- ವಿಧಾನ ಸಭಾ ಮತದಾನ ಶುರುವಾಯ್ತು!
- 80 ವರ್ಷ ಮೇಲ್ಪಟ್ಟವರಿಗೆ, ವಿಶೇಷ ಚೇತನರಿಗೆ ಮತದಾನ
- ಮೇ.10 ರಂದು ಕಾರ್ಮಿಕರಿಗೆ ವೇತನ ಸಹಿತ ರಜೆ
- ಮೇ.2ರಿಂದ 4ರವರೆಗೆ ಸರ್ಕಾರಿ ನೌಕರರ ಅಂಚೆ ಮತದಾನ
NAMMUR EXPRESS NEWS
ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಏಪ್ರಿಲ್ 29ರ ಶನಿವಾರದಿಂದ ಮತದಾನ ಆರಂಭಗೊಳ್ಳಲಿದೆ.
ಹೌದು.80 ವರ್ಷ ಮೇಲ್ಪಟ್ಟವರಿಗೆ, ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಬ್ಯಾಲೆಟ್ ಪೇಪರ್ ವೋಟಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಈಗಾಗಲೇ ಈ ಬಗ್ಗೆ ಚುನಾವಣಾ ಆಯೋಗದಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 29ರಿಂದ ಮೇ.6ರವರೆಗೆ 80 ವರ್ಷ ಮೇಲ್ಪಟ್ಟವರಿಗೆ, ಅಂಗವಿಕಲರು ಹಾಗೂ ವಿಕಲಚೇತನರಿಗೆ ಚುನಾವಣಾ ಸಿಬ್ಬಂದಿಗಳು ಬ್ಯಾಲೆಟ್ ಪೇಪರ್ ನೀಡುವ ಮೂಲಕ ಮತದಾನ ಪ್ರಕ್ರಿಯೆಯನ್ನು ನಡೆಸಲಿದ್ದಾರೆ ಎಂದಿದೆ.
ಅಂದಹಾಗೇ ರಾಜ್ಯದಲ್ಲಿ 12.15 ಲಕ್ಷದಷ್ಟು 80 ವರ್ಷ ಮೇಲ್ಪಟ್ಟವರಿದ್ದಾರೆ. ಅವರಿಗೆಲ್ಲ ಇಂದಿನಿಂದ ಮನೆ ಮನೆಗೆ ತೆರಳಿ ಚುನಾವಣಾ ಸಿಬ್ಬಂದಿಗಳು ಬ್ಯಾಲೆಟ್ ಪೇಪರ್ ನೀಡಿ, ಮತದಾನ ಪ್ರಕ್ರಿಯೆಯನ್ನು ನಡೆಸಲಿದ್ದಾರೆ.
ಬೆಂಗಳೂರಿನಲ್ಲಿ 80 ವರ್ಷ ಮೇಲ್ಪಟ್ಟವರ ಸಂಖ್ಯೆ 2 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ. ಇವರಲ್ಲಿ 9,152 ಮಂದಿ ಮತದಾರರು ಮನೆಯಿಂದಲೇ ಬ್ಯಾಲೆಟ್ ಪೇಪರ್ ವೋಟಿಂಗ್ ಮಾಡಲಿದ್ದಾರೆ.
ಬ್ಯಾಲೆಟ್ ಪೇಪರ್ ವೋಟಿಂಗ್ ಹೇಗೆ ನಡೆಯಲಿದೆ?
ಆರಂಭಗೊಳ್ಳುತ್ತಿರುವಂತ ಬ್ಯಾಲೆಟ್ ಪೇಪರ್ ವೋಟಿಂಗ್ ಅಂದ್ರೆ ಏನು ಅನ್ನೋದು ಅನೇಕರಿಗೆ ಕುತೂಹಲವಾಗಿದೆ. ಇದೊಂದು ಗೌಪ್ಯ ಮತದಾನದ ವ್ಯವಸ್ಥೆಯಾಗಿದೆ. ಸ್ಥಳೀಯ ಪೊಲೀಸರು ಹಾಗೂ ಚುನಾವಣಾ ಸಿಬ್ಬಂದಿಗಳ ಸಮ್ಮುಖದಲ್ಲಿ ಹಿರಿಯ ನಾಗರೀಕರು, ಅಂಗವಿಕಲರಿಗೆ ಬ್ಯಾಲೆಟ್ ಪೇಪರ್ ನಲ್ಲಿ ಮತ ಚಲಾಯಿಸಲು ನೀಡಲಾಗುತ್ತದೆ.
ಚುನಾವಣಾ ಸಿಬ್ಬಂದಿ ನೀಡುವಂತ ಬ್ಯಾಲೆಟ್ ಪೇಪರ್ ನಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರು ತಮ್ಮ ಮತವನ್ನು ಗೌಪ್ಯವಾಗಿ ಚಲಾಯಿಸಿ, ಮತಪೆಟ್ಟಿಗೆಯಲ್ಲಿ ಹಾಕಲಿದ್ದಾರೆ. ಈ ಮತಪೆಟ್ಟಿಗೆಯನ್ನು ಮತದಾನದ ನಂತ್ರ ಸ್ಟ್ರಾಂಗ್ ರೂಮ್ ನಲ್ಲಿ ಇರಿಸಲಾಗುತ್ತದೆ. ಮೇ.13ರ ಮತಏಣಿಕೆಯಂದು, ಈ ಮತಗಳನ್ನು ಏಣಿಕೆ ಮಾಡಲಾಗುತ್ತದೆ.
ಮೇ.10 ರಂದು ಕಾರ್ಮಿಕರಿಗೆ ವೇತನ ಸಹಿತ ರಜೆ
ಭಾರತ ಚುನಾವಣಾ ಆಯೋಗವು ಮೇ.10 ಬುಧವಾರದಂದು ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ಮತದಾನಕ್ಕೆ ನಿಗಧಿಪಡಿಸಿದೆ. ಸದರಿ ದಿನದಂದು ರಾಜ್ಯಾದ್ಯಂತ ಎಲ್ಲಾ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1951ರ ಪ್ರಜಾ ಪ್ರತಿನಿಧಿ ಕಾಯ್ದೆ, ಸೆಕ್ಷನ್ 135 (ಬಿ) ರಡಿ ಹಾಗೂ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬದ ರಜೆಗಳು) ಕಾಯ್ದೆ-1963 ಕಲಂ 3 (ಎ)ರನ್ವಯ ಅರ್ಹ ಮತದಾರರಿಗೆ ವೇತನ ಸಹಿತ ರಜೆ ಘೋಷಿಸಿ ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸುವುದಕ್ಕಾಗಿ ಎಲ್ಲಾ ಮಾಲೀಕರು, ನಿಯೋಜಕರು ಅನುವು ಮಾಡಿ ಕೊಡಬೇಕಾಗುತ್ತದೆ.
ಆದ್ದರಿಂದ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಮೇ.10 ರಂದು ಕಾಯ್ದೆಯನ್ವಯ ಅರ್ಹ ಕಾರ್ಮಿಕರು ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡುವಂತೆ ತಿಳಿಸಲಾಗಿದೆ. ತಪ್ಪಿದಲ್ಲಿ ಸಂಬಂಧಪಟ್ಟ ಸಂಸ್ಥೆ, ನಿಯೋಜಕರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದೆಂದು ಕಾರ್ಮಿಕ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ.2ರಿಂದ 4ರವರೆಗೆ ಅಂಚೆ ಮತದಾನ
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ.10ರಂದು ಮತದಾನ ನಡೆಯಲಿದೆ. ಅದಕ್ಕೂ ಮೊದಲು ಅಗತ್ಯಸೇವೆಯಡಿ ಕರ್ತವ್ಯ ನಿರ್ವಹಿಸುತ್ತಿರುವವರು, ಚುನಾವಣಾ ಕರ್ತವ್ಯ ನಿರತರಿಗೆ ಮೂರು ದಿನ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಅಂದು ಮತದಾನಕ್ಕೆ ಹಾಜರಾಗುವಂತ ಅಧಿಕಾರಿ, ಸಿಬ್ಬಂದಿಗಳಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಈ ಸಂಬಂಧ ಸಹಾಯಕ ಮುಖ್ಯ ಚುನಾವಣಾಧಿಕಾರಿಗಳು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಸಾರ್ವತ್ರಿಕ ಚುನಾವಣೆಗಳು 2023ರ ಹಿನ್ನಲೆಯಲ್ಲಿ ಅಗತ್ಯ ಸೇವೆಗಳು ಎಂದು ಗುರುತಿಸಲಾದ ಇಲಾಖೆಗಳ ವಿವರಗಳನ್ನು ಸರ್ಕಾರದಿಂದ ಪಡೆಯಲಾಗಿತ್ತು. ಸದರಿ ಇಲಾಖೆಗಳನ್ನು ಅಗತ್ಯಸೇವೆಗಳ ಇಲಾಖೆಗಳು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿರುತ್ತದೆ ಎಂದಿದ್ದಾರೆ.
ಭಾರತ ಚುನಾವಣಾ ಆಯೋಗವು ಈ ರೀತಿ ಅಗತ್ಯ ಸೇವೆಗಳ ಇಲಾಖೆ ಎಂದು ಗುರುತಿಸಲಾದ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಗೈರು ಹಾಜರಿ ಮತದಾರರಿಗೆ ( AVES) ಪೋಸ್ಟಲ್ ವೋಟಿಂಗ್ ಸೆಂಟರ್ ( PVC) ಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏಕ ಮಾದರಿಯಾಗಿ ದಿನಾಂಕ 02-05-2023 ರಿಂದ 04-05-2023ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಗತ್ಯ ಸೇವೆಗಳ ಇಲಾಖೆಗಳಡಿ ಬರುವ ಅಧಿಕಾರಿ, ಸಿಬ್ಬಂದಿಗಳು ಮತದಾನ ಮಾಡಲು ಅನುವಾಗುವಂತೆ ದಿನಾಂಕ 02-05-2023 ರಿಂದ 04-05-2023ರ ದಿನಾಂಕಗಳಂದು ಮತದಾನ ಮಾಡಲು ತೆರಳಿದ ದಿನದಂದು ವೇತನ ಸಹಿತ ರಜೆ ನೀಡುವಂತೆ ಸಂಬಂಧ ಪಟ್ಟ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸುವಂತೆ, ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.