ಶರಣಾಗಿದ್ದ ನಕ್ಸಲರ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ!
– ಕೊಪ್ಪ ತಾಲೂಕಿನ ಮೇಗೂರು ಅರಣ್ಯದಲ್ಲಿ ಕಾರ್ಯಾಚರಣೆ
– ವಿದೇಶಿ, ಸ್ವದೇಶಿ ಬಂದೂಕು, ಗುಂಡುಗಳು ಪತ್ತೆ
NAMMUR EXPRESS NEWS
ಚಿಕ್ಕಮಗಳೂರು: ನಕ್ಸಲಿಸಂ ಅನ್ನು ತೊರೆದು ಮುಖ್ಯವಾಹಿನಿಗೆ ಬಂದಿದ್ದ ಆರು ನಕ್ಸಲರ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬುಧವಾರ ಮುಖ್ಯವಾಹಿನಿಗೆ ಬಂದ ನಕ್ಸಲರು, ಅದೇ ಮೇಗೂರು ಅರಣ್ಯದಿಂದ ಹೊರ ಬಂದಿದ್ದರು. ನಕ್ಸಲರು ಶರಣಾಗುವ ಮೊದಲು ಕೊನೆಯ ಸಭೆ ನಡೆಸಿದ್ದ ಮೇಗೂರು ಅರಣ್ಯ ಪ್ರದೇಶದಲ್ಲಿ ಪೊಲೀಸ್ ತಂಡ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಕೊಪ್ಪ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡದ
ಎರಡು ದಿನಗಳ ನಿರಂತರ ಹುಡುಕಾಟದ ನಂತರ ಮೇಗೂರು ಅರಣ್ಯ ಪ್ರದೇಶದಲ್ಲಿ ಆರು ಬಂದೂಕು ಹಾಗೂ ಮದ್ದು ಗುಂಡು ದೊರೆತಿವೆ. ಅಂತೆಯೇ ಒಂದು ಎ.ಕೆ-56, ಮೂರು 303 ರೈಫಲ್, ಹನ್ನೆರಡು ಬೋರ್ ಎಸ್ಬಿಬಿಎಲ್, ಒಂದು ಸ್ವದೇಶ ನಿರ್ಮಿತ ಬಂದೂಕು ಸಿಕ್ಕಿದೆ. 7.62 ಎಂಎಂ ಎ.ಕೆ. ಮದ್ದುಗುಂಡು-11, 303- ರೈಫಲ್ ಮದ್ದುಗುಂಡು – 133, 12 ಬೋರ್ ಕಾರ್ಟ್ರಿಡ್ಜಸ್ – 24, ಸ್ವದೇಶ ನಿರ್ಮಿತ ಪಿಸ್ತೂಲ್ ಮದ್ದುಗುಂಡುಗಳು – 8 ಸೇರಿ ಒಟ್ಟು 176 ಮದ್ದುಗುಂಡು, ಎ.ಕೆ-56 ಖಾಲಿ ಮ್ಯಾಗ್ಜಿನ್ – 01 ದೊರೆತಿದೆ.
ಜಯಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 251 (1) (ಬಿ), 7 ಮತ್ತು 25 (1ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ.