ಓಡಾಡುತ್ತಿವೆ ಮೊಸಳೆ ಹಿಂಡು!
– ನದಿ ತೀರದಲ್ಲಿ ಗುಂಪು ಮೊಸಳೆ ಕಂಡು ಜನ ದಂಗು
– ಚಾಮರಾಜನಗರದಲ್ಲಿ ಬಾಲಕನ ಮೇಲೆ ಚಿರತೆ ದಾಳಿ!
– ಮೂಢನಂಬಿಕೆಗೆ ಬಲಿಯಾದ 10 ದಿನದ ಕಂದಮ್ಮ!
NAMMUR EXPRESS NEWS
ರಾಯಚೂರು: ರಾಯಚೂರು ಜಿಲ್ಲೆ ಯಾಪಲದಿನ್ನಿ ಆತಕೂರು ನದಿ ದಡದಲ್ಲಿ ಮೊಸಳೆ ಹಿಂಡುಗಳ ಓಡಾಟ ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದೆ. ಮೊಸಳೆಗಳು ನದಿಯಿಂದ ಮೇಲೆ ಬರುತ್ತಿವೆ. ಜನ ಓಡಾಡಲು ಭಯ ಪಡುತ್ತಿದ್ದಾರೆ. ತುಂಗಾ ಭದ್ರ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮೊಸಳೆ ಹಿಂಡುಗಳಿದ್ದವು. ಆದರೆ ಈಗ ರಾಯಚೂರು ಭಾಗದಲ್ಲಿ ಮೊಸಳೆ ಹಿಂಡು ಆತಂಕ ಸೃಷ್ಟಿ ಮಾಡಿವೆ.
ಚಾಮರಾಜನಗರದಲ್ಲಿ ಬಾಲಕನ ಮೇಲೆ ಚಿರತೆ ದಾಳಿ!
ಬಾಲಕಿ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅದೇ ರೀತಿ ಘಟನೆ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯಲ್ಲಿ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಮಲ್ಲಿಗೆಹಳ್ಳಿ ಗ್ರಾಮದ ಹರ್ಷಿತ್(09) ದಾಳಿಗೊಳಗಾದ ಬಾಲಕ. ಗ್ರಾಮದ ಪ್ರಾಥಮಿಕ ಶಾಲೆ ಮುಂಭಾಗದಿಂದ ಮನೆಗೆ ತೆರಳುವಾಗ ಅವಿತು ಕುಳಿತಿದ್ದ ಚಿರತೆ ದಾಳಿ ಮಾಡಿದ್ದು ಇದನ್ನು ಕಂಡ ಜನರು ಚೀರಾಟ ಕೂಗಾಡಿದ್ದಾರೆ. ಜನರ ಕಿರುಚಾಟಕ್ಕೆ ಬೆದರಿದ ಚಿರತೆ ಬಾಲಕನ್ನು ಬಿಟ್ಟು ಗದ್ದೆಗಳತ್ತ ಓಡಿದೆ. ಹರ್ಷಿತ್ ನ ಮುಖ, ಗಂಟಲು, ಕಾಲು, ಹೊಟ್ಟೆಯ ಭಾಗಕ್ಕೆ ಚಿರತೆ ಗೀರಿ ಕಚ್ಚಿ ಗಾಯಗೊಳಿಸಿದ್ದು ಯಳಂದೂರು ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಮನೆ ಮುಂದೆ ಆಟ ಆಡುತ್ತಿದ್ದ 6 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ಮಾಡಿತ್ತು. ಬಾಲಕಿ 15 ದಿನಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೇ ಅಸುನೀಗಿದ್ದಳು.
ಮೂಢನಂಬಿಕೆಗೆ ಬಲಿಯಾದ 10 ದಿನದ ಕಂದಮ್ಮ
ತುಮಕೂರು ಜಿಲ್ಲೆಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಮೂಢನಂಬಿಕೆಗೆ ನವಜಾತ ಶಿಶುವೊಂದು ಸಾವನ್ನಪ್ಪಿದ ದುರ್ಘಟನೆ ಬುಧವಾರ ನಡೆದಿದೆ. ಕಾಡುಗೊಲ್ಲ ಸಮುದಾಯದ ಕಟ್ಟುಪಾಡಿಗೆ ವಸಂತ ಎಂಬವರ ಅವಳಿ ಮಕ್ಕಳಲ್ಲಿ 10 ದಿನಗಳ ಹೆಣ್ಣು ಮಗುವೊಂದು ಮೃತಪಟ್ಟಿದೆ ಎಂದು ತಿಳಿದುಬಂದಿದೆ.ವಸಂತ ಅವರಿಗೆ ಕಳೆದ ಕೆಲವು ದಿನಗಳ ಹಿಂದೆಷ್ಟೇ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ಹೆರಿಗೆ ಮುಗಿಸಿ ಗ್ರಾಮಕ್ಕೆ ವಾಪಸ್ಸಾದ ಇವರನ್ನು ಪೋಷಕರು ಮನೆಗೆ ಸೇರಿಕೊಂಡಿರಲಿಲ್ಲ.ದೇವರಿಗೆ ಸೂತಕ ಅಗಲ್ಲ. ಹಾಗಾಗಿ ನಾವು ಮನೆಯೊಳಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಊರ ಹೊರಗಿನ ಗುಡಿಸಲಿಗೆ ಕಳುಹಿಸಿದ್ದರು.ಕಳೆದ ಜುಲೈ 18ರಂದು ಊರ ಹೊರಗಿನ ಗುಡಿಸಿಲಿನಲ್ಲಿ ಬಾಣಂತಿ ಹಾಗೂ ಇಬ್ಬರು ಅವಳಿ ಮಕ್ಕಳನ್ನು ಇರಿಸಲಾಗಿತ್ತು. ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಶೀತ ವಾತಾವರಣ ಹಾಗೂ ತುಂತುರು ಮಳೆ ಆಗುತ್ತಿದೆ. ಇದರಿಂದಾಗಿ ಮಗು ಮೃತಪಟ್ಟಿದೆ ಎನ್ನಲಾಗಿದೆ. ಮೂಢನಂಬಿಕೆಯಿಂದಾಗಿ ತಾಯಿಯೊಬ್ಬಳು ತನ್ನ ಪುಟ್ಟ ಮಗುವನ್ನು ಕಳೆದುಕೊಂಡಿದ್ದಾಳೆ.
ಇದನ್ನೂ ಓದಿ : ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ ಕೇಸ್!?
HOW TO APPLY : NEET-UG COUNSELLING 2023