಾಲು ಸೇತುವೆಗೆ ಎಸೆದ ದುಷ್ಕರ್ಮಿಗಳು
ಮೂಡಿಗೆರೆ: ಚಾರ್ಮಾಡಿ ಗ್ರಾಮದ ಅನ್ನಾರು ಸೇತುವೆ ಕೇಳಭಾಗದಲ್ಲಿ ದನದ ತಲೆ, ಕರುಳು, ಕಾಲುಗಳನ್ನು ತುಂಬಿಸಿ ನೀರಿಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಸಂಜೆ ಸುಮಾರು 4 ಗಂಟೆಗೆ ಪಿಕಪ್ ವಾಹನದಲ್ಲಿ ಬಂದ ಅಪರಿಚಿತರು 11 ಗೋಣಿ ಚೀಲಗಳಲ್ಲಿ ದನದ ತಲೆ, ಕರುಳು, ಕಾಲುಗಳನ್ನು ತುಂಬಿಸಿ ನೀರಿಗೆ ಎಸೆದು ಹೋಗಿದ್ದಾರೆ. ಈ ಭಾಗದಲ್ಲಿ ಪರಿಶಿಷ್ಟ ಪಂಗಡದ ಮಲೆಕುಡಿಯರು ವಾಸವಾಗಿದ್ದು, ಕುಡಿಯಲು ಇದೇ ನೀರನ್ನು ಬಳಸುತ್ತಾರೆ. ಪ್ರತಿದಿನ ಶಾಲೆಗೆ ಹೋಗುವ ಮಕ್ಕಳು ಇದೇ ರಸ್ತೆ ಬಳಸುವುದರಿಂದ ಸಾಂಕ್ರಾಮಿಕ ರೋಗ ಹರಡುವ ಅಪಾಯ ಇದೆ. ದುಷ್ಕರ್ಮಿಗಳು ಗಲಭೆ ಸೃಷ್ಟಿಸುವ ಉದ್ದೇಶದಿಂದ ದನದ ತ್ಯಾಜ್ಯಗಳನ್ನು ಎಸೆದು ಹೋಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.