- ಸೂಕ್ತ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನ?
- ಗುಲಾಂ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ
NAMMUR EXPRESS NEWS
ದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ವ್ಯವಸ್ಥಿತ ಬದಲಾವಣೆಗಳನ್ನು ಬಯಸಿದ 23 ನಾಯಕರ ಗುಂಪಿನಲ್ಲಿ ಗುಲಾಂ ನಬಿ ಆಜಾದ್ ಕೂಡ ಸದಸ್ಯರಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಗುಲಾಂ ನಬಿ ಆಜಾದ್ ಜಮ್ಮು ಕಾಂಗ್ರೆಸ್ ಪ್ರಚಾರ ಸಮಿತಿ ಸ್ಥಾನದಿಂದಲೂ ಅವರು ಕೆಳಗಿಳಿದಿದ್ದರು. ಇನ್ನು ಗುಲಾಂ ನಬಿ ಆಜಾದ್ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಈ ಸಂಬಂಧ ಪತ್ರ ಬರೆದಿರುವ ಗುಲಾಂ ನಬಿ ಆಜಾದ್, 2013ರಲ್ಲಿ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪಕ್ಷದ ಎಲ್ಲಾ ಹಿರಿಯ ಹಾಗೂ ಅನುಭವಿ ನಾಯಕರನ್ನು ಬದಿಗಿಟ್ಟಿದ್ದಾರೆ ಹಾಗೂ ಅನುಭವವೇ ಇಲ್ಲದವರು ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳಲು ಆರಂಭಿಸಿದರು ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ವೇದಿಕೆಗಳಲ್ಲಿ ಸಕ್ರಿಯರಾಗಿದ್ದ ಗುಲಾಂ ನಬಿ ಆಜಾದ್ ರಾಜೀನಾಮೆ ಪಕ್ಷದ ಅನೇಕ ನಾಯಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಅಕ್ರಮ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಮನ್ಸ್ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ್ದ ಗೌರವ ಯಾತ್ರೆಯಲ್ಲಿಯೂ ಸಹ ಗುಲಾಂ ನಬಿ ಆಜಾದ್ ಭಾಗಿಯಾಗಿದ್ದರು. ಅಲ್ಲದೇ ಈ ಸಂಬಂಧ ಪತ್ರಿಕಾಗೋಷ್ಠಿಗಳಲ್ಲಿಯೂ ಗುಲಾಂ ನಬಿ ಆಜಾದ್ ಮಾತನಾಡಿದ್ದರು.
ಆಜಾದ್ ಭಿನ್ನಮತೀಯ ಜಿ-23 ರ ಮುಖ್ಯಸ್ಥರಾಗಿದ್ದಾರೆ. ಮತ್ತು ಮೇಲ್ಮನೆಗೆ ನಾಮನಿರ್ದೇಶನಕ್ಕಾಗಿ ಪಕ್ಷದಿಂದ ನಿರ್ಲಕ್ಷಿಸಲ್ಪಟ್ಟಿದ್ದರು. ಪಕ್ಷದಲ್ಲಿ ನನ್ನ ಅನುಭವಕ್ಕೆ ಸೂಕ್ತ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನದಿಂದ ಗುಲಾಂ ನಬಿ ಆಜಾದ್ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ದಟ್ಟವಾಗಿದೆ. ರಾಜಕೀಯವಾಗಿ ಗುಲಾಂ ಮುಂದಿನ ನಡೆ ಏನು ಎನ್ನುವುದು ಇನ್ನೂ ನಿಗೂಢವಾಗಿದೆ.