ಕರಾವಳಿ ಟಾಪ್ ನ್ಯೂಸ್
– ಬೆಳ್ತಂಗಡಿ: ಮಸೀದಿಗೆ ನುಗ್ಗಿ ಧರ್ಮಗುರುವಿನ ಮೇಲೆ ಹಲ್ಲೆ!
– ಬಜ್ಪೆ : ವಿಳಾಸ ಕೇಳುವ ನೆಪದಲ್ಲಿ ಸರ ಎಗರಿಸಿದ ಕಳ್ಳ ಅರೆಸ್ಟ್!
– ಮಲ್ಪೆ: ಮೀನುಗಾರಿಕೆ ಇಲಾಖೆ ಅಗ್ನಿ ಅವಘಡ : ಸುಟ್ಟು ಭಸ್ಮ
– ಮಂಗಳೂರು: ಕ್ರೇನ್ ಪಲ್ಟಿ: ಆಪರೇಟರ್ ಜೀವ ಹೋಯ್ತು!
NAMMUR EXPRESS NEWS
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪ ಕ್ಷುಲ್ಲಕ ವಿಚಾರದಲ್ಲಿ ಚಾರ್ಮಾಡಿಯ ಮುಹಿದ್ದಿನ್ ಜುಮ್ಮಾ ಮಸೀದಿಗೆ ನುಗ್ಗಿ ಧರ್ಮಗುರುವಿನ ಮೇಲೆ ಸುಮಾರು 12 ಜನರ ತಂಡದಿಂದ ಹಲ್ಲೆ ನಡೆಸಿದ ಘಟನೆ ರಾತ್ರಿ ಸಂಭವಿಸಿದೆ. ಗಾಯಗೊಂಡ ಮುಹಿದ್ದಿನ್ ಜುಮ್ಮಾ ಮಸೀದಿ ಜಾಲಲಿನಗರದ ಧರ್ಮಗುರು ಶಮೀರ್ ಮುಸ್ಲಿಯಾರ್ (37) ಅವರು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯರಾದ ಬದ್ರುದ್ದಿನ್, ಸಂಶುದ್ದಿನ್, ಅಹಮದ್ ಟಿಬಿ ರೋಡ್, ನೌಫಲ್, ಅನ್ಸರ್, ಮುನೀರ್ ಅಸೀಫ್, ಅಫೀಝ್, ಅಫ್ರೀಜ್, ಶರೀಫ್, ಅಬ್ದುಲ್ ಖಾದರ್ ಮತ್ತಿತರರು ಮಸೀದಿಗೆ ನುಗ್ಗಿ ಹಲ್ಲೆ ಮಾಡಿರುವುದಾಗಿ ಅವರು ಆರೋಪಿಸಿದ್ದಾರೆ.
ಹಲ್ಲೆ ಬಳಿಕ ಮಸೀದಿ ಆವರಣದಲ್ಲಿ ಹಲ್ಲೆ ಮಾಡಿದ ತಂಡದವರು ಮತ್ತು ಮಸೀದಿಯವರ ಜತೆ ಗಲಾಟೆ ನಡೆದಿದ್ದು, ಈ ಘಟನೆಯ ಬಗೆಗಿನ ವೀಡಿಯೋ ವೈರಲ್ ಅಗಿದೆ.
ಈ ಘಟನೆ ಬಗ್ಗೆ ಧರ್ಮಸ್ಥಳ ಠಾಣೆಗೆ ಧರ್ಮಗುರು ದೂರು ನೀಡಿದ್ದಾರೆ. ಪೊಲೀಸರು ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದಾರೆ.
* ಬಜ್ಪೆ : ವಿಳಾಸ ಕೇಳುವ ನೆಪದಲ್ಲಿ ಸರ ಎಗರಿಸಿದ ಕಳ್ಳ ಪೊಲೀಸ್ ವಶ
ಮಂಗಳೂರು: ಮಂಗಳೂರು ತೆಂಕ ಎಡಪದವು ಗ್ರಾಮದ ಶಿಬ್ರಿಕೆರೆ ಗಣೇಶ್ ಮಿಲ್ ಬಳಿ ಇರುವ ಒಳ ರಸ್ತೆಯಲ್ಲಿ ನಡೆದುಕೊಂಡು ಮಧ್ಯಾಹ್ನ ವೇಳೆಯಲ್ಲಿ ಹೋಗುತ್ತಿದ್ದ ಒಂಟಿ ಮಹಿಳೆಯ ಬಳಿ ಸ್ಕೂಟರ್ನಲ್ಲಿ ಬಂದ ವ್ಯಕ್ತಿ ವಿಳಾಸ ಕೇಳುವ ನೆಪದಲ್ಲಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಹೋದ ಘಟನೆಗೆ ಸಂಬಂಧಿಸಿ ಬಜಪೆ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳೆಯಂಗಡಿ ಇಂದಿರಾ ನಗರದ ನಿವಾಸಿ ಅಬ್ದುಲ್ ರವೂಫ್ ಯಾನೆ ಆಟೋ ರವೂಫ್(30)ಬಂಧಿತ ಆರೋಪಿ.
ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ವಿಶೇಷ ತಂಡ ರಚಿಸಿದ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎಸ್. ಅವರು ಆರೋಪಿಯನ್ನು ಪತ್ತೆ ಮಾಡಿದ್ದು, ಆರೋಪಿತನಿಂದ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ, 50 ಸಾವಿರ ರೂಪಾಯಿ ಮೌಲ್ಯದ ಸ್ಕೂಟರ್, ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಆಟೋ ರಿಕ್ಷಾ ಮತ್ತು ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿತನ ವಿರುದ್ಧ ಮೂಡುಬಿದಿರೆ, ಮೂಲ್ಕಿ, ಬಜಪೆ, ಉಪ್ಪಿನಂಗಡಿ ಪೊಲೀಸ್ ಠಾಣೆ ಮತ್ತು ಹಾಸನ ಜಿಲ್ಲೆಯ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಸುಲಿಗೆ ಮತ್ತು ಕಳವಿಗೆ ಸಂಬಂ ಧಿಸಿದ ಪ್ರಕರಣ ದಾಖಲಾಗಿದೆ. ಈ ಪ್ರಕರಣಗಳಲ್ಲಿ ಆರೋಪಿತ 2 ತಿಂಗಳ ಹಿಂದೆಯಷ್ಟೇ ಜಾಮೀನು ಪಡೆದುಕೊಂಡಿದ್ದ. ಸರ ಮಾರಾಟದ ಹಣದಿಂದ ಆತ ಆಟೋ ರಿಕ್ಷಾ ಖರೀದಿಸಿದ್ದ.ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
* ಮಲ್ಪೆ : ಮೀನುಗಾರಿಕೆ ಇಲಾಖೆಯ ಕಚೇರಿಯಲ್ಲಿ ಅಗ್ನಿ ಅವಘಡ : ಸುಟ್ಟು ಭಸ್ಮ
ಮಲ್ಪೆ: ಮಲ್ಪೆ ಮೀನುಗಾರಿಕೆ ಇಲಾಖೆಯ ಕಚೇರಿಯ ಮೀಟಿಂಗ್ ರೂಮ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ನೂಟ್ ಉಂಟಾಗಿ ರೂಮ್ ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದೆ.
ಬೆಳಗ್ಗೆ ಕಚೇರಿ ತೆರೆದಾಗಲೇ ವಿಷಯ ಬೆಳಕಿಗೆ ಬಂದಿದ್ದು, ಉರಿಯುತ್ತಿದ್ದ ಅವಶೇಷಗಳನ್ನು ಅಗ್ನಿಶಾಮಕ ದಳದವರು ಬಂದು ನಂದಿಸಿದ್ದಾರೆ. ರೂಮ್ನೊಳಗಿದ್ದ ಹವಾನಿಯಂತ್ರಕ ಯಂತ್ರ ಸ್ಫೋಟಗೊಂಡಿದ್ದು, ರೂಮ್ನ ಒಳಗಿದ್ದ ಎಲ್ಲ ಕಡತಗಳು ಸುಟ್ಟು ಬೂದಿಯಾಗಿದೆ.
ಫ್ಯಾನ್, ಛೇರ್, ಟೇಬಲ್, ಲೈಫ್ಬಾಯ್, ಸೇರಿದಂತೆ ಪಾರ್ಟಿಶನ್ ಗೋಡೆ ಸಂಪೂರ್ಣ ಹಾನಿಯಾಗಿದೆ. ಬೆಂಕಿ ಇತರ ಕೋಣೆಯನ್ನು ಆವರಿಸಿದರೆ ಈ ಕಟ್ಟಡ ಪೂರ್ತಿ ಬೆಂಕಿಗಾಹುತಿಯಾಗುತ್ತಿತ್ತು ಎನ್ನಲಾಗಿದೆ. ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಮಲ್ಪೆ ಠಾಣೆಗೆ ದೂರು ನೀಡಲಾಗಿದೆ.
ಕ್ರೇನ್ ಪಲ್ಟಿ: ಆಪರೇಟರ್ ಜೀವ ಹೋಯ್ತು!
ಮಂಗಳೂರು: ಅದ್ಯಪಾಡಿಯಿಂದ ಕೆಂಜಾರಿಗೆ ಬರುತ್ತಿದ್ದ ಕ್ರೇನ್ನೊಂದು ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಬಳಿ ಕಾರ್ಯನಿರ್ವಹಿಸುತ್ತಿದ್ದ ಕ್ರೇನ್ ಪಲ್ಟಿಯಾಗಿ ಕ್ರೇನ್ ಆಪರೇಟರ್ ಪ್ರಾಣ ಕಳೆದುಕೊಂಡ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಉತ್ತರ ಪ್ರದೇಶದ ಕ್ರೇನ್ ಆಪರೇಟರ್ ಅರುಣ್ ಕುಮಾರ್ ಜಾಧವ್ ಎಂದು ಗುರುತಿಸಲಾಗಿದೆ.
ಕ್ರೇನ್ ಅದ್ಯಪಾಡಿಯಿಂದ ಕೆಂಜಾರ್ ಜಂಕ್ಷನ್ ಕಡೆಗೆ ವಿಮಾನ ನಿಲ್ದಾಣದ ನಿರ್ಗಮನ ಮಾರ್ಗವಾಗಿ ತೆರಳುತ್ತಿತ್ತು. ರಸ್ತೆಯ ಇಳಿಜಾರಿನ ಭಾಗದಲ್ಲಿ ವಾಹನ ನಿಯಂತ್ರಣ ಕಳೆದುಕೊಂಡು 20 ಅಡಿ ಆಳದ ಕಂದಕಕ್ಕೆ ಉರುಳಿದೆ ಎನ್ನಲಾಗಿದೆ.
ಕ್ರೇನ್ ಅಡಿಗೆ ಸಿಲುಕಿಕೊಂಡ ಆಪರೇಟರ್ ಅನ್ನು ಮೇಲೆಕ್ಕೆತ್ತಲು ಸುಮಾರು ಅರ್ಧ ತಾಸು ಕಾರ್ಯಾಚರಣೆ ಮಾಡಲಾಗಿದೆ. ಇನ್ನೊಂದು ಕ್ರೇನ್ ಮೂಲಕ ಮೇಲಕ್ಕೆತ್ತಿ ಅದರಡಿಗೆ ಸಿಲುಕಿಕೊಂಡ ಅಪರೇಟರ್ ಅನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನೆಯಲ್ಲಿ ಅರುಣ್ ಕುಮಾರ್ ಅವರಿಗೆ ತೀವ್ರ ಗಾಯಗಳಾಗಿವೆ. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಅರುಣ್ ಕುಮಾರ್ ಸಾವನ್ನಪ್ಪಿದ್ದಾರೆ.