- 51 ಸಾವಿರಕ್ಕೆ ಮಾರಾಟ: ಈಗ ಎಲ್ಲೂ ದಾಸ್ತಾನಿಲ್ಲ
- ಪ್ರತಿ ಕ್ವಿಂಟಲ್ ಗೆ 2-3 ಸಾವಿರ ರೂ.ಏರಿಕೆ
ಶಿವಮೊಗ್ಗ: ಚುನಾವಣೆ ವೇಳೆ ಶಿವಮೊಗ್ಗ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದ ಕೆಂಪಡಕೆ ಧಾರಣೆ ಇದೀಗ ಚೇತರಿಸಿಕೊಳ್ಳುತ್ತಿದ್ದು ಜೂನ್ ಆರಂಭದಲ್ಲಿಯೇ ಎಲ್ಲಾ ಬಗೆಯ ಅಡಕೆ ಪ್ರತಿ ಕ್ವಿಂಟಲ್ ಗೆ 2-3 ಸಾವಿರ ರೂ.ಏರಿಕೆಯಾಗಿದೆ.
ಮಲೆನಾಡ ಬಹುತೇಕ ಬೆಳೆಗಾರರ ಬಳಿ ಕೆಂಪಡಿಕೆ ಇಲ್ಲ. ದೊಡ್ಡ ಬೆಳೆಗಾರರು ಮಾತ್ರ ಕಾದು ನೋಡುವ ತಂತ್ರದಲ್ಲಿ ಅಡಕೆ ದಾಸ್ತನಿರಿಸಿದ್ದು, ಅಂಥವರಿಗೆ ಮಾತ್ರ ಈ ಧಾರಣೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆ ಇನ್ನೆಷ್ಟು ಚೇತರಿಕೆ ಆಗಬಹುದೆಂಬ ನಿರೀಕ್ಷೆ ಬೆಳೆಗಾರರದ್ದಾಗಿದೆ. ಬಹುತೇಕ ಅಡಕೆ ಮಾರುಕಟ್ಟೆ ಉತ್ತರ ಭಾರತದ ಕಂಪನಿಗಳನ್ನೇ ಅವಲಂಬಿತವಾಗಿದೆ. ಮಾರ್ಚ್ ನಲ್ಲಿ ಆರ್ಥಿಕ ವರ್ಷ ಕೊನೆಗೊಳ್ಳುವುದರಿಂದ ಧಾರಣೆ ಕಡಿಮೆ ಇತ್ತು. ಏಪ್ರಿಲ್ ನಲ್ಲಿ ಆರ್ಥಿಕ ವರ್ಷ ಆರಂಭವಾಗುತ್ತಿದ್ದಂತೆ ಚುನಾವಣೆ ಸಂಹಿತೆ ಜಾರಿಯಾಗಿದ್ದರಿಂದಾಗಿ ಇದು ಅಡಕೆ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಚುನಾವಣಾ ಆಯೋಗ ಹಣಕಾಸು ವಹಿವಾಟಿನ ಮೇಲೆ ನಿಗಾ ಇಟ್ಟಿದ್ದರಿಂದಾಗಿ ಗುಜರಾತ್, ಉತ್ತರ ಪ್ರದೇಶ ಬಿಹಾರ ಮೊದಲಾದ ಕಡೆಗಳಲ್ಲಿನ ಕಂಪನಿಗಳು ಹಾಗೂ ವ್ಯಾಪಾರಸ್ಥರು ಅಡಿಕೆ ಖರೀದಿ ಮಾಡಿರಲಿಲ್ಲ ಇದರಿಂದಾಗಿ ಧಾರಣೆ ಕೂಡ ಕಡಿಮೆಯಾಗಿತ್ತು. ಈಗ ವಹಿವಾಟು ಆರಂಭವಾಗಿ ಬೇಡಿಕೆ ಬಂದಿರುವುದರಿಂದ ಬೆಲೆ ಕೂಡ ಸ್ವಲ್ಪ ಏರಿಕೆಯಾಗಿದೆ.
ಮೇ ಅಂತ್ಯದವರೆಗೆ ಪ್ರತಿ ಕ್ವಿಂಟಲ್ ಸರಕು ಗರಿಷ್ಠ 80 ಸಾವಿರ ರೂ ನಲ್ಲಿತ್ತು. ಅದೀಗ 83,000 ಕ್ಕೆ ಏರಿಕೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿರುವ ರಾಶಿ ಇಡಿಗೆ 47 ಸಾವಿರ ರೂ. ಇತ್ತು ಅದೀಗ 50,000 ದಾಟಿದೆ. ಗರಿಷ್ಠ 50 ಸಾವಿರ ರೂ ಇದ್ದ ಬೆಟ್ಟ 52,000 ದಾಟಿದೆ. ಚಾಲಿ ಅಡಕೆಯ ದೊಡ್ಡ ಮಾರುಕಟ್ಟೆಯಾಗಿರುವ ಸಾಗರದಲ್ಲಿ ಕೂಡ ಎರಡು ಸಾವಿರ ರೂ ಏರಿಕೆಯಾಗಿದೆ.
ಶಿವಮೊಗ್ಗ ಮಾರುಕಟ್ಟೆ ದರ
ಬೆಟ್ಟೆ- 45500-52569
ಗೊರಬಲು- 17009-37000
ರಾಶಿ- 38000-50099
ಸರಕು- 54069-82769
ಸಿಪ್ಪೆಗೋಟು- 20215-21499
ಚಾಲಿ- 36049-36589