ಉಡುಪಿ ವೀಡಿಯೋ ರೆಕಾರ್ಡಿಂಗ್: ಮೊದಲ ಹಂತದ ತನಿಖೆ ಪೂರ್ಣ
– ಬಂಟ್ವಾಳ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ
– ಕೇರಳದಿಂದ ತಂದು ಬರುತ್ತಿದೆ ಶೌಚಾಲಯ ತ್ಯಾಜ್ಯ
NAMMUR EXPRESS NEWS
ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಾಜೆಯಲ್ಲಿ ನಡೆದಿದೆ. ಪ್ರಶಾಂತ್ ನಾಯ್ಕ (29) ಆತ್ಮಹತ್ಯೆ ಮಾಡಿಕೊಂಡ ಯುವಕ. ಪ್ರಶಾಂತ್ ನೇರಳಕಟ್ಟೆ ಅಗ್ರಿ ಎಂಬ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಒಂದು ವರ್ಷಗಳ ಹಿಂದೆ ಮದುವೆಯಾಗಿದ್ದ. ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದು, ಪೆರಾಜೆ ಯುವ ವೇದಿಕೆಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಈತ ಸದಸ್ಯನಾಗಿ ಸೇವೆ ಮಾಡುತ್ತಿದ್ದ. ಕೌಟುಂಬಿಕ ಕಲಹ ಪ್ರಶಾಂತ್ ಆತ್ಮಹತ್ಯೆಗೆ ಕಾರಣವಾಗಿರಬೇಕು ಎಂದು ಶಂಕಿಸಲಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಶೌಚಾಲಯದ ತ್ಯಾಜ್ಯ ಕೇರಳದಿಂದ ಕರ್ನಾಟಕಕ್ಕೆ!
ಶೌಚಾಲಯದ ತ್ಯಾಜ್ಯವನ್ನು ಕೇರಳದಿಂದ ತಂದು ವಿಟ್ಲ ಪರಿಸರದಲ್ಲಿ ಸುರಿಯುವ ಲಾರಿಯನ್ನು ಬೆನ್ನಟ್ಟಿದ ಸಾರ್ವಜನಿಕರು ಚಾಲಕನ ಸಹಿತ ಉಕ್ಕುಡ ಬಳಿ ತಡೆಹಿಡಿದು ವಿಟ್ಲ ಪೊಲೀಸರು ವಶಕ್ಕೆ ಒಪ್ಪಿಸಿದ್ದಾರೆ. ಹದಿನೈದು ದಿನಗಳ ಹಿಂದಷ್ಟೇ ಇದೇ ರೀತಿ ಶೌಚಾಲಯದ ತ್ಯಾಜ್ಯ ಹೊತ್ತ ಟ್ಯಾಂಕರ್ ಕೇಪು ಗ್ರಾಮದ ಚೆಲ್ಲಡ್ಕ ಪರಿಸರದಲ್ಲಿ ಸುರಿದು ರಾದ್ಧಾಂತಕ್ಕೆ ಕಾರಣವಾಗಿತ್ತು. ಆ ಸಂದರ್ಭ ಸಾರ್ವಜನಿಕರು ಹಿಡಿದು ವಾಹನವನ್ನು ಪೊಲೀಸರ ವಶಕ್ಕೆ ನೀಡಿದ್ದರು. ಇದೀಗ ಮತ್ತೆ ದುಷ್ಕೃತ್ಯ ಎಸಗಲು ಬಂದ ಟ್ಯಾಂಕರ್ ಚಾಲಕ ಅದೇ ರೀತಿ ಶೌಚಾಲಯದ ತ್ಯಾಜ್ಯವನ್ನು ವಿಟ್ಲ ಪರಿಸರಕ್ಕೆ ತರುತ್ತಿರುವ ಮಾಹಿತಿ ಸಾರ್ವಜನಿಕರಿಗೆ ಬಂದಿತ್ತು. ಸಾರಡ್ಕ ಚೆಕ್ ಪೋಸ್ಟ್ ಪಾಸಾಗುತ್ತಿದ್ದಂತೆ ಎಚ್ಚೆತ್ತ ಸಾರ್ವಜನಿಕರು ವಾಹನವನ್ನು ಬೆನ್ನಟ್ಟಿ ಉಕ್ಕುಡ ದರ್ಬೆಯಲ್ಲಿ ತಡೆದು ವಿಟ್ಲ ಪೊಲೀಸರ ವಶಕ್ಕೆ ನೀಡಿದ್ದಾರೆ.
ವೀಡಿಯೋ ರೆಕಾರ್ಡಿಂಗ್: ಮೊದಲ ಹಂತದ ತನಿಖೆ ಪೂರ್ಣ
ಉಡುಪಿ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಮ್ ಹೆಣ್ಣುಮಕ್ಕಳು ಹಿಂದು ಹುಡುಗಿಯರಿರುವಾಗ ವೀಡಿಯೋ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಮೊದಲ ಹಂತದ ತನಿಖೆಯನ್ನು ಪೂರ್ಣಗೊಳಿಸಿದ್ದು, ಅಧಿಕಾರಿಗಳು ಬೆಂಗಳೂರಿಗೆ ತೆರಳಿದ್ದಾರೆ. ತನಿಖಾಧಿಕಾರಿ(ಐಒ) ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ನೇತೃತ್ವದ ತನಿಖಾ ತಂಡ, ಈಗಾಗಲೇ ಉಡುಪಿಯ ನೇತ್ರ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ನಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಮತ್ತು ಸಂತ್ರಸ್ತೆ ಆರೋಪಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ಪ್ರತಿನಿಧಿಗಳ ಹೇಳಿಕೆ ದಾಖಲಿಸಿದೆ.
ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಆರೋಪಿ ವಿದ್ಯಾರ್ಥಿನಿಯರಿಂದ ವಶಪಡಿಸಿಕೊಂಡ ಮೂರು ಮೊಬೈಲ್ ಫೋನ್, ಸಿಸಿಟಿವಿ ದೃಶ್ಯಾವಳಿ ಸಹಿತ ಕೆಲ ತಾಂತ್ರಿಕ ವಿಚಾರಗಳ ಎಫ್ಎಸ್ಎಲ್ ವರದಿಗೆ ಸಿಐಡಿ ಅಧಿಕಾರಿಗಳು ಕಾಯುತ್ತಿದ್ದು ಈ ವರದಿ ಕೆಲವೇ ದಿನಗಳಲ್ಲಿ ಸಿಐಡಿಗೆ ಸಿಗಲಿದೆ. ಘಟನೆಯ ಬಗ್ಗೆ ಸಂತ್ರಸ್ತೆ ಅಧಿಕೃತವಾಗಿ ದೂರು ನೀಡದಿದ್ದರೂ, ಉಡುಪಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಡಿವೈಎಸ್ಪಿ ಮಟ್ಟದ ತನಿಖೆ ಪ್ರಾರಂಭಿಸಿದ್ದರು. ಆದರೆ ಬಿಜೆಪಿ ಪ್ರತಿಭಟನೆ ಮುಂದುವರಿಸಿದ ನಂತರ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.