- ಶಿಕ್ಷಣ ಇಲಾಖೆಗೆ ವರದಿ ಕೇಳಿದ ಮಕ್ಕಳ ಆಯೋಗ
- ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಸ್ಪೆಷಲ್ ಕ್ಲಾಸ್!?
NAMMUR EXPRESS NEWS
ಬೆಂಗಳೂರು : ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂತೆಂದರೇ ಸಾಕು ಮಕ್ಕಳಿಗೆ ಅದೆಲ್ಲಿಲ್ಲದ ಖುಷಿ. ಬೇಸಿಗೆ ರಜೆ ಸಂತೋಷದಿಂದ ಕಳೆಯಲು ವಿದ್ಯಾರ್ಥಿಗಳು ಹವಣಿಸುತ್ತಾರೆ. ಆದರೆ ಬೇಸಿಗೆ ರಜೆಯಲ್ಲಿಯೂ ಕೆಲವು ಶಾಲೆಗಳಲ್ಲಿ 9ನೇ ತರಗತಿಯಿಂದ 10ನೇ ತರಗತಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದು ಈ ಬಗ್ಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವರದಿ ಕೇಳಿದೆ.
ಬೇಸಿಗೆ ರಜೆಯಲ್ಲಿಯು ತರಗತಿಗೆ ಹಾಜರಾಗುವಂತೆ ಶಾಲೆಗಳು ಮಕ್ಕಳ ಮೇಲೆ ಒತ್ತಡ ಹೇರುವ ಮೂಲಕ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ವಾಸುದೇವ ಶರ್ಮಾ ಅವರು ಆಯೋಗಕ್ಕೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ಕೆಲವು ಸಿಬಿಎಸ್ ಸಿ ಮತ್ತು ಐಸಿಎಸ್ ಸಿ ಶಾಲೆಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಗ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಿಂದ ವರದಿ ಕೇಳಿದೆ.
ಸಿಬಿಎಸ್ ಇಗೆ ಸಂಯೋಜಿತವಾದ ಕೆಲವು ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲಿಯೂ 10ನೇ ತರಗತಿಗೆ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿರುವ ಕುರಿತು ಮಕ್ಕಳ ಹಕ್ಕುಗಳ ಕಾರ್ಯಕರ್ತರು ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಸಿಬಿಎಸ್ಇ ಪ್ರಾದೇಶಿಕ ಕಚೇರಿಗೆ ಪತ್ರ ಬರೆದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ 7 ದಿನಗಳಲ್ಲಿ ವರದಿ ನೀಡುವಂತೆ ತಿಳಿಸಿದೆ.