ಕರಾವಳಿ ಟಾಪ್ ನ್ಯೂಸ್
– ಕಾರ್ಕಳ: ಏಡಿ ಹಿಡಿಯಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು!
– ಪುತ್ತೂರು: ಬಸ್ಸು-ಬೈಕ್ ಅಪಘಾತ, ವಿದ್ಯಾರ್ಥಿಗಳಿಗೆ ಗಂಭೀರ ಗಾಯ
– ಮಣ್ಣು ಕುಸಿದು, ಮಂಗಳೂರಲ್ಲೊಂದು ಕಾರ್ಮಿಕನ ಪ್ರಾಣ ಹೋದ ಘಟನೆ!
– ಮಂಗಳೂರು: ಆಕಸ್ಮಿಕವಾಗಿ ಬುಲೆಟ್ ತಗುಲಿ ವ್ಯಕ್ತಿ ಗಾಯ!
– ಉಡುಪಿ: ಪಾಳುಬಿದ್ದ ಶೆಡ್ಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿ ಸಾವು!
NAMMUR EXPRESS
ಕಾರ್ಕಳ : ಏಡಿ ಹಿಡಿಯಲು ಹೋದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಡ್ತಲ ಗ್ರಾಮದಲ್ಲಿ ಸಂಭವಿಸಿದೆ ಕೃಷ್ಣ (55) ಮೃತವ್ಯಕ್ತಿ.
ಈ ವ್ಯಕ್ತಿ ವಿಪರೀತ ಕುಡಿತದ ಚಟ ಹೊಂದಿದ್ದು, ಜ. 5 ರಂದು ಸಂಜೆ 4 ಗಂಟೆಯಿಂದ ಜ. 7ರ ಸಂಜೆ 4.30ರ ಮದ್ಯಾವಧಿಯಲ್ಲಿ ಅತಿಯಾಗಿ ಅಮಲು ಪದಾರ್ಥ ಸೇವಿಸಿ ಕಡ್ತಲ ಗ್ರಾಮದ ಧರ್ಬುಜೆಯಲ್ಲಿರುವ ತಿರ್ಥೋಟ್ಟು ನದಿಯಲ್ಲಿ ಏಡಿ ಹಿಡಿಯಲು ಹೋಗಿದ್ದರು.
ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಪುತ್ತೂರು: ಬಸ್ಸು-ಬೈಕ್ ಅಪಘಾತ, ವಿದ್ಯಾರ್ಥಿಗಳಿಗೆ ಗಂಭೀರ ಗಾಯ
ಪುತ್ತೂರು: ಪುತ್ತೂರಿನ ಹೊರವಲಯ ಕೊಲ್ಯದಲ್ಲಿ ಜ.08 ರಂದು ಬೈಕ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್ನಲ್ಲಿದ್ದ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬೆಳ್ಳಿಪ್ಪಾಡಿ ನಿವಾಸಿಗಳಾಗಿರುವ ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿ ಬೈಕ್ ಸವಾರ ನಿಶಾಂತ್ ಮತ್ತು ಹಿಂಬದಿ ಸವಾರ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿ ಕಾರ್ತಿಕ್ ಎಂಬುವವರು ಗಾಯಗೊಂಡ ವಿದ್ಯಾರ್ಥಿಗಳು. ಬೈಕ್ನಲ್ಲಿ ಪೂತ್ತೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ವಿರುದ್ಧ ದಿಕ್ಕಿನ ಕಡೆಯಿಂದ ಬಂದ ಕೆಎಸ್ಆರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಗಾಯಾಳುಗಳನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದೊಯ್ಯಲಾಗಿರುವ ಕುರಿತು ವರದಿಯಾಗಿದೆ.
* ಮಂಗಳೂರು: ಮಣ್ಣು ಕುಸಿದು, ಕಾರ್ಮಿಕನ ಪ್ರಾಣ ಹೋದ ಘಟನೆ!
ಮಂಗಳೂರು: ಒಳಚರಂಡಿ ಕಾಮಗಾರಿ ವೇಳೆ ಮಣ್ಣಿನ ರಾಶಿ ಕುಸಿದು ಕೂಲಿ ಕಾರ್ಮಿಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಹೊಗೆಬೈಲ್ನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಕಮಲ್ ಹುಸೇನ್ (20) ಮೃತ ಕೂಲಿಕಾರ್ಮಿಕ ಎಂದು ಗುರುತಿಸಲಾಗಿದೆ. ಎಂಟು ಅಡಿ ಆಳದಲ್ಲಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ, ಸುತ್ತಮುತ್ತಲಿನ ಕೆಸರು ಒಳಕ್ಕೆ ನುಗ್ಗಿ, ಮೂವರು ಕಾರ್ಮಿಕರು ಸಿಲುಕಿಕೊಂಡಿದ್ದರು. ಸ್ಥಳೀಯ ನಿವಾಸಿಗಳು ಇಬ್ಬರು ಕಾರ್ಮಿಕರನ್ನು ಅವಶೇಷಗಳಿಂದ ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ಕಮಲ್ ಹುಸೇನ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದರು. ಈ ಘಟನೆ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
* ಮಂಗಳೂರು: ಆಕಸ್ಮಿಕವಾಗಿ ಬುಲೆಟ್ ತಗುಲಿ ವ್ಯಕ್ತಿ ಗಾಯ!
ಮಂಗಳೂರು: ನಗರದಲ್ಲಿ ಆಕಸ್ಮಿಕವಾಗಿ ಬುಲೆಟ್ ತಗುಲಿ ವ್ಯಕ್ತಿ ಗಾಯಗೊಂಡ ಘಟನೆ ವಾಮಂಜೂರಿನ ಗ್ಯಾರೇಜ್ ಒಂದರಲ್ಲಿ ಸಂಭವಿಸಿದೆ. ರೌಡಿ ಶೀಟರ್ ಸಫ್ವಾನ್ ಎಂಬಾತ ಬುಲೆಟ್ ತಗುಲಿ ಗಾಯಗೊಂಡ ವ್ಯಕ್ತಿ ಎಂದು ತಿಳಿಯಲಾಗಿದೆ. ರಿವಾಲ್ವರ್ ಒಂದನ್ನು ಸಫ್ವಾನ್ ಪರಿಶೀಲಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ್ದು ಪರಿಣಾಮ ಸಫ್ವಾನ್ ಹೊಟ್ಟೆಗೆ ಗುಂಡು ತಗುಲಿದೆ. ಇದೊಂದು ಆಕಸ್ಮಿಕ ಘಟನೆ ಎಂದು ತಿಳಿದುಬಂದಿದೆ. ಈತ ಕೆಲವು ವರ್ಷಗಳ ಹಿಂದೆ ನಡೆದ ಚರಣ್ ಎಂಬಾತನ ಕೊಲೆ ಪ್ರಕರಣ ಆರೋಪಿಯಾಗಿದ್ದು, ಸದ್ಯ ಈತನಿಗೆ ಆಕಸ್ಮಿಕವಾಗಿ ಗುಂಡೇಟು ತಗುಲಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
* ಉಡುಪಿ: ಪಾಳುಬಿದ್ದ ಶೆಡ್ಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿ ಸಾವು!
ಉಡುಪಿ: ನಿಟ್ಟೂರು ರಾಷ್ಟ್ರೀಯ ಹೆದ್ದಾರಿ ಸನಿಹದ ಸರಕಾರಿ ಜಾಗದಲ್ಲಿರುವ, ಪಾಳುಬಿದ್ದ ಶೆಡ್ಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ, ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ರೋಗಿಯನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಧೃಢೀಕರಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ವಲಸೆ ಕಾರ್ಮಿಕ ಮೈಲಾರಿ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದು, ಸಂಬಂಧಿಕರು ಉಡುಪಿ ನಗರ ಪೋಲಿಸ್ ಠಾಣೆ, ಅಥವಾ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.