ಸಿಗಂದೂರಲ್ಲಿ ತೆಪ್ಪ ದುರಂತ: ಮೂವರ ಶವ ಪತ್ತೆ!
– ಊಟಕ್ಕೆ ಹೋಗಿ ಶರಾವತಿ ಹಿನ್ನೀರಿನಲ್ಲಿ ದುರಂತ
– ಕುಟುಂಬದ ಆಕ್ರಂದನ: ಮರಣೋತ್ತರ ಪರೀಕ್ಷೆ
– ಮೂಡಿಗೆರೆ: ಚಿಕಿತ್ಸೆಗೆ ಬಂದಿದ್ದ ರೋಗಿ ಸಾವು: ಪ್ರತಿಭಟನೆ
NAMMUR EXPRESS NEWS
ಸಾಗರ: ಸಾಗರ ತಾಲೂಕಿನ ಸಿಗಂದೂರು ಸಮೀಪದ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ, ತೆಪ್ಪ ಮುಳುಗಿ ಮೂವರು ಯುವಕರು ನಾಪತ್ತೆಯಾದ ಘಟನೆ ನ.13 ಬುಧವಾರ ಸಂಜೆ ನಡೆದಿತ್ತು. ಇದೀಗ ಗುರುವಾರ ಮೂವರ ಶವ ಪತ್ತೆಯಾಗಿದೆ.
ಸುಮಾರು 80 ಅಡಿಯಲ್ಲಿ ಶವ ಪತ್ತೆಯಾಗಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ನೀಡಲಾಗುತ್ತದೆ.ಸಂದೀಪ್ (30), ರಾಜು (28) ಹಾಗೂ ಚೇತನ್ (28) ಮೃತರು. ಘಟನೆ ವೇಳೆ ತೆಪ್ಪದಲ್ಲಿದ್ದ ಇಬ್ಬರು ಯುವಕರು ಈಜಿಕೊಂಡು ದಡ ಸೇರುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ. ಸಿಗಂದೂರು, ಹುಲಿದೇವರಬನ, ಗಿಣಿವಾರ ಮೂಲದವರಾಗಿದ್ದಾರೆ. ತೆಪ್ಪದಲ್ಲಿ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಆಗಮಿಸುವ ವೇಳೆ ದುರಂತ ಸಂಭವಿಸಿದೆ. ನಾಪತ್ತೆಯಾದ ಮೂವರಿಗೆ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ. ವಿನಯ ಮತ್ತು ಯಶವಂತ ಈಜಿ ದಡ ಸೇರಿದ್ದಾರೆ. ಬುಧವಾರ ಸಂಜೆ ಕತ್ತಲಾದ್ದರಿಂದ ಮುಳುಗಿದವರಿಗಾಗಿ ಹುಡುಕಾಟ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಅವರಿಗಾಗಿ ಹುಡುಕಾಟ ಆರಂಭವಾಗಿದ್ದು ಜಿಟಿ ಸತ್ಯನಾರಾಯಣ್ರವರು ತಿಳಿಸಿದಂತೆ ಸ್ಥಳದಲ್ಲಿ ಈಶ್ವರ್ ಮಲ್ಪೆ ಶವ ಪತ್ತೆ ಮಾಡಿದ್ದಾರೆ.
– ಮೂಡಿಗೆರೆ: ಚಿಕಿತ್ಸೆಗೆ ಬಂದಿದ್ದ ರೋಗಿ ಸಾವು: ಆಸ್ಪತ್ರೆ ಎದುರು ಪ್ರತಿಭಟನೆ
ಮೂಡಿಗೆರೆ: ಎಂಜಿಎಂ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ರೋಗಿಯೊಬ್ಬರು ಮೃತಪಟ್ಟಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ. ಚಿಕಿತ್ಸೆಗೆಂದು ಬಂದಿದ್ದ ಮೂಡಿಗೆರೆ ತಾಲ್ಲೂಕಿನ ಗುತ್ತಿ ಗ್ರಾಮದ ಸುಂದರೇಶ್ (31) ಮೃತಪಟ್ಟಿದ್ದು, ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ ಪರಿಣಾಮವಾಗಿ ಸುಂದರೇಶ್ ಮೃತಪಟ್ಟಿದ್ದಾರೆ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ನಮಗೆ 1 ಗಂಡು 1 ಹೆಣ್ಣು ಚಿಕ್ಕ ಮಕ್ಕಳಿದ್ದಾರೆ. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದೆವು. ನನ್ನ ಪತಿಗೆ ಬೆಳಿಗ್ಗೆ 4 ಕ್ಕೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು, ಎದೆ ಭಾಗದಲ್ಲಿ ಉರಿ ಕಾಣಿಸಿಕೊಂಡು ಅಸ್ವಸ್ಥರಾದಾಗ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದೇನೆ. ಆಸ್ಪತ್ರೆಯ ಒಳಗೆ ಹೋಗಲು ನನ್ನ ಪತಿಗೆ ಸಾಧ್ಯವಾಗಲಿಲ್ಲ. ವೀಲ್ ಚೇರ್ ತರಲು ಸಿಬ್ಬಂದಿ ಬಳಿ ಕೇಳಿಕೊಂಡಾಗ ಅವರು ವೀಲ್ ಚೇರ್ ತರಲಿಲ್ಲ. ಉಡಾಫೆಯಿಂದ ನನ್ನ ಪತಿಯ ಕುತ್ತಿಗೆ ಪಟ್ಟಿ ಹಿಡಿದು ಆಸ್ಪತ್ರೆಯ ಒಳ ಭಾಗಕ್ಕೆ ದೂಡಿದ್ದಾರೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಇರಲಿಲ್ಲ. ದಾದಿಯೊಬ್ಬರು 4 ಮಾತ್ರೆಯನ್ನು ನೀಡಿ ಅದರಲ್ಲಿ ಒಂದನ್ನು ನನ್ನ ಪತಿಗೆ ಕುಡಿಸಿದ್ದಾರೆ. ಬೆಳಿಗ್ಗೆ 10 ಗಂಟೆಯವರೆಗೆ ವೈದ್ಯರಾಗಲಿ ಅಥವಾ ಸಿಬ್ಬಂದಿಗಳಾಗಲಿ ಯಾರೊಬ್ಬರೂ ನನ್ನ ಪತಿಯ ಬಳಿ ಸುಳಿಯಲಿಲ್ಲ. ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ನನಗೂ ಆರೋಗ್ಯ ಸರಿಯಿಲ್ಲ. ನನ್ನನ್ನು ಮತ್ತು ನನ್ನ ಮಕ್ಕಳನ್ನು ಸಾಕಲು ಯಾರು ಇಲ್ಲದೆ ಬೀದಿಗೆ ಬಿದ್ದಿದ್ದೇವೆ ಎಂದು ಮೃತ ಸುಂದರೇಶ್ ಅವರ ಪತ್ನಿ ರೇಣುಕಾ ಹೇಳಿದರು.