ಅಪಘಾತಕ್ಕೆ ಒಂದೇ ಕುಟುಂಬದ ಮೂವರು ಬಲಿ!
– ಬೆಂ.ಗ್ರಾಮಾಂತರದ ಹೊಸಕೋಟೆಯಲ್ಲಿ ಘಟನೆ
– ಮೊಬೈಲ್ ಚಾರ್ಜ್ ವಿದ್ಯುತ್ ಸ್ಪರ್ಶಕ್ಕೆ ಯುವಕ ಸಾವು!
– ಪ್ರಿಯಕರನ ಕಿರುಕುಳಕ್ಕೆ ಟೆಕ್ಕಿ ಸಾವಿಗೆ ಶರಣು!
NAMMUR EXPRESS NEWS
ಬೆಂಗಳೂರು: ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಚಾಲನೆಯಿಂದ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ. ಮೂವರು ಬೈಕ್ ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಬೈಕ್ ಹಳ್ಳಕ್ಕೆ ಬಿದ್ದು ಮೂವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಮೃತಪಟ್ಟ ದುರ್ದೈವಿಗಳನ್ನು ಮನೋಹರ್ (19) ಶ್ವೇತಾ (38) ಸುಕೃತಾ (4) ಎಂದು ಗುರುತಿಸಲಾಗಿದೆ.
ಆರೋಗ್ಯ ಇಲ್ಲದ ಹಿನ್ನಲೆಯಲ್ಲಿ ಜಡಿಗೇನಹಳ್ಳಿಯ ಆಸ್ಪತ್ರೆಗೆ ಮೂವರು ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮೃತರು ಹೊಸಕೋಟೆ ತಾಲ್ಲೂಕಿನ ಗೊಣಕನಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ. ಇನ್ನೂ ಘಟನೆ ನಡೆದ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೊಬೈಲ್ ಚಾರ್ಜ್ ವೇಳೆ ವಿದ್ಯುತ್ ಸ್ಪರ್ಶಕ್ಕೆ ಯುವಕ ಸಾವು!
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶ್ರೀಪೇವಾಡಿಯಲ್ಲಿ ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ತಗುಲಿ ಯುವಕ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಆಕಾಶ ಶಿವದಾಸ್ ಸಂಕಪಾಳ (27) ಎಂಬ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.ಈತ ಜುಲೈ 27 ರಂದು ಬೆಳಗ್ಗೆ 8:45 ರ ಸುಮಾರಿಗೆ ಮೊಬೈಲ್ ಚಾರ್ಜ್ ಮಾಡುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೊಬೈಲ್ ಚಾರ್ಜ್ ಮಾಡುವಾಗ ವಿದ್ಯುತ್ ತಗುಲಿ ಮೃತ ಪಟ್ಟಿದ್ದಾನೆ ಎಂದು ಆತನ ತಂದೆ ಶಿವದಾಸ್ ಬಳವಂತ ಪೊಲೀಸರಿಗೆ ದೂರು ನೀಡಿದ್ದಾರೆ. ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆಳಗಾವಿ ಎಸ್ಪಿಡಾ ಸಂಜೀವ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಿಯಕರನ ಕಿರುಕುಳಕ್ಕೆ ಟೆಕ್ಕಿ ಸಾವಿಗೆ ಶರಣು!
ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಟೆಕ್ಕಿಯೊಬ್ಬಳು ಸಾವಿಗೆ ಶರಣಾದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರದಲ್ಲಿ ನಡೆದಿದೆ. ವಿದ್ಯಾಶ್ರೀ ಸಾವಿಗೆ ಶರಣಾದ ಯುವತಿಯಾಗಿದ್ದಾಳೆ. ಈಕೆ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಡೆತ್ ನೋಟ್ ನಲ್ಲಿ ಪ್ರಿಯಕರನ ಹೆಸರು ಹಾಗೂ ತನ್ನ ಸಾವಿಗೆ ಕಾರಣ ಏನು ಎಂದು ಬರೆದಿಟ್ಟು ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಬಸವೇಶ್ವರದಲ್ಲಿ ಜೀಮ್ ಟ್ರೈನರ್ ಆಗಿದ್ದ ಅಕ್ಷಯ್ ಹಾಗೂ ಮಾಡೆಲ್, ಮಿಸ್ ಆಂಧ್ರ ಸ್ಪರ್ಧೆ ವಿಜೇತಳಾಗಿದ್ದ ವಿದ್ಯಾಶ್ರೀ ಕಳೆದ ಒಂದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಕ್ಷಯ್ ವಿದ್ಯಾಶ್ರೀ ಬಳಿ 1.76 ಲಕ್ಷ ಹಣ ಪಡೆದುಕೊಂಡಿದ್ದ ಎಂದು ಡೆತ್ ನೋಟ್ ನಲ್ಲಿ ವಿದ್ಯಾಶ್ರೀ ತಿಳಿಸಿದ್ದಾಳೆ. ಬುಧವಾರ ಯುವತಿಯ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023