ಕರಾವಳಿ ಟಾಪ್ ನ್ಯೂಸ್
– ಮೂಡುಬಿದಿರೆ: ವಿದ್ಯುತ್ ಶಾರ್ಟ್ ಸರ್ಕಿಟ್ 2 ಎಕರೆ ಪ್ರದೇಶ ಬಸ್ಮ!
– ಪುತ್ತೂರಿನಲ್ಲಿ ಕೆಎಸ್ಆರ್ಟಿಸಿ ಬಸ್- ಬೈಕ್ ಮುಖಾಮುಖಿ, ಇಬ್ಬರು ಗಂಭೀರ!
– ಮಂಗಳೂರು: ಪರ್ಸನಲ್ ಕ್ಯುಆರ್ ಕೋಡ್ ಕೊಟ್ಟು ವಂಚನೆ, ಲಕ್ಷಾಂತರ ರೂ. ಗುಳುಂ!
– ಸುಳ್ಯ : ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆಸೆಯಲ್ಪಟ್ಟ ಘಟನೆ, ಶಿಕ್ಷೆ!
NAMMUR EXPRESS NEWS
ಮೂಡುಬಿದಿರೆ: ಮೂಡುಬಿದಿರೆ ಸಮೀಪದ ಕಡಲಕೆರೆ ಅಗ್ನಿಶಾಮಕ ದಳದ ಕಚೇರಿ ಬಳಿ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದಾಗಿ ಅರಣ್ಯ ಇಲಾಖೆಗೆ ಸೇರಿದ ಸುಮಾರು ಎರಡು ಎಕರೆ ಜಾಗ ಅಗ್ನಿಗೆ ಅವುತಿಯಾಗಿರುವ ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದ ಕಚೇರಿ ಸಮೀಪವೇ 2 ಎಕರೆಯಷ್ಟು ಪ್ರದೇಶ ಬೆಂಕಿಗಾಹುತಿಯಾದರೂ ಅಗ್ನಿಶಾಮಕ ಸಿಬ್ಬಂದಿಗೆ ಹಾಗೂ ಮೆಸ್ಕಾಂನವರ ಗಮನಕ್ಕೆ ಬರದಿರುವುದು ವಿಪರ್ಯಾಸವಾಗಿದೆ. ಈ ಬಗ್ಗೆ ಸಮೀಪದ ಗೂಂಡಂಗಡಿ ಮಾಲಕರೊಬ್ಬರು ಪುರಸಭೆ ಉಪಾಧ್ಯಕ್ಷರಾದ ನಾಗರಾಜ್ ಪೂಜಾರಿ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಬಳಿಕ ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು. ಈ ವೇಳೆ ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
* ಪುತ್ತೂರಿನಲ್ಲಿ ಕೆಎಸ್ಆರ್ಟಿಸಿ ಬಸ್- ಬೈಕ್ ಮುಖಾಮುಖಿ, ಇಬ್ಬರು ಗಂಭೀರ!
ಪುತ್ತೂರು: ಬೈಕ್ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜ.8ರಂದು ಬೆಳಗ್ಗೆ ಪುತ್ತೂರು ಕೊಡಿಮರ ರಸ್ತೆಯ ಕೊಲ್ಯ ಎಂಬಲ್ಲಿ ನಡೆದಿದೆ. ಗಾಯಗೊಂಡ ಸವಾರರನ್ನು ಬೆಳ್ಳಿಪಾಡಿಯ ನಿಶಾಂತ್ ಮತ್ತು ಕಾರ್ತಿಕ್ ಎಂದು ಗುರುತಿಸಲಾಗಿದೆ. ಬೈಕ್ನಲ್ಲಿ ಪುತ್ತೂರಿಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಇಬ್ಬರು ಸವಾರರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
* ಮಂಗಳೂರು: ಪರ್ಸನಲ್ ಕ್ಯುಆರ್ ಕೋಡ್ ಕೊಟ್ಟು ವಂಚನೆ, ಲಕ್ಷಾಂತರ ರೂ. ಗುಳುಂ!
ಮಂಗಳೂರು : ನಂಬಿಕೆ ಗಳಿಸಿ ಉಂಡ ಮನೆಗೆ ಕಣ್ಣ ಹಾಕಿದವನ ಬುದ್ಧಿ ಕೊನೆಗೂ ಮಾಲೀಕನಿಗೆ ಗೊತ್ತಾಗಿದೆ. ಹೌದು, ಪೆಟ್ರೋಲ್ ಬಂಕ್ನ ಸೂಪರ್ವೈಸರ್ ತನ್ನ ವೈಯಕ್ತಿಕ ಖಾತೆಯ ಕ್ಯು ಆರ್ ಕೋಡ್ ಅನ್ನು ಹಾಕಿ ಬಂಕ್ಗೆ 58.85 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಆದರೆ ಹಣದ ಆಸೆಗೆ ಆರೋಪಿ ಮೋಹನದಾಸ್ ಈತ 2023ರ ಮಾ. 1ರಿಂದ ಜು. 31ರ ವರೆಗೆ ಪೆಟ್ರೋಲ್ ಬಂಕ್ನಲ್ಲಿ ಬಂಕ್ನ ಕ್ಯುಆರ್ ಕೋಡ್ ತೆಗೆದು ತನ್ನ ವೈಯಕ್ತಿಯ ಖಾತೆಯ ಕ್ಯುಆರ್ ಕೋಡ್ನ್ನು ಅಳವಡಿಸಿ ಗ್ರಾಹಕರಿಗೆ ಬಂಕ್ನದ್ದೇ ಕ್ಯುಆರ್ ಕೋಡ್ ಎಂದು ನಂಬಿಸಿ 58,85,333 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ರಿಲಯನ್ಸ್ ಔಟ್ಲೆಟ್ ಫ್ಯುಯೆಲ್ ಬಂಕ್ನ ಮ್ಯಾನೇಜರ್ ನಗರದ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.
* ಸುಳ್ಯ : ಬಸ್ಸಿನಿಂದ ವಿದ್ಯಾರ್ಥಿಯನ್ನು ರಸ್ತೆಗೆಸೆಯಲ್ಪಟ್ಟ ಘಟನೆ, ಶಿಕ್ಷೆ ಖಚಿತ!
ಸುಳ್ಯ: ಬಸ್ಸಿನಿಂದ ವಿದ್ಯಾರ್ಥಿ ರಸ್ತೆ ಗೆಸೆಯಲ್ಪಟ್ಟ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು, ಬಸ್ಸಿನ ಚಾಲಕ ಹಾಗೂ ನಿರ್ವಾಹಕನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2019 ಆ.24ರಂದು ಘಟನೆ ನಡೆದಿದ್ದು, ಬಸ್ ಚಾಲಕ ವಿಷ್ಣು ಕುಮಾರ್ ಮತ್ತು ನಿರ್ವಾಹಕ ವಿಜಯಕುಮಾರ್ ಅವರು ಬಸ್ಸಿನಲ್ಲಿ ನಿಂತಿಕಲ್ಲು ಕಡೆಯಿಂದ ಕಾಣಿಯೂರು ಕಡೆಗೆ ಸಂಚರಿಸುವ ವೇಳೆ ನಿರ್ಲಕ್ಷ್ಯತನದಿಂದ ಪ್ರಯಾಣಿಕರು ಹತ್ತುವ ಹಾಗೂ ಇಳಿಯುವ ದ್ವಾರದ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸದೆ, ವಿಷ್ಣು ಕುಮಾರ್ ಬಸ್ಸನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಡಬ ತಾಲೂಕು ಬೆಳಂದೂರು ಎಂಬಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಮಹಮ್ಮದ್ ಅಫೀಝ್ ಎಂಬವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಧೀಶರಾದ ಅರ್ಪಿತಾ ಅವರು ಆರೋಪಿಗಳ ಅಪರಾಧ ಸಾಬೀತಾಗಿದ್ದು ಅವರನ್ನು ದೋಷಿ ಎಂದು ಘೋಷಿಸಿ, ಒಂದನೇ ಆರೋಪಿಗೆ ಕಲಂ 279 ರಡಿಯಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸ ಮತ್ತು ರೂ. 1000/- ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹವಾಸ, ಎರಡನೇ ಆರೋಪಿಗೆ ಕಲಂ 336 ರಡಿಯಲ್ಲಿ 1 ತಿಂಗಳ ಸಾದಾ ಕಾರಾಗೃಹವಾಸ ಮತ್ತು ರೂ. 250/- ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹವಾಸ ಶಿಕ್ಷೆಗೆ ಆದೇಶ ನೀಡಿದ್ದಾರೆ.