ಮಳೆ ದೇವ ಕಿಗ್ಗ ಋಷ್ಯಶೃಂಗೇಶ್ವರನಿಗಿಂದು ಕುಡಿ ತೇರು!
– ಮಳೆ ದೇವರೆಂದೇ ಜಗತ್ಪ್ರಸಿದ್ಧಿಗೊಂಡ ಕಿಗ್ಗ ಶ್ರೀಶಾಂತಾಋಷ್ಯಶೃಂಗೇಶ್ವರ ಸ್ವಾಮಿ
– ಪ್ರತಿವರ್ಷ ರೈತ ಬೆಳೆದ ಧವಸ ಧಾನ್ಯಗಳು ಕೈಸೇರುವ ಸಮಯದಲ್ಲಿ ನಡೆಯುವ ಉತ್ಸವ
NAMMUR EXPRESS NEWS
ಶೃಂಗೇರಿ: ಮಳೆ ದೇವರೆಂದೇ ಜಗತ್ಪ್ರಸಿದ್ಧಿಗೊಂಡ ಹಾಗೂ ದೇಶ ವಿದೇಶಗಳಲ್ಲಿ ಭಕ್ತ ಸಮೂಹ ಹೊಂದಿರುವ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಶ್ರೀ ಶಾಂತಾಋಷ್ಯಶೃಂಗೇಶ್ವರ ಸ್ವಾಮಿಗೆ ಇಂದು “ಕುಡಿ ತೇರು” (ಚಿಕ್ಕ ತೇರು) ರಥೋತ್ಸವ ನೆರವೇರಿತು. ರಥೋತ್ಸವದಲ್ಲಿ ಕಿಗ್ಗಾ ಸೀಮೆಯ ಹಾಗೂ ತಾಲೂಕಿನ ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದರು.ಇತಿಹಾಸ ಪ್ರಸಿದ್ಧ ದೇವಾಲಯ ಇದಾಗಿದ್ದು ಅನೇಕ ಪೂಜಾ ವಿಧಿವಿಧಾನಗಳು ನೆರವೇರಿಸಲಾಯಿತು.
ಏನಿದು ಕುಡಿ ತೇರು ಹಬ್ಬ?
ಮಳೆದೇವರಾದ ಋಷ್ಯಶೃಂಗೇಶ್ವರನಿಗೆ ಪ್ರತಿ ವರ್ಷ ನಡೆಯುವ ಉತ್ಸವವಿದು. ರೈತ ತಾನು ಬೆಳದ ಫಸಲು ಕೈಸೇರುವ ಸಂದರ್ಭದಲ್ಲಿ ತನ್ನ ಕೃಷಿಗೆ ಮಳೆಯ ಸಹಕಾರ ನೀಡಿದ ಶಾಂತಾಋಷ್ಯಶೃಂಗೇಶ್ವರನಿಗೆ ಪೂಜೆ ಸಲ್ಲಿಸಿ ಬೆಳೆದ ಬೆಳೆಯನ್ನು ಕೊಯ್ಲು ಮಾಡುವ ಪದ್ದತಿ ಹಿಂದಿನಿಂದಲೂ ವಾಡಿಕೆಯಲ್ಲಿದೆ.ಹೀಗೆ ಪೂಜೆ ಸಲ್ಲಿಸಿ ನಡೆಸುವ ರಥೋತ್ಸವವನ್ನು “ಕುಡಿ ತೇರು (ಚಿಕ್ಕ ರಥೋತ್ಸವ)” ಎಂದು ಕರೆಯಲಾಗುತ್ತದೆ.