- ಗುಡ್ಡಕುಸಿತಕ್ಕೆ ಇಬ್ಬರು ಮಕ್ಕಳ ಬಲಿ
- ಹಲವೆಡೆ ನೆರೆ ಭೀತಿ, ತಗ್ಗು ಪ್ರದೇಶಗಳಿಗೆ ಆತಂಕ
NAMMUR EXPRESS NEWS
ಬೆಂಗಳೂರು: ರಾಜದಾನಿಯೂ ಸೇರಿದಂತೆ ರಾಜ್ಯಾದ್ಯಂತ ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ಕೊಡಗು, ಶಿವಮೊಗ್ಗ ಸೇರಿದಂತೆ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮನೆ ಹಿಂದಿನ ಗುಡ್ಡ ಜರಿದು ಮನೆಯೊಳಗಿದ್ದ ಇಬ್ಬರು ಮಕ್ಕಳು ಭೂಸಮಾಧಿಯಾಗಿದ್ದಾರೆ.
ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಕುಮಾರಧಾರೆಗೆ ಸಮೀಪದ ಗುಡ್ಡ ಕುಸಿದುದರಿಂದ ಮನೆಯೊಳಗಿದ್ದ ಇಬ್ಬರು ಮಕ್ಕಳು ಭೂಸಮಾಧಿಯಾಗಿದ್ದು, ತಡರಾತ್ರಿ ಕಾರ್ಯಾಚರಣೆಯ ಬಳಿಕ ಮಕ್ಕಳ ಶವಗಳನ್ನು ಹೊರತೆಗೆಯಲಾಯಿತು.
ತಗ್ಗು ಪ್ರದೇಶಗಳಿಗೆ ಆತಂಕ:
ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಉಂಟಾಯಿತು. ನೆರೆ ನೀರು ನುಗ್ಗುವ ಭೀತಿಯಲ್ಲಿರುವ ತಗ್ಗು ಪ್ರದೇಶದ ಜನತೆ ಆತಂಕಪಟ್ಟರು. ರಾತ್ರಿ ಹತ್ತು ಗಂಟೆಯ ಬಳಿಕ ಮಳೆ ಶುರುವಾದುದರಿಂದ ಟ್ರಾಫಿಕ ಸಮಸ್ಯೆ ಉಂಟಾಗಲಿಲ್ಲ.
ಕೊಡಗಿನಲ್ಲಿ ನೆರೆ ಭೀತಿ:
ಕೊಡಗಿನ ಹಲವೆಡೆ ಭಾರಿ ಮಳೆಯಾಗಿದೆ. ಕೊಯನಾಡಿನ ಕೊಯನಾಡು ಕಿಂಡಿ ಅಣಿಕಟ್ಟು ಬಳಿ ಹಲವು ಮನೆಗಳು ಜಲಾವೃತವಾಗಿವೆ. ಭಾರೀ ಮಳೆಯಿಂದ ಏಕಾಏಕಿ ನದಿ ನೀರು ಉಕ್ಕಿ ಬಂದಿದೆ. 20 ದಿನಗಳ ಹಿಂದೆ ಕೂಡ ಕಿಂಡಿ ಅಣಿಕಟ್ಟೆಯಿಂದ ನೀರು ನುಗ್ಗಿ ಅವಾಂತರ ಆಗಿತ್ತು. ಸುತ್ತಮುತ್ತಲಿನ ಮನೆಗಳವರು ಎತ್ತರದ ಸುರಕ್ಷಿತ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಸಂತ್ರಸ್ತರನ್ನು ಕಾಳಜಿ ಕೇಂದ್ರಕ್ಕೆ ವರ್ಗಾಯಿಸಲು ಸಿದ್ಧತೆ ನಡೆದಿದೆ.
ಶಿವಮೊಗ್ಗದಲ್ಲಿ ಆ.2ರಿಂದ 4ರವರೆಗೆ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ ಹೊತ್ತು ಮಳೆ ಸುರಿಯುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆ ಸಾಧ್ಯತೆಯಿದೆ.
ಕುರುಬರಜೆಡ್ಡಿನಲ್ಲಿ ಗದ್ದೆಗಳಿಗೆ ಹಾನಿ:
ಸೋಮವಾರ ಸುರಿದ ಭಾರಿ ಮಳೆಗೆ ಸಾಗರ ತಾಲ್ಲೂಕಿನ ಭತ್ತದ ಗದ್ದೆ, ಶುಂಠಿ ಗದ್ದೆ ತೋಟಗಳಿಗೆ ನೀರು ನುಗ್ಗಿ ಭತ್ತದ ನಾಟಿ.ಹಾಗೂ ಶುಂಠಿ ಸಸಿಗಳು ಸಂಪೂರ್ಣವಾಗಿ ಹಾಳಾಗಿವೆ. ಆಚಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಲಕ್ಕವಳ್ಳಿ ಗ್ರಾಮದ ಕುರುಬರಜೆಡ್ಡು ಎಂಬಲ್ಲಿ ಕೆರೆಕೋಡಿ ಹರಿದು ಸುಮಾರು 15 ಎಕರೆ ನಾಟಿ ಮಾಡಿದ ಗದ್ದೆ ಹಾಗೂ ಶುಂಠಿಯ ಬೆಳೆ ಸಂಪೂರ್ಣ ನಾಶವಾಗಿದೆ.
ಮಂಡ್ಯ ನಗರ, ಜಿಲ್ಲೆಯ ವಿವಿಧೆಡೆ ಸೋಮವಾರ ಧಾರಾಕಾರ ಮಳೆಯಾಗಿದ್ದು, ಮಂಡ್ಯದ ಹೃದಯ ಭಾಗದಲ್ಲಿರುವ ಮಹಾವೀರ ವೃತ್ತ ಜಲಾವೃತವಾಗಿದೆ. ವಾಹನ ಸವಾರರು ಪರದಾಡಿದ್ದಾರೆ.