ಕಾಫಿ ಕೊಯ್ಲು ಮಾಡುತ್ತಿದ್ದ ಕಾರ್ಮಿಕ ಮಹಿಳೆ ಮೇಲೆ ಕಾಡುಕೋಣ ದಾಳಿ..!!
– ಸ್ಥಳದಲ್ಲೇ ಕಾರ್ಮಿಕ ಮಹಿಳೆ ಸಾವು
– ಮಲೆನಾಡು ಭಾಗದಲ್ಲಿ ಹೆಚ್ಚಾಗಿದೆ ಕಾಡುಕೋಣಗಳ ಹಾವಳಿ
NAMMUR EXPRESS NEWS
ಮೂಡಿಗೆರೆ: ತೋಟದಲ್ಲಿ ಕಾಫಿ ಕೊಯ್ಲು ಮಾಡುತ್ತಿದ್ದ ಕಾರ್ಮಿಕ ಮಹಿಳೆ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಮೂಡಿಗೆರೆ ತಾಲ್ಲೂಕಿನ ಹಳೇಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಕಾಫಿ ಬೆಳೆಗಾರರಾದ ಹಳೇಕೋಟೆ ರಮೇಶ್ ಅವರ ಶಾರದಾಂಭ ಎಸ್ಟೇಟ್ನಲ್ಲಿ ಕಾಡುಕೋಣ ದಾಳಿ ಮಾಡಿದೆ. ಬುಧವಾರ ಬೆಳಿಗ್ಗೆ ಅಸ್ಸಾಂ ಮೂಲದ ಕಾರ್ಮಿಕರು ರಮೇಶ್ ಅವರ ತೋಟದಲ್ಲಿ ಕಾಫಿ ಕೊಯ್ಲು ಮಾಡುವುದರಲ್ಲಿ ನಿರತರಾಗಿದ್ದರು. ಸುಮಾರು 11 ಗಂಟೆ ಸಮಯದಲ್ಲಿ ಏಕಾಏಕಿ ಕಾಡುಕೋಣವೊಂದು ಕಾರ್ಮಿಕರ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಬಸೂರಿ ಬೀಬಿ (42 ವರ್ಷ) ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಡುಕೋಣ ಮಹಿಳೆಯ ಹೊಟ್ಟೆ ಮತ್ತು ಎದೆಯ ಭಾಗದಕ್ಕೆ ಕೊಂಬಿನಿಂದ ತಿವಿದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮೂಡಿಗೆರೆ ಎಂಜಿಎಂ ಆಸ್ಪತ್ರೆಗೆ ಕೊಂಡೊಯ್ದಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಮಲೆನಾಡು ಭಾಗದಲ್ಲಿ ಹೆಚ್ಚಾಗಿದೆ ಕಾಡುಕೋಣಗಳ ಹಾವಳಿ..!!??
ಮಲೆನಾಡು ಭಾಗದಲ್ಲಿ ಕಾಡುಕೋಣಗಳು ವಿಪರೀತ ಸಂಖ್ಯೆಯಲ್ಲಿದ್ದು, ನಿರಂತರವಾಗಿ ಕಾಫಿ ತೋಟಗಳಿಗೆ,ರೈತರ ಜಮೀನಿಗೆ ಲಗ್ಗೆ ಇಡುತ್ತಿವೆ. ಕಾಫಿ ತೋಟಗಳಲ್ಲಿ ಗಿಡಗಳನ್ನು ಕಿತ್ತು ಹಾಕುವುದಲ್ಲದೇ,ರೈತರು ಬೆಳೆದ ಬೆಳೆಯನ್ನು ನಾಶ ಮಾಡುತ್ತಿವೆ, ಈ ರೀತಿಯ ಜೀವ ಹಾನಿಗೂ ಕಾರಣವಾಗುತ್ತಿವೆ. ಕಾಡುಕೋಣಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿದ್ದಾರೆ.