ಒಂದೇ ಬೈಕಲ್ಲಿ ಒಂದೇ ಕುಟುಂಬದ 5 ಮಂದಿ ಸಾವು!
– ಲಾರಿ ಡಿಕ್ಕಿಯಾಗಿ ಐವರು ಸಾವು: ಕಲಬುರಗಿಯಲ್ಲಿ ನಡೆದ ಘಟನೆ
– ಲಾರಿ ಹತ್ತಿ ಇಬ್ಬರು ಮಹಿಳೆಯರ ದುರ್ಮರಣ
NAMMUR EXPRESS NEWS
ಕಲಬುರಗಿ: ಒಂದು ಬೈಕ್ನಲ್ಲಿ ಮೂರು ಜನರು ತಿರುಗಾಡುವುದನ್ನೇ ಭಾರತದಲ್ಲಿ ನಿಷೇಧಿಸಲಾಗಿದೆ. ದೇಶದ ಅನೇಕ ನಗರಗಳಲ್ಲಿ ಬೈಕ್ ನಲ್ಲಿ ಕುಳಿತುಕೊಳ್ಳುವ ಇಬ್ಬರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೆ ರಸ್ತೆ ಅಪಘಾತಗಳು ಸಂಭವಿಸಿ ಜೀವಗಳು ಬಲಿಯಾಗುತ್ತಿವೆ. ಹೀಗಿರುವಾಗ ಒಂದೇ ಬೈಕ್ನಲ್ಲಿ ಐವರು ಸಂಚಾರ ಮಾಡಿ, ಅಕಸ್ಮಾತ್ ಅಪಘಾತ ಸಂಭವಿಸಿದರೆ ಏನಾಗಬಹುದು? ಕಲಬುರಗಿಯಲ್ಲಿ ನಡೆದ ಘಟನೆ ಸಂಚಾರ ನಿಯಮವನ್ನು ಮತ್ತೆ ಎತ್ತಿಹಿಡಿದಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಳ್ಳೋಳ್ಳಿ ಕ್ರಾಸ್ ಬಳಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ದುದನಿಯಿಂದ ಅಫಪೂರ ಕಡೆಗೆ ಬರುತ್ತಿದ್ದ ಬೈಕ್ಗೆ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಬೈಕ್ನಲ್ಲಿ ಕುಳಿತಿದ್ದ ಒಂದೇ ಕುಟುಂಬದ ಐದು ಮಂದಿ ಸಾವನ್ನಪ್ಪಿದ್ದಾರೆ. ನೇಪಾಳ ಮೂಲದ ಈ ಕುಟುಂಬವು ಹಲವು ವರ್ಷಗಳಿಂದ ಅಫಜಲಪುರದಲ್ಲಿ ನೆಲೆಸಿದ್ದು, ಅಲ್ಲಿ ಫಾಸ್ಟ್ ಫುಡ್ ಹೋಟೆಲ್ ಇಟ್ಟುಕೊಂಡಿದ್ದರು. ಹಳ್ಳೋಳ್ಳಿ ಕ್ರಾಸ್ ಬಳಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಘಟನಾ ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಾದಚಾರಿ ಮಹಿಳೆಯರ ಮೇಲೆ ಹರಿದ ಲಾರಿ: ಇಬ್ಬರು ಮೃತ್ಯು
ಆಸ್ಪತ್ರೆಗೆ ಹೋಗಲು ರಸ್ತೆ ದಾಟುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಯಮಸ್ವರೂಪಿ ಲಾರಿಯೊಂದು ಹರಿದ ಪರಿಣಾಮ ಭೀಕರವಾಗಿ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯ ಹೊಸೂರು ರಸ್ತೆಯ ಬೊಮ್ಮಸಂದ್ರದ ಬಳಿ ನಡೆದಿದೆ.
ನಾರಾಯಣ ಹೃದಯಾಲಯ ಆಸ್ಪತ್ರೆ ಮುಂಭಾಗದಲ್ಲಿ ಇಬ್ಬರು ಮಹಿಳೆಯರ ರಸ್ತೆ ದಾಟುತ್ತಿದ್ದರು. ಈ ವೇಳೆ ಏಕಾಏಕಿ ಬಂದ ಲಾರಿ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ವೇಗವಾಗಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೇ ಲಾರಿಯ ಚಕ್ರಗಳು ಮಹಿಳೆಯರ ದೇಹದ ಮೇಲೆ ಹರಿದಿವೆ. ಪರಿಣಾಮ ಮಹಿಳೆಯರ ದೇಹಗಳು ಛಿದ್ರಗೊಂಡಿವೆ. ಒಂದು ಮಹಿಳೆಯ ದೇಹ ರಸ್ತೆಗೆ ಅಪ್ಪಚ್ಚಿಯಾಗಿದ್ದು, ಇನ್ನೊಂದು ಮಹಿಳೆಯ ಅರ್ಧ ದೇಹವೇ ತುಂಡಾಗಿ ಹೋಗಿದೆ. ಈ ಮಹಿಳೆಯರು ವೈಟ್ ಫೀಲ್ಡ್ನಿಂದ ಬಂದಿದ್ದರೆಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದಾದ ಬಳಿಕ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು, ಲಾರಿ ಚಾಲಕನನ್ನು ವಶಕ್ಕೆ ಪಡೆದರು.