ಶಿಕಾರಿಪುರ: ಆಂಬುಲೆನ್ಸ್-ಬೈಕ್ ಅಪಘಾತ: ಮೂವರ ಸಾವು
– ಭದ್ರಾವತಿ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ
– ಭದ್ರಾವತಿ: 13 ಜನರ ಅಂತ್ಯಕ್ರಿಯೆ: ಊರಲ್ಲಿ ನೀರವ ಮೌನ
– ಹೊಸ ಟಿಟಿ 13 ಜನರ ಕನಸು ಕಸಿಯಿತು!
– ಇಂಡಿಯಾ ಟೀಮಲ್ಲಿ ಆಡಿದ್ದ ಯುವತಿ ಕೂಡ ಸಾವು
NAMMUR EXPRESS NEWS
ಶಿವಮೊಗ್ಗ: ಹಾವೇರಿಯಲ್ಲಿ ಭದ್ರಾವತಿ ಮೂಲದ 13 ಮಂದಿ ಅಪಘಾತಕ್ಕೆ ಬಲಿಯಾದ ಘಟನೆ ನಡುವೆ ಆಂಬುಲೆನ್ಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ ಬಳಿ ನಡೆದಿದೆ. ಮೃತರನ್ನು ಪ್ರಸನ್ನ (25), ಕಾರ್ತಿಕ್ (27) ಮತ್ತು ಅಜಯ್ (25) ಎಂದು ಗುರುತಿಸಲಾಗಿದೆ. ಮೃತರು ಹೊಸ ಜೋಗದ ನಿವಾಸಿಗಳು ಎಂದು ವರದಿಯಾಗಿದೆ.
ಆಂಬುಲೆನ್ಸ್ ಶಿವಮೊಗ್ಗದಿಂದ ಹಾವೇರಿಗೆ ತೆರಳುತ್ತಿತ್ತು. ಬೈಕ್ ಶಿಕಾರಿಪುರದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
– 13 ಮೃತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಹಾವೇರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದು, 13 ಮೃತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಗೆ 13 ಮೃತದೇಹಗಳನ್ನು ರವಾನಿಸಿದ್ದು, ಈ ವೇಳೆ ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು, ಇಲ್ಲದಿದ್ದರೆ ಶವಗಳನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಸಂಬಂಧಿಕರು, ಗ್ರಾಮಸ್ಥರು ಆಗ್ರಹಿಸಿದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಶುಕ್ರವಾರ ಮುಂಜಾನೆ ಭೀಕರ ಅಪಘಾತ ನಡೆದು 13 ಮಂದಿ ಸಾವನ್ನಪ್ಪಿದ್ದರೂ ಜಿಲ್ಲಾಸ್ಪತ್ರೆಗೆ ಯಾರೂ ಜನಪ್ರತಿನಿಧಿಗಳು ಬಾರದ ಹಿನ್ನೆಲೆಯಲ್ಲಿ ಸಂಬಂಧಿಕರು, ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದರು.
– ಸಚಿವ ಶಿವಾನಂದ ಪಾಟೀಲ್ ವೈಯಕ್ತಿಕ ನೆರವು ತಲಾ 50 ಸಾವಿರ ಪರಿಹಾರ
ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 13 ಜನರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ವೈಯಕ್ತಿಕವಾಗಿ ತಲಾ 50 ಸಾವಿರ ಪರಿಹಾರ ನೀಡಿದ್ದಾರೆ. 13 ಜನರಿಗೆ 6.50 ಲಕ್ಷ ವೈಯಕ್ತಿಕ ಪರಿಹಾರ ನೀಡಿದ್ದಾರೆ.
ಭಾರತ ತಂಡಕ್ಕೆ ಆಡಿದ್ದ ಮಾನಸ ಇನ್ನು ನೆನಪು ಮಾತ್ರ
ಹಾವೇರಿಯಲ್ಲಿ ನಡೆದ ಅಪಘಾತದಲ್ಲಿ ಮೃತರಾದವರನ್ನ ನೆನೆದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಎಮ್ಮೆಹಟ್ಟಿ ಗ್ರಾಮದಲ್ಲಿ ನೀರವ ಮೌನ ಮನೆ ಮಾಡಿದೆ. ಎಮ್ಮೆಹಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆದಿದೆ. ಮಾನಸ ಎಂಬ ಯುವತಿ ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದರು. ಅದಕ್ಕಾಗಿ ಇನ್ನಿಲ್ಲದ ಶ್ರಮವಹಿಸುತ್ತಿದ್ದ ಅವರು ಬೆಂಗಳೂರಿನಲ್ಲಿ ಐಎಎಸ್ಗಾಗಿ ತರಭೇತಿ ಪಡೆಯುತ್ತಿದ್ದರು. ಅಂಧತ್ವವನ್ನು ಮೀರಿ ಸಾಧನೆ ಮಾಡುತ್ತಿದ್ದರು. ಭಾರತದ ಅಂಧರ ಪುಟ್ ಬಾಲ್ ತಂಡ ಕ್ಯಾಪ್ಟನ್ ಆಗಿದ್ದ ಮಾನಸ ಈಗಾಗಲೇ ಹಲವು ಪ್ರಶಸ್ತಿಗಳನ್ನ ಪಡೆದಿದ್ದರು. ದೇವಸ್ಥಾನಕ್ಕೆ ಹೋಗುವ ಕಾರಣಕ್ಕಾಗಿ ಅವರು ಎಮ್ಮೆಹಟ್ಟಿ ಗ್ರಾಮಕ್ಕೆ ಕಳೆದ ಭಾನುವಾರ ಬಂದಿದ್ದರು. ಆ ಬಳಿಕ ಟಿಟಿಯಲ್ಲಿ ದೇವರ ದರ್ಶನಕ್ಕೆ ತೆರಳಿದ್ದರು.