ಹೈಸ್ಕೂಲ್ ಹುಡುಗರ ಕೈಯಲ್ಲಿ ಚೂರಿ!
– ಮಂಗಳೂರಲ್ಲಿ ಸಂಬಾರು ಚೆಲ್ಲಿದ್ದಕ್ಕೆ ಸಹಪಾಠಿಗೆ ಚೂರಿ ಎಸೆದ 9ನೇ ತರಗತಿ ವಿದ್ಯಾರ್ಥಿ
– ಗುದ್ದಲಿಯಿಂದ ಹೊಡೆದು ಮಗಳಿಂದ ಅಪ್ಪನ ಕೊಲೆ
– ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೋ ದೂರು
– ಬಕೆಟ್ ಒಳಗೆ ಬಿದ್ದು ಮಗು ದುರ್ಮರಣ
NAMMUR EXPRESS NEWS
ಮಂಗಳೂರು: ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ಬಟ್ಟೆಗೆ ಸಾಂಬಾರು ಚೆಲ್ಲಿದ ಕಾರಣಕ್ಕೆ ಸಣ್ಣ ವಿವಾದ ತಾರಕಕ್ಕೇರಿ ಒಬ್ಬ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿಗೆ ಚೂರಿ ಎಸೆದು ಗಾಯಗೊಳಿಸಿದ ಘಟನೆ ಮಂಗಳೂರು ಬಳಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸಮೀಪದ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಒಬ್ಬ ವಿದ್ಯಾರ್ಥಿಯ ತಟ್ಟೆಯಿಂದ ಸಾಂಬಾರು ಚೆಲ್ಲಿದ್ದಕ್ಕೆ ಪ್ರತಿಯಾಗಿ ಬಟ್ಟೆಯಲ್ಲಿ ಕಲೆ ಆಯಿತೆಂದು ಕೆರಳಿದ ವಿದ್ಯಾರ್ಥಿ ಸಾಂಬಾರು ಚೆಲ್ಲಿದ ವಿದ್ಯಾರ್ಥಿಗೆ ಕಪಾಳ ಮೋಕ್ಷ ಮಾಡಿ ಅಲ್ಲಿಂದ ಮುಂದೆ ಹೋಗುತ್ತಿರುವಾಗ ಪೆಟ್ಟು ತಿಂದ ವಿದ್ಯಾರ್ಥಿ ಬ್ಯಾಗ್ ನಿಂದ ಚೂರಿ ತೆಗೆದು ಆತನ ಮೇಲೆ ನೇರವಾಗಿ ಎಸೆದಿದ್ದಾನೆ.
ಅದೃಷ್ಟವಶಾತ್ ಎದೆ ಭಾಗದಿಂದ ಸ್ವಲ್ಪ ಪಕ್ಕದಲ್ಲಿ ಚೂರಿ ತಗುಲಿದ್ದುಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ವೈಸ್ ಪ್ರಿನ್ಸಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆಯ ಮಾಹಿತಿ ಪಡೆದ ದಕ್ಷಿಣ ಉಪ ವಿಭಾಗ ಎಸಿಪಿ, ಕೊಣಾಜೆ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಸೇರಿದಂತೆ ಅಧಿಕಾರಿಗಳು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಭೇಟಿ ನೀಡಿ ಹುಡುಗನಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದು ತನಿಖೆ ಮುಂದುವರಿಸಿದ್ದಾರೆ. ಒಂಬತ್ತನೆಯ ತರಗತಿ ವಿದ್ಯಾರ್ಥಿ ಚೂರಿ ಬಸ್ ಸ್ಟಾಂಡ್ ನಲ್ಲಿ ಬಿದ್ದು ಸಿಕ್ಕಿದ್ದು ಎಂದು ತಿಳಿದ್ದಾನೆ.
ಗುದ್ದಲಿಯಿಂದ ತಲೆಗೆ ಹೊಡೆದು ಅಪ್ಪನನ್ನೇ ಹತ್ಯೆಗೈದ ಮಗಳು!
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನಾಯಿದೊಳೆ ಗ್ರಾಮದಲ್ಲಿ ಮಗಳೊಬ್ಬಳು ಗುದ್ದಲಿಯಿಂದ ಅಪ್ಪನ ತಲೆಗೆ ಹೊಡೆದು ಹತ್ಯೆಗೈದ ಘಟನೆ ನಡೆದಿದೆ. ತಂದೆ ಹುಚ್ಚಿರಯ್ಯ (68) ಎಂಬುವವರನ್ನು ಮಗಳು ಪುಷ್ಪ (30) ಹತ್ಯೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಗಂಡನನ್ನು ಬಿಟ್ಟು ಬಂದ ಪುಷ್ಪ ತಂದೆ ಮನೆಯಲ್ಲಿ ವಾಸವಿದ್ದಳು. ಆದರೆ ಕೆಲವು ದಿನಗಳಿಂದ ಮಾನಸಿಕ ಅಸ್ವಸ್ಥಳಾಗಿದ್ದಳು ಎನ್ನಲಾಗಿದೆ. ಇನ್ನು ಕ್ಷುಲ್ಲಕ ಕಾರಣಕ್ಕೆ ತಂದೆ-ಮಗಳ ನಡುವೆ ಜಗಳ ನಡೆದಿದ್ದು, ಗುದ್ದಲಿಯಿಂದ ಅಪ್ಪನ ತಲೆಗೆ ಹೊಡೆದಿದ್ದಾಳೆ. ಪರಿಣಾಮ ಹುಚ್ಚರಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚರ್ಚ್ ಪಾದ್ರಿಯ ವಿರುದ್ಧ ಲೈಂಗಿಕ ಕಿರುಕುಳ ದೂರು!
ಶಿವಮೊಗ್ಗದ ಖಾಸಗಿ ಕಾಲೇಜಿನ ಪ್ರಾಂಶುಪಾಲ ಹಾಗೂ ಚರ್ಚ್ ಪಾದ್ರಿಯ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆ ಪ್ರಕರಣವೊಂದು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖಾಸಗಿ ಕಾಲೇಜಿನ ಪ್ರಾಂಶುಪಾಲ ಹಾಗು ಚರ್ಚ್ ಫಾದರ್ ಆಗಿರುವ ಫ್ರಾನ್ಸಿಸ್ ಫರ್ನಾಂಡೀಸ್ ವಿರುದ್ಧ ದೂರು ದಾಖಲಾಗಿದೆ. ಪ್ರಾಂಶುಪಾಲನ ವಿರುದ್ಧ ಪೋಕ್ಸ್ ಹಾಗು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನ ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ.
ಬಕೆಟ್ ಒಳಗೆ ಬಿದ್ದು ಮಗು ದುರ್ಮರಣ
ನೀರು ತುಂಬಿದ್ದ ಬಕೆಟಿಗೆ ಬಿದ್ದು ಹಸುಗೂಸೊಂದು ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಕಾವೂರು ಎಂಬಲ್ಲಿ ನಡೆದಿದೆ. ಮೂಲತಃ ಜಾರ್ಖಂಡ್ ನಿವಾಸಿ ಸದ್ಯ ಕಾವೂರು ಮಸೀದಿ ಬಳಿ ವಾಸವಿರುವ ಫಿರೋಝ್ ಅನ್ಸಾರಿ ಮತ್ತು ಕಿತಾಬುನ್ ದಂಪತಿಯ ಪುತ್ರಿ 20 ತಿಂಗಳ ಆಯಿಶಾ ಮೃತ ಮಗು ಎಂದು ತಿಳಿದು ಬಂದಿದೆ. ಮನೆಯಲ್ಲಿ ಅರ್ಧ ನೀರು ತುಂಬಿಸಿಟ್ಟಿದ್ದ ಬಕೆಟ್ ಬಳಿ ಆಟವಾಡುತ್ತಿದ್ದ ಮಗು ಬಕೆಟ್ ಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ
ಇದನ್ನೂ ಓದಿ : ಛೇ.. ಎಂಥಾ ನೀಚ ಕೃತ್ಯ…ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ಗ್ಯಾಂಗ್ ರೇಪ್!
HOW TO APPLY : NEET-UG COUNSELLING 2023