ಗೂಗಲ್ ಮ್ಯಾಪ್ ನದಿಗೆ ಇಳಿಸಿತು!
– ನೀರಿನಲ್ಲಿ ಕೊಚ್ಚಿ ಹೋದ ಕಾರು, ಇಬ್ಬರ ರಕ್ಷಣೆ
– ರಸ್ತೆ ಮಧ್ಯೆ ಲಾಕ್ ಆದ ಟ್ಯಾಂಕರ್
NAMMUR EXPRESS NEWS
ಕಾಸರಗೋಡು: ಗೂಗಲ್ ಮ್ಯಾಪ್ ಹಾಕಿ ಪ್ರಾಯಾಣಿಸುತ್ತಿದ್ದಾಗ ಕಾರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಕುತ್ತಿಕೋಲ್ ಸಮೀಪ ನಡೆದಿದ್ದು, ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿದ್ದ ಅಂಬಲತ್ತರದ ತಸ್ರಿಫ್ ( ೩೬)ಅಬ್ದುಲ್ ರಶೀದ್ ( ೩೮) ರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕುತ್ತಿಕೋಲ್ ಪಳ್ಳಂಜಿಯಲ್ಲಿ ಹೊಳೆಯ ಸೇತುವೆ ಮೂಲಕ ತೆರಳುತ್ತಿದ್ದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಗುರುವಾರ ಬೆಳಿಗ್ಗೆ ಅರಣ್ಯ ಪ್ರದೇಶದ ಪಳ್ಳಂಜಿ- ಪಾಂಡಿ ರಸ್ತೆಯ ತಡೆಗೋಡೆ ಇಲ್ಲದ ಸೇತುವೆ ಮೂಲಕ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ತಸ್ರಿಫ್ ಮತ್ತು ರಶೀದ್ ಉಪ್ಪಿನಂಗಡಿಗೆ ಹೋಗಬೇಗಿದ್ದು, ಇದಕ್ಕಾಗಿ ಗೂಗಲ್ ಮ್ಯಾಪ್ ಹಾಕಿ ಕಾರನಲ್ಲಿ ಪ್ರಯಾಣಿಸುತ್ತಿದ್ದರು. ಹೊಳೆಯಲ್ಲಿ ಸೇತುವೆ ಮೇಲಿಂದ ನೀರು ಹರಿದು ಹೋಗುತ್ತಿತ್ತು. ಸೇತುವೆಗೆ ಇಕ್ಕೆಲಗಳಲ್ಲಿ ತಡೆಗೋಡೆ ಇಲ್ಲದಿರುವುದನ್ನು ಅರಿಯದೆ ಇವರು ಮುಂದಕ್ಕೆ ಸಾಗುತ್ತಿದ್ದಾಗ ಸೇತುವೆಯ ಬದಿಗೆ ಬಂದು ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು ಕೊಚ್ಚಿಕೊಂಡು ಹೋಗಿದ್ದು , ಅಲ್ಪ ದೂರಕ್ಕೆ ಸಾಗಿ ಬದಿಯ ಮರಕ್ಕೆ ಬಡಿದು ನಿಂತಿದೆ. ಇಬ್ಬರೂ ಕಾರಿನಿಂದ ಹೊರಬಂದು ಮರಕ್ಕೆ ಹಿಡಿದು ನಿಂತಿದ್ದರು. ಸ್ಥಳೀಯರು ಗಮನಿಸಿ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ,ಬಳಿಕ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಸ್ಥಳೀಯರು ಇಬ್ಬರನ್ನು ರಕ್ಷಿಸಿದರು.
ಕಂಟೈನರ್ ರಸ್ತೆ ಮಧ್ಯೆ ಸಿಲುಕಿ ಪರದಾಟ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅನಾಹುತ ಜೋರಾಗುತ್ತಿದ್ದು, ಅಲ್ಲಲ್ಲಿ ದುರ್ಘಟನೆಗಳು ಸಂಭವಿಸುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಮಳೆಯಿಂದಾಗಿ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ.
ಈ ನಡುವೆ ಬೆಂಗಳೂರು ಕಡೆಯಿಂದ ಆಗಮಿಸಿದ ಕಂಟೈನರ್ ಲಾರಿಯೊಂದು, ಉಪ್ಪಿನಂಗಡಿಯಿಂದ ಸರಪಾಡಿ ಮಣಿಹಳ್ಳ ರಸ್ತೆಯಲ್ಲಿ ಅಲ್ಲಿಪಾದೆ ಸಮೀಪದ ಅಣೇಜ ತಿರುವಿನಲ್ಲಿ ಸಿಲುಕಿ ಹಾಕಿಕೊಂಡು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು.
ಬಿಜಾಪುರ ಕಡೆಯ ಈ ಲಾರಿಯು ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಆಗಮಿಸಿ, ಉಪ್ಪಿನಂಗಡಿಯಿಂದ ಮಂಗಳೂರು ಕಡೆ ತೆರಳಲು ಚಾಲಕ ಗೂಗಲ್ ಮ್ಯಾಪ್ ಹಾಕಿದ ಸಂದರ್ಭ ಆತನಿಗೆ ಉಪ್ಪಿನಂಗಡಿ ಅಜಿಲಮೊಗರು ಮಣಿಹಳ್ಳ ರಸ್ತೆಯ ಮೂಲಕ ಸಾಗಿ, ಮಂಗಳೂರಿಗೆ ತೆರಳುವುದಕ್ಕೆ ಸೂಕ್ತ ರೂಟ್ ಎಂಬುದಾಗಿ ಸೂಚಿಸಿದೆ.
ಪ್ರಸ್ತುತ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಗೂಗಲ್ ಮ್ಯಾಪ್ ಈ ರಸ್ತೆಯನ್ನು ಸೂಚಿಸುತ್ತಿದೆ. ಆದರೆ ಈ ರಸ್ತೆಯು ಘನ ವಾಹನ ಸಾಗಾಟಕ್ಕೆ ಸೂಕ್ತವಾಗಿಲ್ಲ. ಅಣೇಜದಲ್ಲಿ ಅಪಾಯಕಾರಿ ತಿರುವು ಇರುವುದರಿಂದ ಒಂದೇ ಬಾರಿಗೆ ವಾಹನ ತಿರುವು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಪ್ರಸ್ತುತ ಈ ಲಾರಿಯು ಮುಂದಕ್ಕೂ ಚಲಿಸುವುದಕ್ಕೆ ಸಾಧ್ಯವಾಗದೆ ಹಿಂದಕ್ಕೂ ಬರಲಾಗದೆ ದಾರಿ ಮಧ್ಯೆ ಸಿಲುಕಿಕೊಂಡಿತ್ತು.