- ವೇತನ ಹೆಚ್ಚಳ ಜಾರಿಗೆ ಅನುದಾನ: ಆರ್ಥಿಕ ಇಲಾಖೆಯಿಂದ ಸೂಚನೆ
NAMMUR EXPRESS NEWS
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಈಗಾಗಲೇ ರಾಜ್ಯ ಸರ್ಕಾರ ಆದೇಶಿಸಿರುವ ಶೇ.17 ರಷ್ಟು ವೇತನ ಹೆಚ್ಚಳವು ಏಪ್ರಿಲ್ 1ರಿಂದಲೇ ಜಾರಿಗೆ ಬಂದಿದೆ. ಈ ವೇತನ ಹೆಚ್ಚಿಸಲು ಅಗತ್ಯವಾಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಗೆ ಆರ್ಥಿಕ ಇಲಾಖೆಯು ಅಗತ್ಯ ಸೂಚನೆ ನೀಡಿದೆ.
ವೇತನ ಹೆಚ್ಚಳ ಮಾಡುವಂತೆ ಕಳೆದ ಮಾರ್ಚ್ 1 ರಂದು ಸರ್ಕಾರಿ ನೌಕರರು ಮುಷ್ಕರ ನಡೆಸಿದ ವೇಳೆ ನೌಕರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು ಶೇ. 17 ರಷ್ಟು ವೇತನ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿತ್ತು. ಏಪ್ರಿಲ್ 1 ರಿಂದ ಇದು ಜಾರಿಗೆ ಬರಲಿದೆ ಎಂದು ಪ್ರಕಟಿಸಲಾಗಿತ್ತು.
ಆದರೆ ‘ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಏಪ್ರಿಲ್ ತಿಂಗಳ ವೇತನದಲ್ಲಿಯೇ ಈ ಹೆಚ್ಚಳ ಜಾರಿಗೆ ಬರುತ್ತದೆಯೇ ಎಂಬುದರ ಕುರಿತು ನೌಕರರಲ್ಲಿ ಸಣ್ಣ ಆತಂಕವೂ ಇತ್ತು. ಇದೀಗ ಆ ಆತಂಕ ದೂರವಾಗಿದೆ.
‘ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಹಿನ್ನಲೆಯಲ್ಲಿ ಸರ್ಕಾರದ ನೀತಿ ನಿರ್ಣಯದಂತೆ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಿ, ರಾಜ್ಯ ಸರ್ಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಾಗೂ ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ನಿರ್ಧರಿಸಿರುತ್ತದೆ” ಎಂದು ಅಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿತ್ತು.
ಏಪ್ರಿಲ್ ತಿಂಗಳಿನಿಂದಲೇ ಶೇ.17 ತಾತ್ಕಾಲಿಕ ಪರಿಹಾರವಾಗಿ ವೇತನವನ್ನು ಹೆಚ್ಚಿಸಲು 2023-24 ನೇ ಸಾಲಿನ ಬಜೆಟ್ನಲ್ಲಿ ಉದ್ದೇಶಿತ ಶೀರ್ಷಿಕೆಯಡಿಯಲ್ಲಿ ಯಾವುದೇ ಬೇಡಿಕೆಯಡಿ ಅನುದಾನವನ್ನು ಒದಗಿಸಲಾಗಿರಲಿಲ್ಲ. ಹೀಗಾಗಿ ವೇತನವನ್ನು ಹೇಗೆ ಹೆಚ್ಚಿಸಬೇಕೆಂದು ಆರ್ಥಿಕ ಇಲಾಖೆಯು ಎಲ್ಲ ಇಲಾಖೆಗಳಿಗೆ ಸುತ್ತೋಲೆಯಲ್ಲಿ ಮಾರ್ಗದರ್ಶನ ಮಾಡಿದೆ.
ವೇತನ ಹೆಚ್ಚಳ ಮಾಡಲು ಅಗತ್ಯವಾಗಿರುವ ಅನುದಾನವನ್ನು ಇತರೆ ಭತ್ಯೆಗಾಗಿ ಒದಗಿಸಲಾಗಿರುವ ಅನುದಾನದಿಂದ ಪಡೆದು ಹೆಚ್ಚಳ ಮಾಡಬೇಕು. ಅನುದಾನದಲ್ಲಿ ಕೊರತೆಯಾದಲ್ಲಿ ವಿವಿಧ ಬೇಡಿಕೆಗಳಡಿ ಖಾಲಿ ಹುದ್ದೆಗಳಿಗಾಗಿ ಒದಗಿಸಿರುವ ಅನುದಾನದಿಂದ ಪುನರ್ವಿನಿಯೋಗ ಮಾಡಲಾಗುವುದು ಎಂದು ಎಲ್ಲ ಇಲಾಖೆಗಳಿಗೆ ತಿಳಿಸಲಾಗಿದೆ. ಈ ವೇತನ ಹೆಚ್ಚಳವು ಸರ್ಕಾರಿ ನೌಕರ ಮೂಲ ವೇತನದ ಮೇಲೆ 17% ಆಗಿರುತ್ತದೆ.