ಸೌಜನ್ಯ ಪ್ರಕರಣ ಮರು ತನಿಖೆ ಆಗಲ್ಲ!
ಮಹೇಶ್ ಶೆಟ್ಟಿ ತಿಮರೋಡಿಗೆ ಗನ್ ಮ್ಯಾನ್?!
– ಗೃಹ ಸಚಿವರಿಗೆ ಮಾಜಿ ಶಾಸಕ ವಸಂತ ಬಂಗೇರ ಮನವಿ: ಶೀಘ್ರದಲ್ಲಿ ಇಬ್ಬರ ನೇಮಕ
– ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು..?
NAMMUR EXPRESS NEWS
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಪಟ್ಟು ಕೊಲೆಯಾದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಗನ್ ಮ್ಯಾನ್ ನೀಡುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕ ವಸಂತ ಬಂಗೇರ ಮನವಿ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಭೇಟಿಯಾದ ಬಂಗೇರ, ರಾಜ್ಯದಲ್ಲಿ ಸೌಜನ್ಯ ಪರ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಹೋರಾಟದ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಪೊಲೀಸ್ ಇಲಾಖೆ ರಕ್ಷಣೆ ಬೇಕಾಗಿದೆ. ಈ ಹತ್ಯೆಯ ಹಿಂದೆ ಬಲಾಡ್ಯರಿದ್ದು, ಮಹೇಶ್ ಶೆಟ್ಟರ ಜೀವಕ್ಕೆ ರಕ್ಷಣೆ ಬೇಕಾಗಿದೆ. ಅವರ ಜತೆ ಮಹಿಳಾ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಆದ್ದರಿಂದ ಇವರಿಗೆ ರಕ್ಷಣೆ ನೀಡಬೇಕು ಎಂದು ಮಾಜಿ ಶಾಸಕ ವಸಂತ ಬಂಗೇರ ಕೋರಿದ್ದಾರೆ.
ಜಿಲ್ಲಾ ಎಸ್ಪಿ ಗುಪ್ತಚರ ಮಾಹಿತಿ ಸಂಗ್ರಹಿಸಿದಾಗ ಮಹೇಶ್ ಶೆಟ್ಟಿಯವರಿಗೆ ಯಾವುದೇ ಬೆದರಿಕೆ ಅಥವಾ ಜೀವಭಯ ಇರಲಿಲ್ಲ ಹಾಗಾಗಿ ತಿಮರೋಡಿ ನೀಡಿದ್ದ ಮನವಿಗೆ ಸ್ಪಂದನೆ ಸಿಕ್ಕಿರಲಿಲ್ಲ ಎಂದರು. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ತಿಮರೋಡಿ ಅವರಿಗೆ ಗನ್ ಮ್ಯಾನ್ ನೀಡಲು ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದಾರೆ. ವರದಿಗಳ ಪ್ರಕಾರ ಇಬ್ಬರು ಶಸ್ತ್ರಸಜ್ಜಿತ ಗನ್ ಮ್ಯಾನ್ ಗಳು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ರಕ್ಷಣೆಗೆ ನಿಲ್ಲಲಿದ್ದಾರೆ ಎನ್ನಲಾಗಿದೆ.
ಸೌಜನ್ಯ ಪ್ರಕರಣ ಮರು ತನಿಖೆ ಆಗಲ್ಲ, ಸರ್ಕಾರ ಏನು ಮಾಡಲು ಆಗಲ್ಲ
ಧರ್ಮಸ್ಥಳದ ಸೌಜನ್ಯ ಪ್ರಕರಣ ಮರು ತನಿಖೆ ಇಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,ಪ್ರಕರಣ ಕಾನೂನಾತ್ಮಕವಾಗಿ ಪೂರ್ಣಗೊಂಡಿದ್ದು, ಮರುತನಿಖೆ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಪರ, ವಿರೋಧ ಇದ್ದೇ ಇರುತ್ತದೆ. ಸೌಜನ್ಯ ಈ ಪ್ರಕರಣ ಮುಗಿದು ಹೋಗಿದ್ದು ಸರ್ಕಾರ ಏನೂ ಮಾಡಲು ಆಗುವುದಿಲ್ಲ. ಮರು ತನಿಖೆ ವಿಚಾರ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.