ಅಡಿಕೆ ಬೆಳೆಗಾರರ ಪರವಾಗಿ ಬ್ರಿಜೇಶ್ ಚೌಟ ಧ್ವನಿ!
– ಕೆಡಿಪಿ ಸಭೆಯಲ್ಲಿ ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರಕ್ಕೆ ಅಗ್ರಹ
– ಬೆಳ್ತಂಗಡಿ ಮೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ
NAMMUR EXPRESS NEWS
ಮಂಗಳೂರು: ಅಡಿಕೆ ಬೆಳೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗದಿಂದಾಗಿ ತೊಂದರೆಗೊಳಗಾದ ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಮೆಸ್ಕಾಂ ನಿರ್ಲಕ್ಷದಿಂದ ವಿದ್ಯುತ್ ಸ್ಪರ್ಶಕ್ಕೆ ಬಲಿಯಾದ ಪ್ರತೀಕ್ಷ ಪ್ರಕರಣವನ್ನು ಸಭೆಯಲ್ಲಿ ಪ್ರಸ್ತಾಪಿಸಿ, ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ಎರಡು ಮೂರು ಬಾರಿ ತಂದರೂ ಕ್ರಮ ವಹಿಸದೇ ನಿರ್ಲಕ್ಷದ ಕಾರಣಕ್ಕೆ ಬಲಿಯಾದ ಪ್ರತೀಕ್ಷಾ ಕುಟುಂಬಕ್ಕೆ ಮಾನವೀಯ ದೃಷ್ಟಿಯಿಂದ ಹೆಚ್ಚಿನ ಪರಿಹಾರದ ನೆರವು ನೀಡಬೇಕು ಹಾಗೂ ಈ ದುರ್ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಹೊಣೆ ಮಾಡಿ ಅವರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಂಸದರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು ತನಿಖೆ ನೆಡೆಸಿ ಹತ್ತು ದಿನಗಳೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.