ಪತ್ನಿಗೆ ಕರೆ ಮಾಡಿ ಕಿರಿಕ್: ಡಿಶ್ ರಿಪೇರಿಯವನಿಗೆ ಧರ್ಮದೇಟು!
– ಕೊಪ್ಪದ ಜಯಪುರದಲ್ಲಿ ಘಟನೆ
– ಉಡುಪಿಯಲ್ಲಿ ಪ್ಲಾಸ್ಟಿಕ್ ಮೇಲೆ ದಾಳಿ
– ಕಾರ್ಕಳದಲ್ಲಿ ಪೊಲೀಸ್ ಪೇದೆ ಆತ್ಮಹತ್ಯೆ
– ಪುತ್ತೂರಲ್ಲಿ ಪತ್ರಕರ್ತನ ಮೇಲೆ ದಾಳಿ: ಆರೋಪಿಗಳಿಗೆ ಶಿಕ್ಷೆ ನೀಡಲು ಪಟ್ಟು
– ಸರ್ಕಾರಿ ಶಾಲೆಯ ಶಿಕ್ಷಕಿ ನೇಣಿಗೆ ಶರಣು
NAMMUR EXPRESS NEWS
ಕೊಪ್ಪ: ತನ್ನ ಪತ್ನಿಯನ್ನು ಪೀಡಿಸಿ ಕರೆ ಮಾಡುವಂತೆ ನಂಬರ್ ಕೊಟ್ಟಿದ್ದ ಕಾಮುಕನಿಗೆ ಪತಿ ಅಟ್ಟಾಡಿಸಿಕೊಂಡು ಹೊಡೆದ ಘಟನೆ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಮನೆಯಲ್ಲಿ ನಡೆದಿದೆ.
ಜೀವನಕ್ಕಾಗಿ ಡಿಶ್ ರಿಪೇರಿ ಮಾಡುತ್ತಿದ್ದ ಬಶೀರ್ ಎಂಬಾತ ರಮೇಶ್ ಎಂಬುವವರ ಪತ್ನಿಗೆ ಕರೆ ಮಾಡುವಂತೆ ಪೀಡಿಸುತ್ತಿದ್ದ. ಮುಂದುವರೆದು ನಂಬರ್ ಕೂಡಾ ನೀಡಿ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಸಿಟ್ಟಿಗೆದ್ದ ರಮೇಶ್ ನಡುರಸ್ತೆಯಲ್ಲಿ ಈತನಿಗೆ ಥಳಿಸಿದ್ದಾರೆ. ವಿಷಯ ತಿಳಿದ ಸ್ಥಳೀಯರು ಈತನಿಗೆ ಧರ್ಮದೇಟು ಕೊಟ್ಟಿದ್ದಾರೆ. ಈ ಪ್ರಕರಣದಿಂದ ಇವನ ವಿಲಕ್ಷಣ ಚಾಳಿ ಬೆಳಕಿಗೆ ಬಂದಿದ್ದು, ಹಲವಾರು ಮಹಿಳೆಯರಿಗೆ ಈತ ತನ್ನ ನಂಬರ್ ಕೊಟ್ಟು ಪೀಡಿಸುತ್ತಿದ್ದ ಎಂದು ಹೇಳಲಾಗಿದೆ.
ಕಾರ್ಕಳದಲ್ಲಿ ಪೊಲೀಸ್ ಆತ್ಮಹತ್ಯೆ
ಕಾರ್ಕಳ ನಗರ ಪೊಲೀಸ್ ಠಾಣಾ ಸಿಬಂದಿ ನೇಣಿಗೆ ಶರಣಾದ ಘಟನೆ ಭಾನುವಾರ ಬೆಳಗ್ಗೆ ಮಿಯ್ಯಾರಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಪ್ರಶಾಂತ್ ಹೆಚ್ ಸಿ ಆತ್ಮಹತ್ಯೆ ಮಾಡಿಕೊಂಡವರು. ನಗರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯಾಗಿದ್ದ ಅವರು ರಜೆಯಲ್ಲಿದ್ದು, ಮನೆಯ ಹಿಂಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಉಡುಪಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ದಾಳಿ!
ಉಡುಪಿ ನಗರಸಭೆಯ ವತಿಯಿಂದ ಜಿಲ್ಲೆಯ ವಿವಿಧೆಡೆ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ, ಒಟ್ಟು 107.81 ಕೆ. ಜಿ. ನಿಷೇಧಿತ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡು 47,500 ರೂ. ದಂಡ ವಸೂಲಿ ಮಾಡಲಾಯಿತು.
ಜೂನ್ 26 ರಂದು ಮಲ್ಪೆಯಲ್ಲಿ 41.87 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡು 24,000 ರೂ., ಜೂನ್ 28 ರಂದು ಪರ್ಕಳದಲ್ಲಿ 29.44 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡು 10,500 ರೂ. ಹಾಗೂ ಇಂದು ಶ್ರೀ ಕೃಷ್ಣ ಮಠದ ಬಳಿ ನಿಷೇದಿತ ಪ್ಲಾಸ್ಟಿಕ್ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ದಾಳಿ ನಡೆಸಿ 36.5 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡು ರೂ.12,500 ದಂಡ ವಿಧಿಸಲಾಯಿತು.ದಾಳಿಯಲ್ಲಿ ನಗರಸಭೆಯ ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು, ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನೀಟರಿ ಸೂಪರ್ವೈಸರ್ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.
ಪುತ್ತೂರಲ್ಲಿ ಪತ್ರಕರ್ತನ ಮೇಲೆ ದಾಳಿ ನಡೆಸಿ ಮೊಬೈಲ್ ಪುಡಿಗೈದ ದುಷ್ಕರ್ಮಿ: ಭಾರೀ ಆಕ್ರೋಶ
ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಪಾಯಕಾರಿ ರೀತಿಯಲ್ಲಿ ಮರದ ಗೆಲ್ಲುಗಳನ್ನು ಕಡಿಯುತ್ತಿದ್ದ ಮೆಸ್ಕಾಂ ಸಿಬ್ಬಂದಿಗಳ ವಿಡಿಯೋ ಚಿತ್ರಿಕರಿಸುತ್ತಿದ್ದ ಪತ್ರಕರ್ತರ ಮೊಬೈಲನ್ನು ಕಸಿದ ದುಷ್ಕರ್ಮಿಯೊಬ್ಬ ಅದನ್ನು ನೆಲಕ್ಕೆ ಬಡಿದ ಘಟನೆ ಪುತ್ತೂರು ಕಸಬಾ ನಗರ ಠಾಣಾ ವ್ಯಾಪ್ತಿಯ ಬಪ್ಪಳಿಗೆ ಗುಂಪಕಲ್ಲು ಎಂಬಲ್ಲಿ ನಡೆದಿದೆ.
ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ವಾಹಿನಿಯ ವರದಿಗಾರ ನಿಶಾಂತ್ ಬಿಲ್ಲಂಪದವು ಅವರ ಮೇಲೆ ಹಲ್ಲೆ ನಡೆದಿದೆ.
ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಜರಗಿಸದೇ ಇದ್ದಲ್ಲಿ ಎಲ್ಲಾ ಪತ್ರಕರ್ತರ ಸಂಘವನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ರಾಮದಾಸ್ ಶೆಟ್ಟಿ ವಿಟ್ಲ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊಟ್ಟೆತ್ತಡ್ಕ ಮತ್ತು ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ ತಿಳಿಸಿದ್ದಾರೆ.
ವರ್ಗಾವಣೆ ಆಗಿದ್ದಕ್ಕೆ ಶಿಕ್ಷಕಿ ನೇಣಿಗೆ ಶರಣು!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಸೋಮೇಶ್ವರ ಬಡಾವಣೆಯಲ್ಲಿ ವರ್ಗಾವಣೆಗೊಂಡ ಮನನೊಂದು ಸರ್ಕಾರಿ ಶಾಲೆಯ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಎನ್.ಟಿ.ಜ್ಯೋತಿ (40) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಇವರು ದೊಡ್ಡಬಳ್ಳಾಪುರದ ತುರುವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೂಲತಃ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಕೆ.ಯು. ವಿರೂಪಾಕ್ಷ ಹಾಗೂ ಹೊಳಲ್ಕೆರೆ ತಾಲೂಕು ನಲ್ಲಿಕಟ್ಟೆ ಗ್ರಾಮದ ಎನ್.ಟಿ.ಜ್ಯೋತಿ ಅವರು 13 ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಕಳೆದ 12 ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಬನವತಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜ್ಯೋತಿ 9 ತಿಂಗಳ ಹಿಂದೆ ತುರುವನಹಳ್ಳಿ ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಅಂದಿನಿಂದ ಸೋಮೇಶ್ವರ ಬಡಾವಣೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು.
ಇದನ್ನೂ ಓದಿ : ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ!
HOW TO APPLY : NEET-UG COUNSELLING 2023