ಕಾಂಗ್ರೆಸ್: ನೂತನ ಕಾಂಗ್ರೆಸ್ ಸರ್ಕಾರ ಐದು ಉಚಿತ ಗ್ಯಾರಂಟಿ ಗೊಂದಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಂಗೂ ಫ್ರಿ, ನಿಂಗೂ ಫ್ರೀ, ಕುಂತಿರುವ ಮಹದೇವಪ್ಪನಿಗೂ ಫ್ರೀ, ಬಾಗಿಲಿಗೆ ಒರಗಿ ನಿಂತಿರುವ ಕಾಕಾ ಪಾಟೀಲ್ ಗೂ ಫುಲ್ ಫ್ರೀ ಎಂದು ಘೋಷಿಸಿ ಅಧಿಕಾರಕ್ಕೇರಿದ ಕಾಂಗ್ರೆಸ್ (Congress )ಇದೀಗ ಒಂದೊಂದೇ ಕಡ್ಡಿ ಇಡುತ್ತಿರುವುದು, ಅದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಇರುವ ಗೊಂದಲವನ್ನು ಒಂದಷ್ಟು ಕಡಿಮೆ ಮಾಡಲು ಇದೀಗ ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಯ ಷರತ್ತಿನಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ನಿನ್ನೆಯ ದಿನ ಮಕ್ಕಳು ತೆರಿಗೆ ಕಟ್ಟಿದರೆ, ತಾಯಿ ಅಥವಾ ಆ ಕುಟುಂಬ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಾಗಲು ಸಾಧ್ಯವಿಲ್ಲ ಎಂದಿತ್ತು ಸರ್ಕಾರ. ಇಂದು ಮತ್ತೆ ವರಸೆ ಬದಲಿಸಲಾಗಿದೆ. ಹಾಗಾಗಿ ಷರತ್ತು ಮರು ಬದಲಿಸಲಾಗಿದೆ. ಹಾಗಾಗಿ ಒಂದು ವೇಳೆ ಮಕ್ಕಳು ತೆರಿಗೆ ಕಟ್ಟುತ್ತಿದ್ದರೂ, ತಾಯಿಗೆ 2,000 ರೂಪಾಯಿ ಸಿಗುತ್ತದೆ. ತಾಯಿ 2,000 ರೂಪಾಯಿ ಪಡೆಯಲು ಅರ್ಹರಾಗಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಒಂದು ವೇಳೆ ಮಕ್ಕಳು ತೆರಿಗೆ ಕಟ್ಟುತ್ತಿದ್ದರೂ, ಗೃಹಲಕ್ಷ್ಮಿ ಯೋಜನೆಯ ಹೊಸ ರೂಲ್ಸ್ ನ ಪ್ರಕಾರ ತಾಯಿಗೆ 2,000 ರೂಪಾಯಿ ನೀಡಲಾಗುತ್ತದೆ. ಈ.ಹಿಂದೆ ಇದ್ದ ಗೊಂದಲ ಪರಿಹರಿಸಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ” ಗೃಹಲಕ್ಷ್ಮಿ ಫಾರ್ಮ್ ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡ್ತಿರೋದು ಅಸಲಿ ಫಾರ್ಮ್. ಈಗ ಇದರಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದೇವೆ. ಇನ್ನೂ ಕೆಲ ಬದಲಾವಣೆ ಮಾಡಲಾಗುತ್ತದೆ ” ಎಂದು ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಈಗ ಮಾಧ್ಯಮಗಳಲ್ಲಿ ಶಾಂತಿಯಲ್ಲಿರುವ ಅಪ್ಲಿಕೇಶನ್ ಫಾರಂ ಡ್ರಾಫ್ಟ್ ಮಾತ್ರ. ಮುಂದೆ ಕೆಲ ಬದಲಾವಣೆಗಳೊಂದಿಗೆ ನೂತನ ಅರ್ಜಿ ಹೊರಬರಲಿದೆ ಎಂದಿದ್ದಾರೆ. ಬ್ಯಾಂಕ್ ಪಾಸ್ ಬುಕ್, ಜಾತಿಯ ಕಾಲಂ ಬದಲು ವರ್ಗ ಎಂದು ಹಾಕುತ್ತೇವೆ. ತಪ್ಪು ಸಂದೇಶ ಹೋಗಬಾರದು ಅನ್ನೋ ಕಾರಣಕ್ಕೆ ಈ ರೀತಿಯ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇನ್ಮುಂದೆ ಕೂಡಾ ಗಂಡ ತೆರಿಗೆ ಕಟ್ಟುತ್ತಿದ್ದರೆ, ಮನೆಯ ಯಜಮಾನಿಗೆ ಗೃಹ ಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ. ಆದರೆ ಮಕ್ಕಳು ತೆರಿಗೆ ಕಟ್ಟಿದರೆ ತಾಯಿ ಯೋಜನೆಯ ಫಲಾನುಭವಿಯಾಗಲು ಯಾವುದೇ ತೊಂದರೆ ಇಲ್ಲಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತಾಡಿದ ಅವರು, ಗೃಹ ಲಕ್ಷ್ಮಿ ಯೋಜನೆಯನ್ನು ಅದ್ಧೂರಿ ಕಾರ್ಯಕ್ರಮದ ಮೂಲಕ ಉದ್ಘಾಟನೆ ಮಾಡಲಾಗುತ್ತದೆ. ಮುಂದಿನ ಆಗಸ್ಟ್ 17 ಅಥವಾ ಆಗಸ್ಟ್ 18 ರಂದು ಬೆಳಗಾವಿಯಲ್ಲಿ ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.