ಹಾಸನ ಜೈಲಿನಲ್ಲೇ ನಡೆಯುತ್ತಿತ್ತು ಮಾಫಿಯಾ!
– ತಡ ರಾತ್ರಿ ಪೊಲೀಸರ ದಾಳಿ: ತನಿಖೆ ಶುರು
– ಮೊಬೈಲ್, ಗಾಂಜಾ ಸೇರಿದಂತೆ ಹಲವು ವಸ್ತು ಪತ್ತೆ
NAMMUR EXPRESS NEWS
ಹಾಸನ: ಹಾಸನ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ತಡ ರಾತ್ರಿ ದಿಢೀರ್ ದಾಳಿ ನಡೆಸಿದ ಘಟನೆ ನಡೆದಿದ್ದು, ದಾಳಿಯ ವೇಳೆ 17 ಮೊಬೈಲ್, ಚಾರ್ಜರ್, ಗಾಂಜಾ, ಬೀಡಿ ಹಾಗೂ ಸಿಗರೇಟ್ ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಜೈಲೊಳಗೆ ಮಾಫಿಯಾ ನಡೆಯುತ್ತಿತ್ತಾ ಎಂಬ ಕುತೂಹಲ ಮೂಡಿದೆ. ಹಾಸನ ನಗರ ಸಂತೇಪೇಟೆಯಲ್ಲಿರುವ ಜಿಲ್ಲಾ ಕಾರಾಗೃಹದ ಮೇಲೆ ದಾಲಿ ನಡೆಸಿದ ಪೊಲೀಸರು ಮುಂಜಾನೆವರೆಗೂ ಜೈಲಿನ ಕೊಠಡಿಗಳನ್ನು ಶೋಧ ನಡೆಸಿದ್ದಾರೆ.
ಎಸ್.ಪಿ.ಹರಿರಾಂ ಶಂಕರ್, ಹೆಚ್ಚುವರಿ ಎಸ್.ಪಿ.ತಮ್ಮಯ್ಯ ಹಾಗೂ ಇನ್ಸ್ ಪೆಕ್ಟ ರೇವಣ್ಣ ನೇತೃತ್ವದ 60 ಪೊಲೀಸ್ ಅಧಿಕಾರಿಗಳ ತಂಡ ನಡೆಸಿದ ಕಾರ್ಯಾಚರಣೆ ವೇಳೆ ಜೈಲಿನಲ್ಲಿದ್ದ ಆರೋಪಿಗಳ ಬಳಿಯಲ್ಲಿ ಒಟ್ಟು 6 ಆ್ಯಂಡ್ರಾಯ್ಡ್ ಮೊಬೈಲ್ ಗಳು, 11 ಬೇಸಿಕ್ ಮೊಬೈಲ್ ಗಳು ಹಾಗೂ ಗಾಂಜಾ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೈಲಿನೊಳಗೆ ಗಾಂಜಾ ಪೂರೈಕೆಯಾಗಿದ್ದು, ಕೆಲವು ಆರೋಪಿಗಳ ಬಳಿಯಲ್ಲಿ ಚಾಕು ಕೂಡ ಪತ್ತೆಯಾಗಿದೆ.ಇಂತಹ ವಸ್ತುಗಳು ಜೈಲಿನೊಳಗೆ ಹೋಗಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.