ಕಡಬ: ದೇವಿಯ ಒಡವೆಯನ್ನೇ ಕದ್ದ ಕಳ್ಳರು!
– ಸುಬ್ರಮಣ್ಯ: ಅಕ್ರಮ ಗೋ ಸಾಗಾಟ; ಕೇಸ್
– ಉದ್ಯೋಗಕ್ಕೆ ಹೋದವ ಜೈಲುಪಾಲು!: ಬೇಲ್ ಆಗುತ್ತಾ?
– ಹೆಬ್ರಿ: ಓವರ್ ಟೇಕ್ ವೇಳೆ ಭೀಕರ ಅಪಘಾತ
– ಕರೋನಾ ಟೆಸ್ಟ್ ಮಾಡಲು ಅಡ್ಡಿಪಡಿಸಿದವನಿಗೆ ಜೈಲು!
– ಭಟ್ಕಳ: ಕಾರು ಪಲ್ಟಿಯಾಗಿ 9 ಮಂದಿಗೆ ಗಾಯ
– ಸುಳ್ಯ: ಲಂಚ ಸ್ವೀಕಾರ ಮಾಡುತ್ತಿದ್ದಾಗ ಅರೆಸ್ಟ್!
NAMMUR EXPRESS NEWS
ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಕಡಬ ತಾಲೂಕಿನ ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನದಿಂದ ಒಡವೆ ಹಾಗೂ ಸಿಸಿ ಕ್ಯಾಮರಾ ಕಳವಾದ ಪ್ರಕರಣ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ದೇವಸ್ಥಾನದ ಅರ್ಚಕ ರವಿಪ್ರಸಾದ್ ಭಟ್ ಅವರು ಬೆಳಗ್ಗೆ ದೇವಸ್ಥಾನಕ್ಕೆ ಬಂದು ಬಾಗಿಲು ತೆರೆಯಲು ಮುಂದಾದಾಗ ದೇವಸ್ಥಾನದ ಮುಖ್ಯ ಬಾಗಿಲಿನ ಚಿಲಕವನ್ನು ಹಾನಿ ಮಾಡಿರುವುದು ಕಂಡು ಬಂದಿತ್ತು. ಬಾಗಿಲು ಸರಿಸಿ ಪರಿಶೀಲಿಸಲಾಗಿ ದೇವರ ಮೂರ್ತಿಗೆ ಹಾಕಲಾಗಿದ್ದ 35,000 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಆಭರಣಗಳನ್ನು ಹಾಗೂ ದೇವಸ್ಥಾನಕ್ಕೆ ಅಳವಡಿಸಿದ ಅಂದಾಜು 36,000 ರೂ. ಮೌಲ್ಯದ ಸಿಸಿ ಕ್ಯಾಮರಾದ ಡಿವಿಆರ್ ಹಾರ್ಡ್ಡಿಸ್ಕ್ ಹಾಗೂ ಟಿವಿ ಮಾನಿಟರ್ ಅನ್ನು ಕಳ್ಳರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ರವಿಪ್ರಸಾದ್ ಭಟ್ ನೀಡಿದ ದೂರಿನಂತೆ ಕಡಬ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಬ್ರಮಣ್ಯ: ಅಕ್ರಮ ಗೋ ಸಾಗಾಟ; ಕೇಸ್
ಸುಬ್ರಹ್ಮಣ್ಯ ಗ್ರಾಮದ ಕುಂದಲ್ಲಿ ರಸ್ತೆಯಲ್ಲಿ ಗುರುವಾರ ಸಂಜೆ ಸುಬ್ರಹ್ಮಣ್ಯ ವಾಹನ ತಪಾಸಣೆ ವೇಳೆ ಸುಬ್ರಹ್ಮಣ್ಯ ಭಾಗದಿಂದ ಬಂದ ಗೂಡ್ಸ್ ವಾಹನವನ್ನು ನಿಲ್ಲಿಸಿ, ಈ ವೇಳೆ ವಾಹನ ಚಾಲಕ ಹಾಗೂ ಇನ್ನೋರ್ವ ವ್ಯಕ್ತಿ ವಾಹನದಿಂದ ಪರಾರಿಯಾಗಿದ್ದಾರೆ. ಪರಿಶೀಲನೆ ವೇಳೆ ವಾಹನದಲ್ಲಿ ಮೂರು ದನಗಳಿವೆ. ಪೊಲೀಸರು ವಾಹನ ಹಾಗೂ ಮೂರು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಉದ್ಯೋಗಕ್ಕೆ ಹೋದವ ಜೈಲುಪಾಲು!: ಬೇಲ್ ಆಗುತ್ತಾ?
ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿ ಹ್ಯಾಕರ್ಗಳ ಕುಕೃತ್ಯದಿಂದಾಗಿ ಜೈಲು ಪಾಲಾಗಿರುವ ಕಡಬ ಮೂಲದ ಚಂದ್ರಶೇಖರ್ ಅವರ ಬಿಡುಗಡೆ ಸಾಧ್ಯತೆ ಗೋಚರಿಸಿದೆ. ಸೌದಿಯ ರಿಯಾದ್ನಲ್ಲಿ ಸದ್ಯ ಜೈಲಿನಲ್ಲಿರುವ ಕಡಬ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ಅವರ ವಿರುದ್ಧ ವಂಚನೆಯ ದೂರು ನೀಡಿದ ಮಹಿಳೆಗೆ ವಂಚನೆಯಾದ ಮೊತ್ತವನ್ನು ಪಾವತಿಸಿ ಎನ್ಒಸಿ ಪಡೆದು ಅದನ್ನು ಪೊಲೀಸ್ ಹಾಗೂ ಜೈಲಿಗೆ ನೀಡಬೇಕಾಗಿದೆ. ಈ ಕೆಲಸವನ್ನು ರಿಯಾದ್ನಲ್ಲಿ ಅವರ ಮಿತ್ರರು ಸೇರಿ ಮಾಡುತ್ತಿದ್ದು, ಎನ್ಒಸಿ ಸಿಕ್ಕಿದ ಬಳಿಕ ಬಿಡುಗಡೆಯಾಗುವ ಸಾಧ್ಯತೆಯಿದೆ.
ಮೊಬೈಲ್ ಹಾಗೂ ಸಿಮ್ ಕಾರ್ಡ್ ಪಡೆಯಲು ಕಳೆದ ನವೆಂಬರ್ನಲ್ಲಿ ಅಂಗಡಿಗೆ ಹೋದಾಗ ಅವರು ತಮ್ಮ ಹೆಬ್ಬೆಟ್ಟಿನ ಮುದ್ರೆ ನೀಡಿದ್ದರು. ಇದನ್ನೇ ಬಳಸಿಕೊಂಡು ಹ್ಯಾಕರ್ಗಳು ಅವರ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರಿಯಲ್ ಜಮೆ ಮಾಡಿ, ಅಲ್ಲಿಂದ ಬೇರೆ ದೇಶಕ್ಕೆ ಹಣ ವರ್ಗಾವಣೆ ಮಾಡಿದ್ದರು. ಮಹಿಳೆ ನೀಡಿದ ದೂರಿನಂತೆ ಚಂದ್ರಶೇಖರ್ ಬಂಧಿತರಾಗಿದ್ದರು.
ಹೆಬ್ರಿ: ಓವರ್ ಟೇಕ್ ವೇಳೆ ಭೀಕರ ಅಪಘಾತ
ಹೆಬ್ರಿಯ ತಾಲೂಕು ನಾಡ್ತಾಲು ಜಕ್ಕನಮಕ್ಕಿ ಎಂಬಲ್ಲಿ ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಬೈಕ್ ಅನ್ನು ಕಾರೊಂದು ಓವರ್ ಟೇಕ್ ಮಾಡುವಾಗ ಮುಂದಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸುಮಾರು ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಹೆಬ್ರಿ ಪಿಎಸ್ಐ ಮಹೇಶ್ ಟಿಎಂ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ. ಅಪಘಾತದಿಂದ ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಕರೋನಾ ಟೆಸ್ಟ್ ಮಾಡಲು ಅಡ್ಡಿಪಡಿಸಿದವನಿಗೆ ಜೈಲು!
ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಉಡುಪಿ ತಾಲೂಕು ಬೆಳ್ಳಂಪಳ್ಳಿ ಗ್ರಾಮದ ಕಂಬ ಮಜಲು ಪುಣೂರು ಎಂಬಲ್ಲಿ ಮಹಿಳೆಗೆ ಕೊರೋನಾ ಪಾಸಿಟಿವ್ ಬಂದ ಕಾರಣ ಆಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಗಂಡ ಸುರೇಂದ್ರ ಎಂಬಾತನ ಗಂಟಲು ದ್ರವ ಪರೀಕ್ಷೆ ನಡೆಸಲು ಮನೆಗೆ ಬಂದ ಸರ್ಕಾರಿ ನೌಕರರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿ, ಜೀವ ಬೆದರಿಕೆ ಹಾಕಿ, ಅವರ ವಾಹನವನ್ನು ಹಾನಿಗೊಳಿಸಿ ನಷ್ಟವನ್ನುಂಟುಮಾಡಿರುವ ಹಿನ್ನೆಲೆ, ಹಿರಿಯಡ್ಕ ಪೊಲೀಸ್ ಠಾಣೆಯ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
9 ತಿಂಗಳು 10 ದಿನಗಳ ಶಿಕ್ಷೆ ಹಾಗೂ 2000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.
ಕಾರು ಪಲ್ಟಿ; 9 ಜನರಿಗೆ ಗಾಯ
ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಇಕೋ ಬೀಚ್ ಸಮೀಪ ಭಟ್ಕಳ ಕಡೆಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿಕೊಂಡು ಎಡಕ್ಕೆ ತಿರುಗಿಸಿದ ಪರಿಣಾಮ ಕಾರು ಪಲ್ಟಿಯಾಗಿ ಗಟಾರದಲ್ಲಿ ಬಿದ್ದಿದೆ.
ಬೆಂಗಳೂರು ಮೂಲದ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಆಗಮಿಸಿದವರು ಕಾರು ಚಾಲಕನ ಅಜಾಗರೂಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಬೆಂಗಳೂರು ಮೂಲದ ಆದಿತ್ಯ, ಶಿಲ್ಪ, ಆಕಾಶ, ತರುಣ, ರೊಹೇಬ್, ಖುಷಿ, ಪವನಕುಮಾರ, ಯಶವಂತ ನಾಯ್ಡು, ಮೈಸುರು ಮೂಲದ ಪ್ರಿಯಾಂಕ ಗಾಯಗೊಂಡವರಾಗಿದ್ದಾರೆ.
ಸುಳ್ಯ : ಲೋಕಾಯುಕ್ತ ಬಲೆಗೆ ಬಿದ್ದ ಆರ್.ಐ
ಲಂಚ ಸ್ವೀಕಾರ ಮಾಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಸುಳ್ಯದ ಸಂಪಾಜೆ- ಅರಂತೋಡಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಮಿಯಾಸಾಹೇಬ್ ಮುಲ್ಲಾ ಎಂಬುವರನ್ನು ಬಂಧಿಸಿದ್ದಾರೆ.
ಅರಂತೋಡಿನ ಹರಿಪ್ರಸಾದ್ ಎಂಬವರು ಹಕ್ಕು ಖುಲಾಸೆಗಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕಡತ ವಿಲೇವಾರಿಗಾಗಿ ಲೆಕ್ಕಾಧಿಕಾರಿ ಲಂಚ ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಮಿಯಾಸಾಬ್ ಮುಲ್ಲಾ ಇಂದು 5000 ರೂಪಾಯಿ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೋಲಿಸರ ಬಲೆಗೆ ಬಿದ್ದಿದ್ದಾರೆ.